More

    ರಾಮಕೃಷ್ಣಾಶ್ರಮದಲ್ಲಿ ಯುವ ಸಮ್ಮೇಳನ, ಉಪನ್ಯಾಸ

    ಶಿವಮೊಗ್ಗ:ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ 19ನೇ ವಾರ್ಷಿಕೋತ್ಸವದ ಅಂಗವಾಗಿ ಜೂ.20ರಿಂದ ಮೂರು ದಿನ ಯುವ ಸಮ್ಮೇಳನ ಹಾಗೂ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಶ್ರೀ ವಿನಯಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.

    2005ರಲ್ಲಿ ಆರಂಭವಾದ ಆಶ್ರಮ ಆಧ್ಯಾತ್ಮ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಇದುವರೆಗೂ ಅನೇಕ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಜೂ.20ರ ಬೆಳಗ್ಗೆ 10ಕ್ಕೆ ಆಶ್ರಮದ ಪ್ರಾರ್ಥನಾ ಮಂದಿರದಲ್ಲಿ ಯುವ ಸಮ್ಮೇಳನವನ್ನು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸ್ವಾಮೀಜಿ ಉದ್ಘಾಟಿಸಿ, ಉಜ್ವಲ ಭಾರತೀಯತೆ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
    ಸಂಸದ ಬಿ.ವೈ.ರಾಘವೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಅನುಭವ ಹಂಚಿಕೊಳ್ಳಲಿದ್ದಾರೆ. ಶ್ರೀ ಪ್ರಕಾಶಾನಂದಜೀ, ಶ್ರೀ ಜ್ಞಾನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
    ಅಂದು ಸಂಜೆ 5.30ಕ್ಕೆ ವಿನೋಬನಗರ ವಿಪ್ರ ಟ್ರಸ್ಟ್‌ನಲ್ಲಿ ಜರುಗುವ ರಾಮಕೃಷ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀ ನಿರ್ಭಯಾನಂದ ಸ್ವಾಮೀಜಿ ಸಾಧಕ ಚಕ್ರವರ್ತಿ ಶ್ರೀ ರಾಮಕೃಷ್ಣ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಹೇಳಿದರು.
    21ರ ಸಂಜೆ 5.30ಕ್ಕೆ ವಿಪ್ರ ಟ್ರಸ್ಟ್‌ನಲ್ಲಿ ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶಾರದೇಶಾನಂದಜೀ ಅವರು ಶಾರದಾ ದೇವಿ ಅವರ ಜೀವನ ಮತ್ತು ಸಾಧನೆಯ ಕುರಿತು ಪ್ರವಚನ ನೀಡಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
    22ರ ಸಂಜೆ 5.30ಕ್ಕೆ ವಿಪ್ರ ಟ್ರಸ್ಟ್‌ನಲ್ಲಿ ರಾಣೆಬೆನ್ನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜೀ ಅವರು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಸಂದೇಶಗಳ ಬಗ್ಗೆ ಮಾತನಾಡುವರು. ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಈ ಅವಧಿಯಲ್ಲಿ ಪ್ರತಿದಿನ ವೇದಘೋಷ, ಲಲಿತಾ ಸಹಸ್ರನಾಮ ಪಾರಾಯಣ, ಭಾಗವನ್ನಾಮ ಸಂಕೀರ್ತನೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ಆಶ್ರಮದ ಭಕ್ತರಾದ ಡಾ. ಚಿಕ್ಕಸ್ವಾಮಿ, ಸೂರ್ಯನಾರಾಯಣ, ರೇಣುಕೇಶ್, ನಾಗೇಂದ್ರ ಶಿರೂರ್‌ಕರ್, ಶ್ರೀಕಾಂತ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts