More

    ಮಾದಕ ವ್ಯಸನ ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಹಿರಿದು ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ನ್ಯಾ.ಶೋಭಾ ಹೇಳಿಕೆ

    ಮಂಗಳೂರು: ಮಾದಕ ವ್ಯಸನ ತಡೆಗಟ್ಟುವಲ್ಲಿ ಹೆತ್ತವರಿಗಿಂತಲೂ ಶಿಕ್ಷಕರ ಪಾತ್ರ ಹಿರಿದು ಎಂದು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸದಸ್ಯ ಕಾರ‌್ಯದರ್ಶಿ ಶೋಭಾ ಬಿ.ಜಿ. ಹೇಳಿದರು.


    ದ.ಕ. ಜಿ.ಪಂ. ನೇತ್ರಾವತಿ ಸಂಭಾಗಣದಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಪುನರ್‌ವಸತಿ ಕೇಂದ್ರ ಬಜಾಲ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಉದ್ಘಾಟಿಸಿ ಮಾತನಾಡಿದರು.


    ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳ ಚಲನವಲನಗಳಲ್ಲಿ ಬದಲಾವಣೆಯನ್ನು ಶಿಕ್ಷಕರು ಸುಲಭವಾಗಿ ಗುರುತಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ಭಾಗದ ಶಾಲೆ, ಕಾಲೇಜುಗಳಲ್ಲಿ ಹದಿಹರೆಯದ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಬಹಳ ಕಳವಳಕಾರಿ. ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಗಳೇ ಇಂತಹ ದುಶ್ಚಟಕ್ಕೆ ಗುರಿಯಾಗಿ ಜೈಲು ಸೇರುತ್ತಿರುವುದು ಬಹಳ ಬೇಸರ ತರಿಸುತ್ತದೆ ಎಂದರು.


    ಮುಖ್ಯ ಅತಿಥಿಯಾಗಿ ಜಿಲ್ಲಾ ವೈದ್ಯಕೀಯ ಅಧೀಕ್ಷರಾದ ಡಾ.ಜೆಸಿಂತಾ ಡಿಸೋಜ ಮಾತನಾಡಿ, ಸಾರ್ವಜನಿಕರಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಜತೆಗೆ ಯಾರು ವ್ಯಸನಿಗಳಿದ್ದಾರೋ ಅವರಲ್ಲಿ ಸ್ವಯಂ ನಿಗ್ರಹ ಜತೆಗೆ ಜಾಗೃತಿಯ ಮನೋಭಾವ ಬೆಳೆದು ಬರಬೇಕು. ಇದಕ್ಕೆ ಬಲಿಯಾದರೆ ಬರೀ ಒಬ್ಬ ಮಾತ್ರವಲ್ಲ ಆತನ ಕುಟುಂಬ, ಸಮಾಜ ಎಲ್ಲಕ್ಕೂ ಸಮಸ್ಯೆಯಾಗುತ್ತದೆ ಎಂದರು.


    ಜಿಲ್ಲಾ ಮಹಿಳಾ ಮತ್ತು ಪುನರ್‌ವಸತಿ ಕೇಂದ್ರ ಬಜಾಲ್ ಮಂಗಳೂರು ಇದರ ಆಡಳಿತಾಧಿಕಾರಿ ಲಿಡಿಯಾ ಲೋಬೋ ಮಾತನಾಡಿ, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. 15ರಿಂದ 30 ಕೆಲವೊಂದು ಬಾರಿ ಅದಕ್ಕಿಂತ ಕೆಳಗಿನ ವಯಸ್ಸಿನವರು ಇಂತಹ ದುಶ್ಚಟಕ್ಕೆ ಗುರಿಯಾಗುತ್ತಿದ್ದಾರೆ ಎಂದರು.

    ಶಾಲಾ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಆಪ್ತ ಸಮಾಲೋಚನೆಗಳನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ಮಾಡಲಾಗುತ್ತಿದ್ದು, ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ನಿರಂತರ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.


    ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ಅಧ್ಯಕ್ಷತೆ ವಹಿಸಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಮಾದಕ ವ್ಯಸನ ಹಾಗೂ ಅಕ್ರಮ ಕಳ್ಳಸಾಗಾಣಿಕೆಯ ನಿಯಂತ್ರಣದಲ್ಲಿ ಬರೀ ಪೊಲೀಸ್ ಇಲಾಖೆ ಮಾತ್ರವಲ್ಲ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇಲಾಖೆಯ ಜತೆಯಲ್ಲಿ ಕೈಜೋಡಿಸಬೇಕು ಎಂದರು.
    ಈ ಸಂದರ್ಭ ಲಿಂಕ್ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಅಧ್ಯಕ್ಷ ಡಾ.ಸತೀಶ್ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ, ಪಿಯುಡಿಡಿ ಜಯಣ್ಣ, ಡಿಡಿಪಿಐ ವೆಂಕಟೇಶ ಎಸ್ ಪಟೆಗಾರ್, ಪದವಿ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಶ್ರೀದೇವಿ ಪ್ರಸಾದ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ‌್ಯಕ್ರಮ ಅಧಿಕಾರಿ ಡಾ. ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.


    ಡಿಎಚ್‌ಒ ಡಾ.ಎಚ್.ಆರ್.ತಿಮ್ಮಯ್ಯ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ಕಾರ‌್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts