More

    ಅತ್ತೆಯಾದವಳು ಅಮ್ಮನಂತಾದಾಗ…

    ಅತ್ತೆಯಾದವಳು ಅಮ್ಮನಂತಾದಾಗ… ತಾಯಿ ಮಗ ಇಬ್ಬರೇ ಇದ್ದ ಒಂದು ಸಂಸಾರದಲ್ಲಿ ಮಗನಿಗೆ ಮದುವೆಯಾಗಿ ಮನೆಗೆ ಸೊಸೆಯೊಬ್ಬಳು ಬರುತ್ತಾಳೆ. ಅತ್ತೆ ಸೊಸೆ ಇಬ್ಬರೂ ಅಪರಿಚಿತರು. ಸಹಜವಾಗಿಯೇ ಹೊಂದಿಕೊಳ್ಳಲಾಗದೆ ಹೋದರು. ಮನೆವಾರ್ತೆಯನ್ನು ಅಷ್ಟಾಗಿ ತಿಳಿದುಕೊಳ್ಳದ ಸೊಸೆ ಮಾಡಿದ ಪ್ರತಿಯೊಂದು ಕೆಲಸದಲ್ಲಿಯೂ ತಪ್ಪನ್ನು ಕಂಡು ಹಿಡಿಯುವುದು ಅತ್ತೆಯ ದಿನನಿತ್ಯದ ಕೆಲಸವಾಯಿತು. ಇದನ್ನು ಸಹಿಸಿಕೊಳ್ಳಲಾಗದ ಸೊಸೆಗೆ ತನ್ನ ಅತ್ತೆಯನ್ನು ಸಾಯಿಸಿಬಿಟ್ಟರೆ ಈ ಕಷ್ಟದಿಂದ ಪಾರಾಗಿ ತಾನು ತನ್ನ ಗಂಡನ ಜೊತೆ ಸುಖವಾಗಿ ಇರಬಹುದೆಂಬ ಕೆಟ್ಟ ಯೋಚನೆ ಮನಸ್ಸಿನಲ್ಲಿ ಮೂಡಿತು. ಆದರೆ ತನ್ನ ಅತ್ತೆಯನ್ನು ಸಾಯಿಸುವುದಾದರೂ ಹೇಗೆ ಎಂಬುದು ತಿಳಿಯದಾದಾಗ ಸಹಜವಾಗಿಯೇ ಸೊಸೆ ತವರಿಗೆ ಹೋಗಿ ತನ್ನ ಕಷ್ಟವನ್ನು ತನ್ನ ತಂದೆಗೆ ತಿಳಿಸಿದ್ದು ಮಾತ್ರವಲ್ಲದೆ, ಅತ್ತೆಯನ್ನು ಸಾಯಿಸುವ ತನ್ನ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ ಹಾಗೂ ಈ ಯೋಚನೆಯನ್ನು ಕಾರ್ಯ ಗತಗೊಳಿಸುವಲ್ಲಿ ಸಹಕರಿಸಬೇಕೆಂದು ಕೇಳಿಕೊಳ್ಳುತ್ತಾಳೆ.

    ಅತ್ತೆಯನ್ನು ತನ್ನ ಅಮ್ಮನಂತೆ ನೋಡಿ ಕೊಳ್ಳಬೇಕಾದವಳು ಅವಳನ್ನು ಕೊಲ್ಲುವ ಯೋಚನೆ ಧರ್ಮಸಮ್ಮತವಲ್ಲವೆಂದು ಪರಿಪರಿಯಾಗಿ ಅಪ್ಪ ಹೇಳಿದರೂ ಒಪ್ಪದ ಮಗಳು, ‘ನಮ್ಮಿಬ್ಬರಲ್ಲಿ ಒಬ್ಬರು ಇರಬೇಕು; ಇಲ್ಲವಾದರೆ ನಾನೇ ಸತ್ತು ಹೋಗುತ್ತೇನೆ’ ಎಂಬ ಬೆದರಿಕೆಯನ್ನು ಒಡ್ಡುತ್ತಾಳೆ. ಬೇರೆ ದಾರಿ ಕಾಣದೆ ಅಪ್ಪ ಎಷ್ಟು ಬುದ್ಧಿವಾದ ಹೇಳಿದರೂ ಕೇಳದ ಮಗಳಿಗೆ ಒಂದು ಉಪಾಯವನ್ನು ಸೂಚಿಸುತ್ತಾನೆ. ಆತ ಊರಿನ ಆಯುರ್ವೆದ ಪಂಡಿತರ ಮನೆಗೆ ಹೋಗಿ ಅರವತ್ತು ಮಾತ್ರೆಗಳನ್ನು ತಂದು, ‘ಮಗಳೇ, ಇದು ಮನುಷ್ಯರನ್ನು ನಿಧಾನವಾಗಿ ಸಾಯಿಸುವ ವಿಷದ ಮಾತ್ರೆಗಳು. ಬೆಳಗ್ಗೆ ಮತ್ತು ಸಾಯಂಕಾಲ ದಿನಕ್ಕೆ ಎರಡರಂತೆ ಮಾತ್ರೆ ಸೇವಿಸಿದರೆ ತಿಂಗಳ ಒಳಗೆ ಸಾವು ಶತಸ್ಸಿದ್ಧ. ಪ್ರತಿ ದಿನ ನೀನು ರುಚಿ ರುಚಿಯಾದ ಅಡುಗೆ ಮಾಡಿ ಅದರಲ್ಲಿ ಈ ಮಾತ್ರೆಯನ್ನು ಸೇರಿಸಿ ನಿನ್ನ ಅತ್ತೆಗೆ ಉಣಬಡಿಸು. ತಿಂಗಳ ಒಳಗಾಗಿ ನಿನ್ನ ಇಷ್ಟಾರ್ಥ ಈಡೇರುತ್ತದೆ. ಹೀಗೆ ಮಾಡುವುದರಿಂದ ಯಾರಿಗೂ ನಿನ್ನ ಮೇಲೆ ಅನುಮಾನವೂ ಬರುವುದಿಲ್ಲ. ಅತ್ತೆಯೂ ಸತ್ತು ಹೋಗುತ್ತಾಳೆ. ನಿನ್ನ ಮನದಾಸೆಯೂ ಈಡೇರುತ್ತದೆ’ ಎಂದು ಹೇಳಿ ಮಾತ್ರೆಗಳನ್ನು ಕೊಟ್ಟು ಕಳುಹಿಸುತ್ತಾನೆ.

    ಅಂತೆಯೇ ಗಂಡನ ಮನೆಗೆ ಮರಳಿದ ಸೊಸೆ ಸಂತೋಷದಿಂದ ಅತ್ತೆಗೆ ಎಲ್ಲಿಲ್ಲದ ಪ್ರೀತಿಯನ್ನು ತೋರಿಸುತ್ತಾ ಅವಳಿಗೆ ಅನುಮಾನ ಬಾರದಂತೆ ರುಚಿ ರುಚಿಯಾದ ಅಡುಗೆ ಮಾಡಿ ಅದರಲ್ಲಿ ಅಪ್ಪ ಕೊಟ್ಟ ಮಾತ್ರೆಯನ್ನು ದಿನ ಒಂದರಂತೆ ಸೇರಿಸಿ ಉಣಬಡಿಸುತ್ತಾಳೆ. ಸೊಸೆಯಲ್ಲಿ ಆದ ಈ ಬದಲಾವಣೆಯನ್ನು ಕಂಡು ಅತ್ತೆಯು ಸಂತೋಷ ಪಡುತ್ತಾಳೆ. ಪ್ರತಿಯಾಗಿ ತಾನೂ ಬಗೆ ಬಗೆಯ ಅಡುಗೆ ಮಾಡಿ ಸೊಸೆಗೆ ಉಣಬಡಿಸಲು ಶುರುಮಾಡುತ್ತಾಳೆ.ಅಷ್ಟೇ ಅಲ್ಲದೆ ಅವಳಲ್ಲಿರುವ ತಪ್ಪುಗಳನ್ನು ದೊಡ್ಡದು ಮಾಡದೆ ಸೊಸೆಯನ್ನು ಹೊಗಳಲು ಆರಂಭಿಸುತ್ತಾಳೆ. ಮಾತ್ರವೇ ಅಲ್ಲ, ಸೊಸೆಯನ್ನು ತನ್ನ ಸ್ವಂತ ಮಗಳಂತೆ ಪ್ರೀತಿಸಲು ಪ್ರಾರಂಭಿಸುತ್ತಾಳೆ. ಎರಡು ಮೂರು ವಾರದೊಳಗೆ ಅತ್ತೆಯ ವರ್ತನೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ಕಂಡ ಸೊಸೆ, ತನಗೆ ಅರಿವಿಲ್ಲದೆಯೇ ಅತ್ತೆಯನ್ನು ಪ್ರೀತಿಸಲು, ಗೌರವಿಸಲು ಪ್ರಾರಂಭಿಸುತ್ತಾಳೆ ಹಾಗೂ ತನ್ನನ್ನು ತನ್ನ ತಾಯಿಯಂತೆ ಪ್ರೀತಿಸುವ ಈ ಅತ್ತೆಯನ್ನು ಕೊಲ್ಲುವುದು ಸರಿಯಲ್ಲವೆಂದು ಯೋಚಿಸಿ, ಮತ್ತೆ ತವರಿಗೆ ಓಡಿ ಹೋಗುತ್ತಾಳೆ. ತಂದೆಯಲ್ಲಿ ನಿವೇದಿಸಿಕೊಳ್ಳುತ್ತಾಳೆೆ. ‘ನನ್ನ ಅತ್ತೆ ಈಗ ತುಂಬಾ ಒಳ್ಳೆಯವರಾಗಿದ್ದಾರೆ. ಆಕೆ ಬಹುಕಾಲ ಬದುಕಬೇಕು. ಅವರು ಸಾಯದಂತೆ ಏನು ಮಾಡಲಿ?’ ಎಂಬುದಾಗಿ ತಂದೆಯನ್ನು ಕೇಳುತ್ತಾಳೆ. ಉತ್ತರವಾಗಿ ತಂದೆ ಹೇಳುತ್ತಾನೆ: ‘ಸರಿ ಹಾಗಾದರೆ, ನಾಳೆಯಿಂದ ಆ ಮಾತ್ರೆಯನ್ನು ನಿಲ್ಲಿಸು’. ಪ್ರತಿಯಾಗಿ ಮಗಳು, ‘ಆದರೆ ಇಲ್ಲಿಯವರೆಗೂ ಅತ್ತೆ ಆ ವಿಷದ ಮಾತ್ರೆಗಳನ್ನು ತಿಂದಿದ್ದಾರಲ್ಲ, ಅದರಿಂದ ಅವರಿಗೆ ಅಪಾಯವಿಲ್ಲವೆ?’ ಎಂದು ಕೇಳುತ್ತಾಳೆ. ಆಗ ನಸುನಕ್ಕು ತಂದೆ ಹೇಳುತ್ತಾನೆ: ‘ಮಗಳೇ, ಅವು ವಿಷದ ಮಾತ್ರೆಗಳಲ್ಲ, ರಕ್ತವೃದ್ಧಿಯಾಗುವ ಜೀವಸತ್ವದ ಮಾತ್ರೆಗಳು!’ ‘ಉಳಿದ ಮಾತ್ರೆಗಳನ್ನು ಏನು ಮಾಡಲಿ?’ ಎಂಬ ಮಗಳ ಪ್ರಶ್ನೆಗೆ ‘ನೀನು ತಿಂದುಬಿಡು’ ಎಂಬುದಾಗಿ ಹೇಳುತ್ತಾ ಮಗಳ ದುರಾಲೋಚನೆ ಕಾರ್ಯಗತವಾಗದಂತೆ ನೋಡಿಕೊಳ್ಳುತ್ತಾನೆ. ಒಟ್ಟಿನಲ್ಲಿ ಮನೆ ಮನೆಯಲ್ಲಿ ಸೊಸೆಯಾದವಳು ಅತ್ತೆಯನ್ನು ತನ್ನ ಸ್ವಂತ ಅಮ್ಮನಂತೆ ನೋಡಿಕೊಂಡರೆ, ಅತ್ತೆಯಾದವಳು ಸೊಸೆಯನ್ನು ತನ್ನ ಸ್ವಂತ ಮಗಳಂತೆ ನೋಡಿಕೊಂಡರೆ, ಎಲ್ಲಿದೆ ಅತ್ತೆ ಸೊಸೆ ಜಗಳ? ಹಾಗೂ ಹೆತ್ತವರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದರೆ ಎಲ್ಲಿದೆ ಸಂಸಾರಗಳಲ್ಲಿ ದುರಂತ? ಅಲ್ಲವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts