More

    ವಚನ ಸಾಹಿತ್ಯದಲ್ಲಿದೆ ಜ್ಞಾನದ ಭಂಡಾರ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಕನ್ನಡದ ಓದು-ಬರಹ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ ವಚನ, ಕನ್ನಡದ ಸಾಹಿತ್ಯ ಮರೀಚಿಕೆಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಬೇಸರ ವ್ಯಕ್ತಪಡಿಸಿದರು.
    ನಗರದ ವಿದ್ಯಾಗಿರಿಯ ಜೆಎಸ್​ಎಸ್​ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಪ್ರಜ್ಞಾ ಪ್ರವಾಹ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಚನ ದರ್ಶನ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
    ಕನ್ನಡದ ಮಕ್ಕಳು ಎಲ್ಲ ಭಾಷೆ ಕಲಿಯಲಿ. ಆದರೆ ಮಾತೃ ಭಾಷೆ ಕನ್ನಡವನ್ನು ಎಂದಿಗೂ ಮರೆಯಬಾರದು. ಮಾತೃ ಭಾಷೆಯನ್ನು ಮರೆತರೆ ನಮ್ಮ ಸಂಸ್ಕೃತಿ ಕಲಿಯಲು ಸಾಧ್ಯವಿಲ್ಲ. ವಚನ ಸಾಹಿತ್ಯ ಬರೀ ಕನ್ನಡ ಸಾಹಿತ್ಯ ಎಂದು ತಿಳಿಯದೆ, ಅದೊಂದು ಜ್ಞಾನದ ಭಂಡಾರ ಎಂದು ತಿಳಿದು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು ಎಂದರು.
    ಕಾಯಕ, ದಾಸೋಹ ಜೀವನದ ಅವಿಭಾಜ್ಯ ಅಂಗ. ನಮ್ಮ ಬಳಿ ವಚನ ಸಾಹಿತ್ಯ ಪುಸ್ತಕ ಇದ್ದರೆ ಸಾಲದು. ಜೀವನಕ್ಕೆ ಬೇಕಾದ ಮೌಲ್ಯ ಹೊಂದಿರುವ ವಚನಗಳನ್ನು ಓದಿ ಅರ್ಥೈಸಿಕೊಂಡು, ಜೀವನದ ಧರ್ಮವಾಗಿ ಸ್ವೀಕರಿಸಿ ಅದರಂತೆ ನಡೆಯಬೇಕು. ಅಂದಾಗಲೇ ಜೀವನ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಇದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ. ಆಧ್ಯಾತ್ಮ ಎನ್ನುವುದು ನಿತ್ಯ ಜೀವನದಲ್ಲಿ ನಮ್ಮ ಬದುಕಿನ ಮುಂದಿನ ದಾರಿ ತೋರುತ್ತದೆ. ವಚನ ಸಾಹಿತ್ಯ ಅದನ್ನು ಮಾಡಿದೆ. ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದೆ. ವಚನಗಳಿಗೆ ಅಪಚಾರ ಮಾಡಿವುದು ಕುತಂತ್ರ. ಸಮಾಜದಲ್ಲಿ ಅಧರ್ಮ ಕಾಣಿಸಿಕೊಂಡಾಗ ಅದನ್ನು ಪ್ರತಿಭಟಿಸಿದ್ದು ಮಹಾತ್ಮರು, ಶರಣರು. ನಮ್ಮಲ್ಲಿನ ಮಾನಸಿಕ ದಾಸ್ಯೆ ಹೋಗಬೇಕು ಎಂದರು.
    ಸಾನ್ನಿಧ್ಯ ವಹಿಸಿದ್ದ ಶ್ರೀ ಸದಾಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, 21ನೇ ಶತಮಾನದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ಇಂದಿನ ಕಾಲ ಕೆಡಲು ಸಂಸ್ಕಾರ – ಸಂಸ್ಕ್ರತಿ ಮೇಲಿನ ಅಸಡ್ಡೆ, ಅವುಗಳ ಮೇಲಿನ ಅವಹೇಳನವೇ ಕಾರಣ. ಹಿರಿಯರು ಕಲಿಸಿದ ಸಂಸ್ಕಾರ, ನಮ್ಮ ಸಂಸ್ಕ್ರತಿಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕಲ್ಲದೆ, ಅವುಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು ಎಂದರು.
    ಹಿರಿಯ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಗೋವಿಂದಪ್ಪ ಗೌಡಪ್ಪಗೋಳ, ಶಾಂತಾ ಇಮ್ರಾಪುರ, ಜೆ. ನಂದಕುಮಾರ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಜ್ಞಾ ಪ್ರವಾಹ ಪದಾಧಿಕಾರಿಗಳು, ಇತರರು ಇದ್ದರು.
    ಶಿವಾನಂದ ಪಾಟೀಲ ಸ್ವಾಗತಿಸಿದರು. ಜನಮೇಜಯ ಉರ್ಮಜಿ ಕೃತಿ ಕುರಿತು ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts