More

    ಉಡುಪಿ ಟಿಎಂಎ ಪೈ ಆಸ್ಪತ್ರೆ ಕರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮೀಸಲು

    ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ನಡೆಸುವ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯನ್ನು ಏ.1ರಿಂದ ಕರೋನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮೀಸಲಿಡಲಾಗಿದೆ. ಜಿಲ್ಲೆಯವರಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮಾಹೆ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಮತ್ತು ಉಂಟಾಗುವ ಸವಾಲುಗಳನ್ನು ಎದುರಿಸಲು ಅಗತ್ಯ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತದ ಕೋರಿಕೆ ಮೇರೆಗೆ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯನ್ನು ಬಳಸಿಕೊಳ್ಳಲಿದೆ. ರೋಗಿಗಳಿಗೆ ಇಲ್ಲಿ ಉಚಿತ ಚಿಕಿತ್ಸೆ. ಫಿವರ್ ಕ್ಲೀನಿಕ್ ಪ್ರಾರಂಭಿಸಲಾಗುತ್ತಿದ್ದು, ಜ್ವರದಿಂದ ಬಳಲುತ್ತಿರುವವರನ್ನು ತಪಾಸಣೆ ಮಾಡಿ ಅಗತ್ಯವಿದ್ದವರನ್ನು ಮಾತ್ರ ಅಡ್ಮಿಟ್ ಮಾಡಿಕೊಳ್ಳಲಾಗುವುದು. ಇಲ್ಲಿನ ರೋಗಿಗಳನ್ನು ಈಗಾಗಲೇ ಮಣಿಪಾಲ ಕೆಎಂಸಿಗೆ ವರ್ಗಾಯಿಸಲಾಗಿದೆ ಎಂದರು.

    ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ 100 ಹಾಸಿಗೆಗಳಿದ್ದು, 11 ಐಸಿಯು ಹಾಸಿಗೆಗಳು, 15 ಎಚ್‌ಡಿಯು (ಹೈ ಡೆಪೆಂಡೆನ್ಸಿ ಯುನಿಟ್) ಹಾಸಿಗೆಗಳು, 36 ಖಾಸಗಿ ಕೊಠಡಿಗಳಿವೆ. ಇವುಗಳನ್ನು ಐಸೋಲೇಷನ್‌ಗೆ ಬಳಸಬಹುದು. ಜೊತೆಗೆ 43 ಸಾಮಾನ್ಯ ಹಾಸಿಗೆಗಳ ಸೌಲಭ್ಯವಿದೆ. ಕಸ್ತೂರ್ಬಾ ಆಸ್ಪತ್ರೆ ಮತ್ತು ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯರ ತಂಡ, ನರ್ಸಿಂಗ್, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿ ತಂಡ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರಸ್ತುತ 3 ಕರೋನಾ ವೈರಸ್ ಖಚಿತಗೊಂಡಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ, ಇವರನ್ನು ಏ.1ರಿಂದ ಟಿಎಂಎ ಪೈ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಎಂದರು.

    ಶಾಸಕ ರಘುಪತಿ ಭಟ್ ಮಾತನಾಡಿ, ಮಾಹೆ ಸಂಸ್ಥೆ ಎಂಒಯು ಇಲ್ಲದೆ ಜನರಿಗೆ ಸೇವೆ ಮಾಡುವ ಉದ್ದೇಶದಿಂದ ಉಚಿತವಾಗಿ ಆಸ್ಪತ್ರೆಯನ್ನು ಕರೊನಾ ರೋಗಿಗಳಿಗೆ ಮೀಸಲಿರಿಸಿದೆ. ಇದರಿಂದ ಜಿಲ್ಲಾಡಳಿತ ಮತ್ತು ಸರ್ಕಾರದ ಹೊರೆ ಕಡಿಮೆಯಾಗಿದೆ. ರಾಜ್ಯದ ಎಲ್ಲಾ ಖಾಸಗಿ ಮೆಡಿಕಲ್ ಕಾಲೇಜುಗಳು ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದರು. ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಕರೊನಾ ಪಾಸಿಟಿವ್ ರೋಗಿಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುವುದು. ಕುತ್ಪಾಡಿ ಎಸ್‌ಡಿಎಂ ಆಸ್ಪತ್ರೆಯಲ್ಲಿ ಹೈರಿಸ್ಕ್ ಕರೊನಾ ಶಂಕಿತರಿಗೆ ಚಿಕಿತ್ಸೆ ನೀಡಲಾಗುವುದು. ಲೋ ರಿಸ್ಕ್ ರೋಗಿಗಳನ್ನು ಹಾಸ್ಟೆಲ್‌ಗಳಲ್ಲಿ ಸೇರಿಸಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 26, ಸರ್ಕಾರಿ ಆಸ್ಪತ್ರೆಗಳಲ್ಲಿ 9 ಸೇರಿ 35 ವೆಂಟಿಲೇಟರ್ ಇದೆ. 10 ವೆಂಟೆಲೇಟರ್ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
    ಜಿಪಂ ಸಿಇಒ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಮಾಹೆ ಸಹಕುಲಪತಿ ಡಾ.ವಿನೋದ್ ಭಟ್, ಎಡಿಸಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts