More

    ಜನರಿಗಿರುವ ಸಮಸ್ಯೆ ನಿವಾರಣೆಗೆ ಅನುದಾನ ಕೊರತೆ

    ಶಾಸಕ ಯಶ್​ಪಾಲ್​ ಅಸಮಾಧಾನ | ಉಡುಪಿಯಲ್ಲಿ ಜನಸ್ಪಂದನ ಕಾರ್ಯಕ್ರಮ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಅಧಿಕಾರಿಗಳು ತ್ವರಿತವಾಗಿ ಕಡತ ವಿಲೇವಾರಿ ಮಾಡುವ ಮೂಲಕ ಜನರು ಅನುಭವಿಸುತ್ತಿರುವ ಸಮಸ್ಯೆ ನಿವಾರಿಸಬೇಕು. ಆದರೆ, ಸರ್ಕಾರದಿಂದ ಯಾವುದೇ ಅನುದಾನ ಬಾರದಿರುವುದರಿಂದ ಜನರು ಅನುಭವಿಸುತ್ತಿರುವ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು.

    ಉಡುಪಿ ಬನ್ನಂಜೆಯ ನಾರಾಯಣಗುರು ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ, ಉಡುಪಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಉಡುಪಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ತಾಲೂಕಿನ ಅಭಿವೃದ್ಧಿ ಕುಂಠಿತ

    ಅನುದಾನ ಇಲ್ಲದ್ದರಿಂದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿಲ್ಲ. ಅಲ್ಲದೆ, ತಾಲೂಕಿನ ಯಾವುದೇ ಸಮಸ್ಯೆಯೂ ಬಗೆಹರಿಯುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿಭಾಯಿಸಬೇಕು. 15 ದಿನದ ಒಳಗೆ ಎಲ್ಲ ಕಡತ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಬೇಕು. ಸಣ್ಣಪುಟ್ಟ ಕೆಲಸಕ್ಕೂ ಜನರು ಪದೇಪದೆ ಕಚೇರಿ ಅಲೆಯುವಂತಾಗಬಾರದು ಎಂದರು.

    ಸರ್ಕಾರದ ನಿರ್ದೇಶನ

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ಈಗಾಗಲೇ ಕುಂದಾಪುರ, ಹೆಬ್ರಿ ತಾಲೂಕಿನಲ್ಲಿ ಜನಸ್ವಂದನ ಆಯೋಜಿಸಲಾಗಿದೆ. ಇಂದು ಉಡುಪಿಯಲ್ಲಿ ಆಯೋಜಿಸಲಾಗಿದ್ದು, ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಸ್ಥಳದಲ್ಲಿಯೇ ಬಗೆಹರಿಸಲಾಗುವುದು. ಇಲ್ಲದಿದ್ದಲ್ಲಿ 15 ದಿನ ಅಥವಾ ತಿಂಗಳೊಳಗೆ ಇತ್ಯರ್ಥ ಪಡಿಸಲಾಗುವುದು. ಸಮಸ್ಯೆ ದೊಡ್ಡ ಪ್ರಮಾಣದಲ್ಲಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.

    UDP-28-1A-Janaspandan
    ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಜನರ ಅಹವಾಲು ಆಲಿಸಿದರು.

    54 ಅರ್ಜಿ ಸ್ವೀಕಾರ

    ಕಂದಾಯ ಇಲಾಖೆಯ-19, ನಗರಸಭೆ-14, ಗ್ರಾಪಂ -4, ಸರ್ವೇ ಇಲಾಖೆ -8, ಸಮಾಜ ಕಲ್ಯಾಣ ಇಲಾಖೆ, ಮುಜರಾಯಿ ಇಲಾಖೆ, ವಿಕಲಚೇತನರ ಇಲಾಖೆ, ಲೋಕೋಪಯೋಗಿ ಇಲಾಖೆ, ಮೀನುಗಾರಿಕಾ ಇಲಾಖೆ, ಉದ್ಯೋಗ ಇಲಾಖೆ ಹಾಗೂ ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯ ತಲಾ-1ರಂತೆ ಒಟ್ಟು 54 ಅರ್ಜಿ ಸ್ವೀಕರಿಸಲಾಯಿತು. ರಸ್ತೆ, ಮನೆ, ಜಮೀನು ಕೋಡಿ, ಒಳಚರಂಡಿ, ನೀರಿನ ಸೌಲಭ್ಯ, ವಿದ್ಯುತ್​, ಹಕ್ಕುಪತ್ರ, ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಅಹವಾಲು ಸಲ್ಲಿಕೆಯಾದವು.

    ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಜಿಪಂ ಸಿಇಒ ಪ್ರತಿಕ್​ ಬಾಯಲ್​, ಜಿಲ್ಲಾ ಪೊಲೀಸ್​ ವರಿಷ್ಠ ಡಾ.ಅರುಣಕುಮಾರ್​ ಕೆ., ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್​., ಡಿವೈಎಸ್ಪಿ ಪ್ರಭು ಡಿ.ಟಿ., ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

    ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಉಡುಪಿ ತಾಪಂ ಇಒ ವಿಜಯಾ ಸ್ವಾಗತಿಸಿದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್​ ಕುಮಾರ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    ಇನ್ನೂ ಬಂದಿಲ್ಲ 5 ಕೋಟಿ ರೂ. ಅನುದಾನ

    ಮಳೆಗಾಲ ಆರಂಭವಾಗಿದ್ದು ಜನರು ಅನೇಕ ಪ್ರಕಾರದ ತೊಂದರೆ ಅನುಭವಿಸುತ್ತಿದ್ದಾರೆ. ಸಮುದ್ರ ಅಬ್ಬರಿಸುತ್ತಿದ್ದು ನೀರು ಅಪ್ಪಳಿಸಿ ರಸ್ತೆ ಹಾನಿಯಾಗುತ್ತಿದೆ. ಆದರೂ ಉಡುಪಿ ಜಿಲ್ಲೆಗೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಜಿಲ್ಲೆಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ. ಈ ಹಿಂದೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಡಲ್ಕೊರೆತ ತಡೆಗೆ ಜಿಲ್ಲೆಗೆ 5 ಕೋಟಿ ರೂ. ನೀಡುವ ಭರವಸೆ ನೀಡಿದ್ದರು. ಅದಿನ್ನೂ ಬಂದಿಲ್ಲ ಎಂದು ಶಾಸಕ ಯಶ್​ಪಾಲ್​ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು.

    ಹಿರಿಯರ ಬಿಪಿ​, ರಕ್ತ ತಪಾಸಣೆ

    ಸಭಾಂಗಣದ ಹೊರಭಾಗದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ವತಿಯಿಂದ ಕ್ಲಿನಿಕ್​ ತೆರೆಯಲಾಗಿತ್ತು. ಜನಸ್ಪಂದನಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರಿಗೆ ಬಿಪಿ ಹಾಗೂ ಮಧುಮೇಹಿಗಳಿಗೆ ರಕ್ತ ತಪಾಸಣೆ ಮಾಡಿದರು. ಅಲ್ಲದೆ, ಇಲಾಖೆಯಿಂದ ಆರೋಗ್ಯದ ಕುರಿತಾಗಿ ಇರುವ ಸೌಲಭ್ಯ, ಉಚಿತ ಚಿಕಿತ್ಸೆಗಳ ಮಾಹಿತಿ ಹಾಗೂ ಡೆಂಘೆ, ಮಲೇರಿಯಾ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಯಿತು.

    ಆರೋಗ್ಯ ಇಲಾಖೆ ಸಿಬ್ಬಂದಿ ಜನಸ್ಪಂದನಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರ ಬಿಪಿ ತಪಾಸಣೆ ಮಾಡಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts