More

    ಅಲ್ಪಸಂಖ್ಯಾತರ ನಿಗಮದಿಂದ ರೈತರಿಗೆ ಬೆಂಬಲ ಬೆಲೆ ನೀಡಿ

    ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹ | ಪ್ರತಿಭಟನೆಯ ಎಚ್ಚರಿಕೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ವಾಲ್ಮೀಕಿ ನಿಗಮದ ಹಣವನ್ನು ಕಾಂಗ್ರೆಸ್​ ಸರ್ಕಾರ ಖಾಸಗಿ ಸಂಸ್ಥೆಗೆ ವರ್ಗಾವಣೆ ಮಾಡಿದೆ. ಅದೇರೀತಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಹಣವನ್ನು ರೈತರಿಗೆ ಬೆಂಬಲ ಬೆಲೆ ನೀಡಲು ಬಳಸಿ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹಿಸಿದ್ದಾರೆ.

    ಉಡುಪಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 10 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆ ಅನುದಾನವನ್ನೂ ಸಹ ಬೇರೆ ಇಲಾಖೆಗಳಿಗೆ ವರ್ಗಾಯಿಸಿ, ರೈತರಿಗೆ ಬೆಂಬಲ ಬೆಲೆ ಕೊಡುವ ಕೆಲಸ ಮಾಡಲಿ. ಇಲ್ಲದಿದ್ದಲ್ಲಿ ಒಂದೇ ಸಮುದಾಯದ ಓಲೈಕೆ ಮಾಡಿದಂತಾಗುತ್ತದೆ ಎಂದರು.

    ಪ್ರತಿಭಟನೆಯ ಎಚ್ಚರಿಕೆ

    ರಾಜ್ಯ ಕಾಂಗ್ರೆಸ್​ ಸರ್ಕಾರ ಜನ ವಿರೋಧಿ ಮಾರ್ಗ ಅನುಸರಿಸುತ್ತಿದ್ದು, ಆಡಳಿತದಲ್ಲಿ ಸಂಪೂರ್ಣ ವಿಲವಾಗಿದೆ. ಸಚಿವ ಸ್ಥಾನಕ್ಕಾಗಿ ಈಗ ಅವರಲ್ಲಿಯೇ ಒಳಜಗಳ ಆರಂಭವಾಗಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾಣದಾಗಿದೆ. ಜನರ ಶಾಪ ಸರ್ಕಾರಕ್ಕೆ ತಟ್ಟಿದೆ. ಸ್ವಾಮೀಜಿಗಳನ್ನೂ ನಿಂದಿಸಿ ಸಿಎಂ ಮಾತನಾಡುತ್ತಾರೆ. ನಮ್ಮ ಜಿಲ್ಲೆಯ ಮೀನುಗಾರರು ಹಾಗೂ ರೈತರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ರೈತ ಮೋರ್ಚಾ ಹಾಗೂ ಇನ್ನಿತರ ಸಂಘಟನೆ ಸಹಕಾರದಲ್ಲಿ ಎತ್ತು, ಕೋಣಗಳೊಂದಿಗೆ ಶೀಘ್ರದಲ್ಲೇ ಪ್ರತಿಭಟಿಸುತ್ತೇವೆ ಎಂದರು.

    ಆದೇಶ ಪತ್ರದೊಂದಿಗೆ ಉಡುಪಿಗೆ ಬನ್ನಿ

    ರಾಜ್ಯ ಕಾಂಗ್ರೆಸ್​ ಸರ್ಕಾರ ರಚನೆಯಾಗಿ ಒಂದು ವರ್ಷದ ಒಂದು ತಿಂಗಳ ಅವಧಿ ಕಳೆದಿದೆ. ಈ ವರೆಗೆ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಮ್ಮೆ ಮಾತ್ರ ಭೇಟಿ ನೀಡಿ, ಕಾಟಾಚಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸಹ ಈವರೆಗೆ ಕೇವಲ ಒಮ್ಮೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಕೆಡಿಪಿ ಸಭೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಅವರ ದರ್ಶನವೇ ಆಗುತ್ತಿಲ್ಲ. ಉಡುಪಿ ಪರ್ಯಾಯಕ್ಕೆ 10 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದರು. ಉಡುಪಿ ಜಿಲ್ಲೆಯಲ್ಲಿ ಕಡಲ ಕೊರೆತಕ್ಕೆ 5 ಕೋಟಿ ರೂ. ಕೊಡುವುದಾಗಿ ಕಳೆದ ವಾರ ಹೇಳಿದ್ದರು. ಇನ್ನೂ ಆ ಅನುದಾನ ಬಂದಿಲ್ಲ, ಇನ್ನೊಮ್ಮೆ ಉಡುಪಿ ಜಿಲ್ಲೆಗೆ ಬರುವಾಗ ಜತೆಯಲ್ಲಿ ಆದೇಶದ ಪತ್ರವನ್ನಾದರೂ ತನ್ನಿ ಎಂದು ಯಶ್​ಪಾಲ್​ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts