More

    ಕರೊನಾ ಸೋಂಕಿತರಲ್ಲಿ ಇಬ್ಬರು ಗುಣಮುಖ, ಕೊಂಚ ತಗ್ಗಿದ ಆತಂಕ

    ಬೆಂಗಳೂರು: ಕರೊನಾ ಸೋಂಕಿತರಲ್ಲಿ ಇಬ್ಬರು ಸಂಪೂರ್ಣವಾಗಿ ಗುಣಮುಖ ರಾಗಿರುವುದು ನಿರಾಳತೆ ಮೂಡಿಸಿದೆ. ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಇಬ್ಬರನ್ನು ಶುಕ್ರವಾರ ಡಿಸ್ಚಾರ್ಜ್ ಮಾಡಲಾಗುತ್ತದೆ. ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ಈಗಾಗಲೇ ಒಬ್ಬರು ಮೃತಪಟ್ಟಿದ್ದಾರೆ. ಉಳಿದ 14 ಮಂದಿಗೆ ಪ್ರತ್ಯೇಕ ವಾರ್ಡ್​ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.

    14 ಮಂದಿಯ ಪೈಕಿ ರೋಗಿ – 2 ಮತ್ತು ರೋಗಿ – 5 ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಮನೆಗೆ ತೆರಳಲಿದ್ದಾರೆ. ಕರೊನಾ ವೈರಸ್ ಬಗ್ಗೆ ಜನರು ಆತಂಕಕ್ಕೆ ಒಳಗಾಗದೆ ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಪೂರಕವಾಗಿ ಸ್ಪಂದಿಸಬೇಕು. ಎಲ್ಲರೂ ಮುಂದಿನ 2 ವಾರಗಳ ಕಾಲ ಸಾಧ್ಯವಾದಷ್ಟು ಮನೆಯಲ್ಲಿಯೇ ಉಳಿಯುವ ಮೂಲಕ ಸಹಕರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದರು.

    15 ದಿನ ಮನೆಯಿಂದ ಹೊರಬರಬೇಡಿ: ಜನರು ಮುಂದಿನ 15 ದಿನಗಳ ಕಾಲ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಮನೆಯಿಂದ ಯಾರೂ ಹೊರಗೆ ಹೋಗದೆ ಸಾರ್ವಜನಿಕವಾಗಿ ಅಂತರ ಕಾಯ್ದುಕೊಳ್ಳಿರಿ. ಈಗಾಗಲೇ ಸರ್ಕಾರ ಘೋಷಿಸಿರುವಂತೆ ಮಾಲ್, ಥಿಯೇಟರ್​ಗಳ ಜತೆಗೆ ಪಬ್​ಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಯಾರು ಮುಚ್ಚುವುದಿಲ್ಲವೋ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದರ ಜತೆಗೆ ಅವರ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದ ಸಚಿವರು, ಇದೇ ವೇಳೆ ಬಾರು ಆಂಡ್ ರೆಸ್ಟೋರೆಂಟ್​ಗಳನ್ನು ಮುಚ್ಚುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಆಸ್ಪತ್ರೆಗಳು ಹಾಗೂ ಸುತ್ತಮುತ್ತಲ ಪ್ರದೇಶ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡಲು ಕ್ರಮ ವಹಿಸಲಾಗಿದ್ದು, ಇದಕ್ಕಾಗಿ 10 ಸಾವಿರ ಕಾರ್ಯಕರ್ತರನ್ನು ತರಬೇತುಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಅದಕ್ಕೆ ಪೂರಕವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    ಹೌಸ್ ಸರ್ಜನ್​ಗಳ ಬಳಕೆ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಖಾಸಗಿ ಸೇರಿ ಒಟ್ಟು 53 ವೈದ್ಯಕೀಯ ಕಾಲೇಜುಗಳಿದ್ದು, ಅಲ್ಲಿನ ಎಲ್ಲಾ ಹೌಸ್ ಸರ್ಜನ್​ಗಳನ್ನು ಮುಂದಿನ ಒಂದು ತಿಂಗಳ ಕಾಲ ಸೇವೆಗೆ ನಿಯೋಜಿಸಿಕೊಳ್ಳಲು ನಿರ್ಧರಿಸಲಾಗಿದೆ.

    ಧಾರ್ವಿುಕ ಮುಖಂಡರಲ್ಲಿ ಮನವಿ: ಎಲ್ಲ ದೇವಾಲಯಗಳು, ಮಠಗಳು, ಮಸೀದಿ ಹಾಗೂ ಚರ್ಚ್​ಗಳು ಸೇರಿ ಎಲ್ಲ ಧರ್ಮದ ಧಾರ್ವಿುಕ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶ ನೀಡಬಾರದು ಎಂದು ಧಾರ್ವಿುಕ ಮುಖಂಡರಲ್ಲಿ ಮನವಿ ಮಾಡಲಾಗಿದೆ. ಟ್ಯಾಕ್ಸ್​ಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಓಲಾ, ಊಬರ್ ಸಂಸ್ಥೆಗಳಿಗೆ ಸೂಚನೆ ನೀಡಲು ಸರ್ಕಾರ ನಿರ್ಧರಿಸಿದೆ.

    ವೈದ್ಯರಿಗೂ ಕರೊನಾ ಭೀತಿ

    ಕರೊನಾ ಸೋಂಕು ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯಲ್ಲೂ ತೀವ್ರ ಆತಂಕ ಮೂಡಿಸಿದೆ. ಬೆಂಗಳೂರಿನ ನಾಲ್ವರು ವೈದ್ಯರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಐಸೋಲೇಷನ್ ವ್ಯವಸ್ಥೆಯಲ್ಲಿ ನಿಗಾ ಇರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಗಾಗಲ್ಸ್ ಸೇರಿ ಅಗತ್ಯ ಸೌಲಭ್ಯಗಳನ್ನು ಪೂರ್ಣಪ್ರಮಾಣದಲ್ಲಿ ಒದಗಿಸಿಲ್ಲ. ರೋಗಿಗಳ ನೇರ ಸಂಪರ್ಕದಲ್ಲೇ ವೈದ್ಯರು ಚಿಕಿತ್ಸೆ ನೀಡಬೇಕಿದೆ. ವಿದೇಶ ಪ್ರಯಾಣ ಮಾಡಿದವರು ಬಂದರೂ ತಿಳಿಯುವುದಿಲ್ಲ. ಹೀಗಾಗಿ ಖುದ್ದು ವೈದ್ಯರೇ ಆತಂಕದಲ್ಲಿದ್ದಾರೆ.

    ಕಲಾಪದಲ್ಲೂ ಕರೊನಾ ಕಂಪನ; ಜನಪ್ರತಿನಿಧಿಗಳು, ಅಧಿಕಾರಿಗಳ ತಪಾಸಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts