More

    ಆರೋಗ್ಯ ವೃದ್ಧಿಗೆ ಗಮನಹರಿಸಿ: ಎಡಿಸಿ ಡಾ.ಎಚ್.ಎಲ್.ನಾಗರಾಜು ಕಿವಿಮಾತು

    ಮಂಡ್ಯ: ಇತ್ತೀಚಿನ ದಿನದಲ್ಲಿ ನಮ್ಮ ಸುತ್ತಮುತ್ತಲೂ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಅರ್ಥ ರೋಗಿಗಳ ಸಂಖ್ಯೆ ವೃದ್ಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಆರೋಗ್ಯ ವೃದ್ಧಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ ನೀಡಿದರು.
    ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿನ ಕಾಲದಲ್ಲಿ ಭಾರತದಲ್ಲಿ ಬಡತನ ಎಂಬುದು ತಲೆ ಎತ್ತಿ ಮೆರೆಯುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಅನಾರೋಗ್ಯ ಎಂಬುವುದು ತಲೆಎತ್ತಿ ಮೆರೆಯುವ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
    ಉತ್ತಮ ಆರೋಗ್ಯಕ್ಕಾಗಿ ಯುವಜನತೆ ಮೊದಲು ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿರಬೇಕು. ಮಕ್ಕಳು, ಯುವಕ ಮತ್ತು ಯುವತಿಯರು ಹೆಚ್ಚಾಗಿ ತರಕಾರಿ-ಹಣ್ಣು ಸೇರಿದಂತೆ ಹೆಚ್ಚು ಪೋಷಕಾಂಶ ಇರುವ ಆಹಾರ ಸೇವನೆ ಮಾಡಿ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಹಾಗೂ ಧೈರ್ಯವಾಗಿ ರಕ್ತದಾನ ಮಾಡಿ ಕಷ್ಟದಲ್ಲಿರುವವರ ಜೀವ ಉಳಿಸಬಹುದು ಎಂದು ಹೇಳಿದರು.
    ಇಡೀ ದೇಶದಲ್ಲಿ ರಕ್ತ ಹಾಗೂ ರಕ್ತದಾನಿಗಳ ಕೊರತೆ ಇದೆ. ರಕ್ತದಾನದಿಂದ ಆರೋಗ್ಯ ಏರುಪೇರು ಆಗುತ್ತದೆ ಎಂಬ ಮನೋಭಾವದಿಂದ ಬಹಳಷ್ಟು ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಪುನಾ ರಕ್ತದ ಉತ್ಪತ್ತಿ ಆಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂಬ ಭಯದಿಂದ ಎಷ್ಟೋ ಜನರು ರಕ್ತದಾನ ಮಾಡಲು ಮುಂದೆ ಬರುವುದಿಲ್ಲ. ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ರಕ್ತದಾನ ಮಾಡುವುದಕ್ಕೆ ಮುಂದೆ ಬರಲು ಹಿಂಜರಿಯುತ್ತಿರುವವರಿಗೆ ಪ್ರೇರಣೆ ಆಗಬೇಕು. ಇದುವರೆಗೂ ರಕ್ತದಾನ ಮಾಡಲು ಮುಂದೆ ಬರದೆ ಇರುವವರು ಮುಂದೆ ಬಂದು ರಕ್ತದಾನ ಮಾಡಬೇಕು ಎಂಬ ಉದ್ದೇಶದಿಂದಲೇ ಸನ್ಮಾನ ಮಾಡುತ್ತಿರುವುದು ಎಂದು ತಿಳಿಸಿದರು.
    ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಗಾಯತ್ರಿ, ಜಿಲ್ಲಾ ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ಮಮತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಇತರರು ಇದ್ದರು.
    ಸನ್ಮಾನ: ಸ್ವಇಚ್ಛೆಯಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಎಚ್.ಸಿ.ಅನಿಲ್‌ರಾಜ್(31 ಬಾರಿ), ಡಿ.ತ್ಯಾಗರಾಜ್‌ನಾಯ್ಡು(11 ಬಾರಿ), ಎನ್.ಕಿರಣ್‌ಕುಮಾರ್(9 ಬಾರಿ), ಕೆ.ಪಿ.ಕುಮಾರ್(35 ಬಾರಿ), ಶಶಿಕಲಾ(11 ಬಾರಿ), ಸೃಜನ್‌ಗೌಡ(4 ಬಾರಿ) ಅವರನ್ನು ಸನ್ಮಾನಿಸಲಾಯಿತು. ಇನ್ನು 2023 ಜೂ.1ರಿಂದ 2024 ಮೇ 31ರವರೆಗೆ ರಕ್ತದಾನ ಶಿಬಿರ ನಡೆಸಿ 1,572 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಜೀವಧಾರೆ ಟ್ರಸ್ಟ್ , 1,080 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಮಳವಳ್ಳಿ ಯುವಕ ಮಿತ್ರ, 738 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಪಿಇಎಸ್ ಟ್ರಸ್ಟ್, 541 ಯೂನಿಟ್ ರಕ್ತ ಸಂಗ್ರಹಿಸಿದ ಮದ್ದೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಘ ಮತ್ತು ಸಮಾನ ವಯಸ್ಕರ ವೇದಿಕೆ, 356 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಬಿ.ಎಸ್.ಯು ಶ್ರೀರಂಗಪಟ್ಟಣ ಸಂಸ್ಥೆ, 1,837 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts