More

    ಇಂದು ವೈದ್ಯರ ದಿನ: ಡಾಕ್ಟರ್ಸ್​​ಗಳಿಗೂ ಇದೆ ಸಮಸ್ಯೆ! ಅರಿಯುವ ಪ್ರಯತ್ನ ಮಾಡಿ

    | ಕೆ.ಎಂ. ಪಂಕಜ, ಬೆಂಗಳೂರು

    ಬದಲಾದ ಕಾಲಘಟ್ಟದಲ್ಲಿ ಕೆಲಸದ ಒತ್ತಡ, ಆರೋಗ್ಯ ಸಮಸ್ಯೆ ವೈದ್ಯರನ್ನೂ ಬಿಟ್ಟಿಲ್ಲ. ರೋಗಿಗಳಿಗೆ ಆರೋಗ್ಯದ ಬಗ್ಗೆ ಸಲಹೆ ನೀಡುವ ವೈದ್ಯರೇ ಸಮಸ್ಯೆ ತಂದುಕೊಳ್ಳುವಂತಾಗಿದೆ. ಹಿಂದೆ ವೈದ್ಯರಾದವರಿಗೆ ಆರ್ಥಿಕವಾಗಿ ಲಾಭ ಇಲ್ಲದಿದ್ದರೂ, ಸೇವಾ ತೃಪ್ತಿ ಇರುತ್ತಿತ್ತು. ಕಷ್ಟಗಳ ನಡುವೆಯೂ ರೋಗಿಗಳು ಹಾಗೂ ಅವರ ಕುಟುಂಬಸ್ಥರಿಂದ ಸಿಗುತ್ತಿದ್ದ ಗೌರವ ಹಾಗೂ ಕೃತಜ್ಞತಾ ಭಾವನೆ ಇನ್ನೂ ಉತ್ತಮ ಸೇವೆ ನೀಡಲು ಪ್ರೇರೇಪಿಸುತ್ತಿತ್ತು. ಆದರೆ ಇಂದು, ತೆಗೆದುಕೊಳ್ಳುವ ಚಿಕಿತ್ಸಾ ಶುಲ್ಕದಿಂದ ವೈದ್ಯರನ್ನು ಅಳೆಯಲಾಗುತ್ತಿದೆ. ವ್ಯಾಪಾರಿ ಮನೋಭಾವದವರೆಂದು ಬಿಂಬಿಸಲಾಗುತ್ತಿದೆ. ರೋಗಿಯ ಸಾವಿಗೆ ವೈದ್ಯರನ್ನೇ ಹೊಣೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಪಘಾತ, ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ರೋಗಿ ಬದುಕುಳಿ ಯದಿದ್ದರೆ ನಿರ್ಲಕ್ಷ್ಯವೇ ಕಾರಣ ಎಂದು ಹಲ್ಲೆ ನಡೆಸುವುದು, ಆಸ್ಪತ್ರೆಯ ಪರಿಕರಗಳನ್ನು ಹಾಳುಗೆಡಹುವ ಪ್ರವೃತ್ತಿ ‘ಸಹಜ’ ಎಂಬಂತಾಗಿದೆ.

    ಆತಂಕದಲ್ಲಿಯೇ ಸೇವೆ: ದೇಶದಲ್ಲಿ ಶೇ.75 ವೈದ್ಯರು ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ಅನುಭವಿಸಿದ್ದಾರೆ. ಅದು ದೈಹಿಕವಾಗಿ ಆಗಬೇಕೆಂದಿಲ್ಲ.. ಪ್ರತಿಸಲವೂ ರೋಗಿಗಳ ಕಡೆಯವರಿಂದ ನಿಂದನೆಗಳನ್ನು ಕೇಳಿಸಿ ಕೊಳ್ಳಬೇಕಾಗಿದೆ. ಎಲ್ಲಿ, ಯಾವಾಗ, ಯಾರು ಹಲ್ಲೆ ಮಾಡುತ್ತಾರೋ ಎಂಬ ಭಯದಲ್ಲೇ ಸೇವೆ ನೀಡುವ ಪರಿಸ್ಥಿತಿ ಇದೆ. ಇದರಿಂದಾಗಿ ಬಹಳಷ್ಟು ಮಂದಿ ವೈದ್ಯ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ. ಅರ್ಧದಲ್ಲೇ ವೃತ್ತಿ ತೊರೆದು ಅನ್ಯ ವೃತ್ತಿಯನ್ನು ಆಶ್ರಯಿಸುವವರೂ ಬಹಳಷ್ಟು ಮಂದಿ.

    ಕಾನೂನಿನ ಬಲ ಬೇಕಿದೆ: ಜನರ ಜೀವ ರಕ್ಷಿಸುವ ವೈದ್ಯರು ನಿರ್ಲಕ್ಷ್ಯ ಮಾಡಿದರು ಎಂಬ ಆರೋಪಕ್ಕೆ ಒಳಗಾಗಿ ರೋಗಿಗಳ ಸಂಬಂಧಿಕರಿಂದ ಹಲ್ಲೆಗೊಳಗಾದ ಸುದ್ದಿಗಳು ಆಗಾಗ್ಗೆ ವರಿದಿಯಾಗುತ್ತಿರುತ್ತದೆ. ಇದಕ್ಕಾಗಿ ರಕ್ಷಣೆ ಕೋರಿ ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಿ ವೈದ್ಯರು ಬೀದಿಗಿಳಿದು ಹೋರಾಟ ನಡೆಸಿರುವ ಉದಾಹರಣೆಗಳು ಬಹಳಷ್ಟಿವೆ. ಹಾಗೆಂದು ವೈದ್ಯರಿಗೆ ರಕ್ಷಣೆ ಒದಗಿಸುವ ಕಾನೂನು ಇಲ್ಲ ಎಂದಲ್ಲ. ಆದರೆ ಕಾನೂನನ್ನು ಮತ್ತಷ್ಟು ಬಲಪಡಿಸಬೇಕಿದೆ.

    ಜಾಮೀನುರಹಿತ ಶಿಕ್ಷೆ

    ವೈದ್ಯರ ಮೇಲೆ ಹಲ್ಲೆ ನಡೆಸು ವವರ ವಿರುದ್ಧ ಜಾಮೀನುರಹಿತ ಶಿಕ್ಷೆ ಕಾನೂನಿನಲ್ಲಿದೆ. ದೂರು ದಾಖಲಾಗಿ ಮೂವತ್ತು ದಿನದೊಳಗೆ ತನಿಖೆ ನಡೆಸಬೇಕಾಗುತ್ತದೆ. ಜಾಮೀನುರಹಿತ 3 ವರ್ಷ ಇದ್ದ ಶಿಕ್ಷೆಯನ್ನು 7 ವರ್ಷಕ್ಕೆ ಹೆಚ್ಚಿಸಲಾಗಿದೆ. ಆದರೆ ಇದರಿಂದ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದವರು ಜಾಮೀನು ಪಡೆದು ಹೊರಬರಲು ಅನುಕೂಲವಾಗಿದೆ. ಹಾಗಾಗಿ ಈ ಕಾನೂನು ಸಮಪರ್ಕವಾಗಿಲ್ಲದ ಕಾರಣ ತಿದ್ದುಪಡಿ ತರಬೇಕಿದೆ ಎನ್ನುತ್ತಾರೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಶಾಖೆ ಅಧ್ಯಕ್ಷ ಡಾ. ಶ್ರೀನಿವಾಸ್.

    ವ್ಯಾಪಕವಾಗುತ್ತಿರುವ ಮಿಕ್ಸೋಪಥಿ!

    ವೈದ್ಯರ ಮೇಲೆ ಹಲ್ಲೆ ಹಾಗೂ ಆರೋಪಗಳಿಗೆ ಮಿಕ್ಸೋಪತಿಯೂ ಕಾರಣವಾಗಿದೆ. ಅಲೋಪಥಿ, ಹೋಮಿಯೋಪಥಿ, ಆಯುರ್ವೆದ ಸೇರಿ ಯಾರು ಯಾವ ಪದ್ಧತಿಯಲ್ಲಿ ವೈದ್ಯ ಪದವಿ ಪಡೆದಿರುತ್ತಾರೋ, ಅವರು ಅದೇ ಪದ್ಧತಿಯಲ್ಲಿ ಚಿಕಿತ್ಸೆ ನೀಡಬೇಕು. ಆದರೆ ನಮ್ಮಲ್ಲಿ ಬೇರೆ ಬೇರೆ ಪದ್ಧತಿಯಲ್ಲಿ ವೈದ್ಯಕೀಯ ಪದವಿ ಪಡೆದವರೂ ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಚಿಕಿತ್ಸೆಯ ಗುಣಮಟ್ಟ ಕಡಿಮೆಯಾಗುತ್ತಿದೆ. ಪರಿಣಾಮ ವೈದ್ಯರ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ. ಹಾಗಾಗಿ ಯಾರು ಯಾವ ಪದ್ಧತಿಯಲ್ಲಿ ಓದಿರುತ್ತಾರೋ, ಅವರು ಅದೇ ಪದ್ಧತಿಯಲ್ಲಿ ಸೇವೆ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾನೂನು ಜಾರಿಗೊಳಿಸಬೇಕಿದೆ ಎಂದು ಶ್ರೀನಿವಾಸ್ ಹೇಳುತ್ತಾರೆ.

    ಸೇವೆಗೆ ಸಿಗದ ಮಾನ್ಯತೆ

    ಇಂದು ವೈದ್ಯರಾಗುವುದು ಅಷ್ಟು ಸುಲಭವಲ್ಲ. ಹಲವಾರು ವರ್ಷಗಳ ನಿರಂತರ ಓದು ಮಾತ್ರವಲ್ಲದೆ, ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಬೇಕಿದೆ. ಇಷ್ಟೆಲ್ಲಾ ಖರ್ಚು ಮಾಡಿ ಓದಿದ ಮೇಲೆ ಅದಕ್ಕೆ ಸೂಕ್ತ ವೇತನ ಪಡೆಯುವುದು ದೊಡ್ಡ ಸವಾಲೇ ಸರಿ. ಸೇವಾ ಮನೋಭಾವದಿಂದ ಸರ್ಕಾರಿ ಆಸ್ಪತ್ರೆಗೆ ಸೇರಿದರೆ ಅಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ, ಸೇವೆಗೆ ತಕ್ಕ ವೇತನವಿಲ್ಲ. ಅಗತ್ಯ ಸೌಲಭ್ಯಗಳೂ ಇಲ್ಲ. ಈ ಕಾರಣಕ್ಕಾಗಿಯೇ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಎಂದೊಡನೆ ವೈದ್ಯರು ಹಿಂದೆ ಸರಿಯುತ್ತಾರೆ. ಇನ್ನು ಸ್ವಂತ ಆಸ್ಪತ್ರೆ ತೆರೆಯುವುದು ಸುಲಭದ ಮಾತಲ್ಲ. ವೈದ್ಯರು ಸೇವಾ ಮನೋಭಾವನೆ ಹೊಂದಿರಬೇಕು ಎಂದು ಹೇಳುತ್ತಾರೆ? ಆದರೆ ವೈದ್ಯಕೀಯ ಉಪಕರಣಗಳು, ಔಷಧಗಳ ಮೇಲೆ ಜಿಎಸ್​ಟಿ ವಿಧಿಸುತ್ತಾರೆ. ಖಾಸಗಿ ಆಸ್ಪತ್ರೆ ಎಂದ ಮೇಲೆ ತೆರಿಗೆ ಪಾವತಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಬೇಕು. ಇಷ್ಟೆಲ್ಲ ಮಾಡಲು ರೋಗಿಗಳಿಂದ ಹೆಚ್ಚಿನ ಶುಲ್ಕ ಪಡೆಯಬೇಕು. ಹಾಗೆಂದು ಎಲ್ಲರೂ ಅನಗತ್ಯವಾಗಿ ಹಣ ಪಡೆಯುವುದಿಲ್ಲ. ಎಲ್ಲೋ ಒಂದಿಬ್ಬರು ಹಣದ ಆಮಿಷಕ್ಕೊಳಗಾದರೆ ಎಲ್ಲರನ್ನೂ ದೂರುವುದು, ಯಾರೋ ಒಬ್ಬಿಬ್ಬರು ನಿರ್ಲಕ್ಷ್ಯ ಮಾಡಿದರೆ ಅದಕ್ಕೂ ಎಲ್ಲರನ್ನೂ ಹೊಣೆ ಮಾಡುವುದು ಎಷ್ಟು ಸರಿ? ಇಂದಿಗೂ ಅತಿಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ನಮ್ಮ ನಡುವೆ ಇದ್ದಾರೆ ಎನ್ನುತ್ತಾರೆ ಡಾ. ಶ್ರೀನಿವಾಸ್.

    ವೈದ್ಯರ ರಕ್ಷಣೆಗೆ ಕಾನೂನಿನ ಬಲ ಅತ್ಯಗತ್ಯ. ಸರ್ಕಾರಿ ಸೇವೆಯಲ್ಲಿರುವವರಿಗೆ ಸೂಕ್ತ ವೇತನ, ಸೌಲಭ್ಯ ಹಾಗೂ ಸೌಕರ್ಯಗಳನ್ನು ಕಲ್ಪಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಔಷಧ ಹಾಗೂ ಉಪಕರಣಗಳ ಮೇಲಿನ ಜಿಎಸ್​ಟಿ ತೆಗೆದು ತೆರಿಗೆ ವಿನಾಯಿತಿ ನೀಡಬೇಕು. ನಕಲಿ ವೈದ್ಯರ ಹಾವಳಿ ತಪ್ಪಿಸಲು ಕ್ರಮ ವಹಿಸಬೇಕು.

    | ಡಾ. ಶ್ರೀನಿವಾಸ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ (ಕರ್ನಾಟಕ)

    ನೆಲದ ಮೇಲೆ ನೀವು ಕಣ್ಣೀರಿಟ್ಟಾಗ… ಟೀಮ್ ಇಂಡಿಯಾ ಕ್ಯಾಪ್ಟನ್​ಗೆ ಸಲಾಂ ಎಂದ ಪಾಕ್ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts