More

    ಎಲ್ಲೆಂದರಲ್ಲಿ ಮಾಂಸ ತ್ಯಾಜ್ಯ ಎಸೆದರೆ ಗಡೀಪಾರು

    ಚಿಕನ್, ಮಟನ್ ಅಂಗಡಿ ಮಾಲೀಕರಿಗೆ ಡಿವೈಎಸ್‌ಪಿ ಮುರಳೀಧರ್ ಎಚ್ಚರಿಕೆ

    ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
    ಚಿಕನ್ ಮತ್ತು ಮಟನ್ ಅಂಗಡಿ ಮಾಲೀಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು, ಚರಂಡಿಗೆ ಎಸೆಯುವುದನ್ನು ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಜತೆಗೆ ಜಿಲ್ಲೆಯಿಂದ ಗಡೀಪಾರು ಮಾಡುವುದಾಗಿ ಉಪವಿಭಾಗದ ಡಿವೈಎಸ್‌ಪಿ ಪಿ. ಮುರಳೀಧರ್ ಎಚ್ಚರಿಸಿದರು.

    ನಗರ ಠಾಣೆಯಲ್ಲಿ ನಗರದ ಚಿಕನ್ ಮತ್ತು ಮಟನ್ ಮಾರಾಟಗಾರರ ಜತೆ ಸೋಮವಾರ ಸಭೆ ನಡೆಸಿದ ಅವರು, ನಗರದ ಚರಂಡಿಗಳಲ್ಲಿ ಚಿಕನ್ ಮತ್ತು ಮಟನ್ ತ್ಯಾಜ್ಯವನ್ನು ಚರಂಡಿಗಳಿಗೆ ಎಸೆದಿರುವುದು ನಗರಸಭೆ ಗಮನಕ್ಕೆ ಬಂದಿದೆ. ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ. ಈ ಬಗ್ಗೆ ಪ್ರಕರಣ ಸಹ ದಾಖಲು ಮಾಡಿದ್ದೇವೆ ಎಂದರು.

    ಮುಂದಿನ ದಿನಗಳಲ್ಲಿ ಚಿಕನ್ ಮತ್ತು ಮಟನ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಮೂರಕ್ಕಿಂತ ಹೆಚ್ಚು ಬಾರಿ ಮಾಡಿದರೆ ಅಂತಹವರ ವಿರುದ್ಧ ರೌಡಿ ಶೀಟ್ ತೆರೆಯಲಾಗುವುದು. ತದನಂತರವೂ ಮುಂದುವರಿಸಿದರೆ ಜಿಲ್ಲೆಯಿಂದ ಗಡೀಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.

    ನಗರಸಭೆಯವರು ಸಮಯಕ್ಕೆ ಸರಿಯಾಗಿ ಕಸ ಸಂಗ್ರಹಿಸುವ ವಾಹನ ಕಳಿಸುತ್ತಿಲ್ಲವೆಂದು ಸಭೆಯಲ್ಲಿ ಸಭೆಯಲ್ಲಿದ್ದ ಚಿಕನ್ ಮತ್ತು ಮಟನ್ ಮಾರಾಟಗಾರರು ದೂರಿದರು. ಜತೆಗೆ ಸಭೆಯಲ್ಲಿದ್ದ ಆರೋಗ್ಯ ನಿರೀಕ್ಷಕಿ ಆರತಿ ವಿರುದ್ಧ ಬೊಟ್ಟು ಮಾಡಿದ ಪ್ರಸಂಗ ನಡೆಯಿತು. ಮೂರ‌್ನಾಲ್ಕು ದಿನಗಳು ಕಳೆದರೂ ಕಸ ಸಾಗಾಣೆಕೆ ವಾಹನಗಳು ಬರುವುದಿಲ್ಲ. ಆರೋಗ್ಯ ನಿರೀಕ್ಷಕರ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಮೆಸೇಜ್ ಮಾಡಿದರು ಸಹ ಉತ್ತರಿಸುವುದಿಲ್ಲ ಎಂದು ನೇರ ಆರೋಪ ಮಾಡಿದರು. ಮುಂದೆ ಸಮಯಕ್ಕೆ ಸರಿಯಾಗಿ ವಾಹನ ಕಳಿಸುವ ವ್ಯವಸ್ಥೆ ಮಾಡುವುದಾಗಿ ಡಿವೈಎಸ್‌ಪಿ ತಿಳಿಸಿದರು.

    ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದಕ್ಕೆ ಬ್ರೇಕ್ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ವಾಹನ ಮಾಲೀಕರಿಗೆ ಮನವಿ ಮಾಡಿದ ಡಿವೈಎಸ್‌ಪಿ ಮುರಳೀಧರ್, ವಾಹನಗಳ ಮಾಲೀಕರು ವಾಹನಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿದರು. ತ್ರಿಬಲ್ ರೈಡಿಂಗ್, ಬೈಕ್ ವೀಲಿಂಗ್ ಮತ್ತು ದಾಖಲೆ ಇಲ್ಲದ ವಾಹನಗಳ ವಿರುದ್ದ ಕಠಿನ ಕ್ರಮ ಜರುಗಿಸುವುದಾಗಿ ಸಹ ಎಚ್ಚರಿಸಿದರು.

    ನಗರ ಠಾಣೆ ಇನ್‌ಸ್ಪೆಕ್ಟರ್ ವಿಜಿಕುಮಾರ್, ಪಿಎಸ್‌ಐ ಗಳಾದ ರಮೇಶ್, ನಾರಾಯಣಸ್ವಾಮಿ, ಚಿಕನ್, ಮಟನ್ ಅಂಗಡಿ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts