More

    ಹೋರಾಟದ ಆ ದಿನಗಳು

    ಪ್ರಜಾಪ್ರಭುತ್ವದ ಹಕ್ಕು, ಮೌಲ್ಯಗಳನ್ನು ಮೊಟಕುಗೊಳಿಸಿದ ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಕರಾಳ ಅಧ್ಯಾಯ. ಆಗ ಸರ್ವಾಧಿಕಾರಿ ಧೋರಣೆ ವಿರುದ್ಧ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆದ ಹೋರಾಟ ಜನಶಕ್ತಿಗೆ ಸಾಕ್ಷಿ. ಈ ಹೋರಾಟದಲ್ಲಿ ಭಾಗವಹಿಸಿದ ಇಬ್ಬರು ಕನ್ನಡಿಗ ರಾಜಕಾರಣಿಗಳು ತಮ್ಮ ಅನುಭವವನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

    | ಮೈಕೇಲ್ ಫರ್ನಾಂಡಿಸ್, ಕಾರ್ವಿುಕ ನಾಯಕ, ಮಾಜಿ ಶಾಸಕ

    ಹೋರಾಟದ ಆ ದಿನಗಳು ತುರ್ತು ಪರಿಸ್ಥಿತಿ ಜಾರಿಯಾದಾಗ ನಾನು ಐಟಿಐ ಕಾರ್ಖಾನೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದೆ. 3 ತಿಂಗಳ ನಂತರ ಕೇಂದ್ರ ಸರ್ಕಾರ ಕಾರ್ವಿುಕ ವಿರೋಧಿ ಯಾದ ಕಾನೂನನ್ನು ಸುಗ್ರೀವಾಜ್ಞೆಯ ಮೂಲಕ ತಂದಿತು. ಅದನ್ನು ವಿರೋಧಿಸಿ ನಮ್ಮ ಸಂಘದ ಸಭೆ ಕರೆದಾಗ ಅದರಲ್ಲಿದ್ದ ಕಾಂಗ್ರೆಸಿಗರು ಸುಗ್ರೀವಾಜ್ಞೆಗೆ ವಿರೋಧ ಮಾಡಿಲಿಲ್ಲ. ಸಭೆಯಲ್ಲಿ ಸುಗ್ರೀವಾಜ್ಞೆಯ ವಿರುದ್ಧ ನಿರ್ಣಯಕ್ಕೆ ಕೆಲವರಿಂದ ವಿರೋಧ ಬಂತು. ಕೊನೆಗೆ ನಾನು ಕೆಲವು ಹಿರಿಯ ಕಾರ್ವಿುಕರನ್ನು ಸೇರಿಸಿ ನಿರ್ಣಯ ಮಾಡಿದೆ. ನಿರ್ಣಯದ ಪ್ರತಿ ಹತ್ತು ಪುಟಗಳಿದ್ದವು. ಅದರಲ್ಲಿ ಇಂದಿರಾ ಗಾಂಧಿ ವಿರುದ್ಧ 20 ಅಂಶಗಳು ಹಾಗೂ ಅವರ ಕಿರಿಯ ಪುತ್ರ ಸಂಜಯ್ ಗಾಂಧಿ ವಿರುದ್ಧ 4 ಅಂಶಗಳಿದ್ದವು. ಅದಕ್ಕೆ 17 ಜನ ಸಹಿ ಹಾಕಿದ್ದರು. ನನ್ನದೇ ಮೊದಲ ಸಹಿ.

    ಅಂದು ಮೆರವಣಿಗೆ ಮಾಡಿ ಮನೆಗೆ ಬಂದಾಗ ನಮ್ಮ ನಾಯಿ ಬೊಗಳಲಾರಂಭಿಸಿತು. ನೋಡಿದರೆ ಪೊಲೀಸರೆಂದು ಹೇಳಿಕೊಂಡ ಮೂರ್ನಾಲ್ಕು ಜನ ಮನೆಗೆ ಬಂದಿದ್ದರು. ಕೈಯಲ್ಲಿ ಪಿಸ್ತೂಲ್ ಇತ್ತು. ನಾನು ಕೋಪ ವ್ಯಕ್ತಪಡಿಸಿದೆ. ನನ್ನ ಸಹೋದರ ಲಾರೆನ್ಸ್ ಫರ್ನಾಂಡಿಸ್ ಸಹ ಪೊಲೀಸರ ಮೇಲೆ ಸಿಟ್ಟು ಮಾಡಿಕೊಂಡ. ‘ಪೊಲೀಸ್ ಆಯುಕ್ತರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಕರೆದುಕೊಂಡು ಹೋದರು. ಜೀಪು ಪೊಲೀಸ್ ಆಯುಕ್ತರ ಮಾರ್ಗ ಬಿಟ್ಟು ಬೇರೆ ಕಡೆ ಹೋಗಲಾರಂಭಿಸಿತು. ನಾನು ಅದಕ್ಕೆ ಪ್ರತಿರೋಧ ತೋರಿದೆ. ಹಲಸೂರು ಪೊಲೀಸ್ ಠಾಣೆಗೆ ಆಯುಕ್ತರು ಬರುತ್ತಾರೆಂದು ಸುಳ್ಳು ಹೇಳಿದರು. ರಾತ್ರಿ ಅಲ್ಲಿಯೇ ಕಳೆಯಿತು. ಮಾರನೇ ದಿನ ಮಧ್ಯಾಹ್ನ ಅಲ್ಲಿಂದ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ಪೋಟೋ ತೆಗೆಸಿ ನಂತರ ಸೆಂಟ್ರಲ್ ಜೈಲ್​ಗೆ ಬಿಟ್ಟರು.

    ಅಮೆರಿಕದಲ್ಲಿದ್ದ ನನ್ನ ಸಹೋದರ ನನ್ನ ನೋಡುವ ಸಲುವಾಗಿ ಬೆಂಗಳೂರಿಗೆ ಬರಲು ಮುಂದಾದ. ಆದರೆ ಅಲ್ಲಿನ ಸರ್ಕಾರ ಅವಕಾಶ ನೀಡಲಿಲ್ಲ. ನನ್ನ ಅಣ್ಣ ಜಾರ್ಜ್ ಫರ್ನಾಂಡಿಸ್ ಭೂಗತರಾಗಿ ಅನೇಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಮನೆಗೆ ಅವರು ಸಾಧು, ಸಂತ, ಸರ್ದಾರಜಿ ವೇಷ ತೊಟ್ಟು ಬಂದು ಹೋಗುತ್ತಿದ್ದರು. ಜಾರ್ಜ್ ಬೆನ್ನು ಹತ್ತಿದ್ದ ಪೊಲೀಸರು ನನ್ನ ಸಹೋದರ

    ಲಾರೆನ್ಸ್​ಗೆ ಕಿರುಕುಳ ನೀಡಲಾರಂಭಿಸಿದ್ದರು. ಅವರನ್ನು ಸಹ ಬಂಧಿಸಿ ಸಿಐಡಿ ಕಚೇರಿಯಲ್ಲಿ ಆಲದ ಮರದ ಕಡ್ಡಿಗಳಿಂದ ಸಿಕ್ಕಾಪಟ್ಟೆ ಹೊಡೆದು ಕಿರುಕುಳ ನೀಡಿದರು. ಜಾರ್ಜ್ ಎಲ್ಲಿದ್ದಾರೆಂದು ಹೇಳದಿದ್ದರೆ ರೈಲ್ವೆ ಹಳಿಗಳ ಮೇಲೆ ಹಾಕಿ ಸಾಯಿಸುವುದಾಗಿಯೂ ಬೆದರಿಕೆ ಹಾಕಿದರು.

    ಜೈಲಿನಲ್ಲಿ ನಾವು ಗಲಾಟೆ ಮಾಡಿದಾಗ ಊರಿಂದ ಊರಿಗೆ ಸ್ಥಳಾಂತರ ಮಾಡಲಾರಂಭಿಸಿದರು. ಚುನಾವಣೆ ನಡೆಯುತ್ತದೆ ಎಂಬ ಮಾಹಿತಿ ಬಂದಾಗ ಕೆಲವರನ್ನು ಬಿಡುಗಡೆ ಮಾಡಿದರು. ಕೆಲವು ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ತಂದು ಬಿಡುಗಡೆ ಮಾಡಿಸಿಕೊಂಡರು. ಬೆಂಗಳೂರಿನ ಅನೇಕ ಸಂಘಟನೆಗಳು ನನಗೆ ಬೆಂಬಲ ನೀಡಿ ಪ್ರತಿಭಟನೆ ಸಹ ಮಾಡಿದ್ದವು. 1976ರ ಮಾರ್ಚ್ ನಲ್ಲಿ ನನ್ನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೂ ಕಳುಹಿಸಲಾಯಿತು. ಹಿಂಡಾಲಗಾ ಜೈಲಿನಲ್ಲಿದ್ದಾಗ ನನ್ನನ್ನು ಜನತಾ ಪಕ್ಷದ ಕಾರ್ಯದರ್ಶಿಯಾಗಿ ನೇಮಕ ಮಾಡಿರುವ ಸುದ್ದಿ ಪತ್ರಿಕೆಯಲ್ಲಿ ನೋಡಿ ಆಶ್ಚರ್ಯವಾಗಿತ್ತು.

    ದೇವರಾಜ ಅರಸು ಅವರು ಇಲ್ಲಿ ಮುಖ್ಯಮಂತ್ರಿಯಾಗಿದ್ದರು. ಯಾರಿಗೂ ಕಿರುಕುಳ ನೀಡಲಿಲ್ಲ. ಅನೇಕ ಕಾಂಗ್ರೆಸ್ ನಾಯಕರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಗಾರರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದರು. ಆದರೆ ಇಂದಿರಾ ವಿರುದ್ಧ ಮಾತನಾಡುವ ಧೈರ್ಯ ಇರಲಿಲ್ಲ. ತುರ್ತು ಪರಿಸ್ಥಿತಿಯ ನಂತರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ವಿಧಾನಸಭಾ ಚುನಾವಣೆಯಲ್ಲಿ ನಾನು ಸಹ ಭಾರತೀನಗರ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದೆ. ನನಗೆ ಈಗ 89 ವರ್ಷ. ತುರ್ತು ಪರಿಸ್ಥಿತಿ ವಿರುದ್ಧದ ನಮ್ಮ ಹೋರಾಟಗಳೆಲ್ಲ ಈಗ ನೆನಪಾಗಿ ಕಾಡುತ್ತಿರುತ್ತವೆ.

    ಜೆಪಿ ಚಳವಳಿಯ ಪ್ರಭಾವ

    | ಶ್ರೀಗಣೇಶ್ ಎಂ.ವಿ., ಹಿರಿಯ ರಾಜಕಾರಣಿ

    ಹೋರಾಟದ ಆ ದಿನಗಳು ಆಗ ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ಜೆಪಿ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದವರು. ಆ ಚಳವಳಿಗೆ ಎಬಿವಿಪಿ, ಎಸ್​ಎಫ್​ಐ, ಸಿಪಿಐ(ಎಂ) ಬೆಂಬಲ ನೀಡಿದ್ದವು. ಸಮಾಜವಾದಿ ಯುವಜನ ಸಭಾ ಮಾಡಿಕೊಂಡು ಹೋರಾಟ ಮಾಡುತ್ತಿದ್ದೇವು. ನಾನಾಗ ಎಬಿವಿಪಿಯ ಬೆಂಗಳೂರು ನಗರ ಕಾರ್ಯದರ್ಶಿ, ಪಿ.ಜಿ.ಆರ್. ಸಿಂಧ್ಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜೆಪಿ ಬೆಂಗಳೂರಿಗೆ ಬರುವ ಮುನ್ನ ಯುವಜನ ಸಂಘರ್ಷ ಸಮಿತಿ ಸಹ ರಚನೆಯಾಗಿತ್ತು. ಅದೇ ಸಮಿತಿಯಿಂದಲೇ ತುರ್ತು ಪರಿಸ್ಥಿತಿಯ ವಿರುದ್ಧ ದೊಡ್ಡ ಹೋರಾಟ ನಡೆಯಿತು. ಜೆಪಿ ಬೆಂಗಳೂರಿಗೆ ಬಂದಾಗ ವಿದ್ಯಾರ್ಥಿಗಳ ಹೋರಾಟದ ಮೇಲೆ ಸಾಕಷ್ಟು ಪ್ರಭಾವ ಬೀರಿದರು. ಸಿಂಧ್ಯಾ, ಬಂದಗದ್ದೆ ರಮೇಶ್, ಜೀವರಾಜ ಆಳ್ವ ಮೊದಲಾದವರು ಬೆಂಗಳೂರಿನಲ್ಲಿದ್ದರು. ಶ್ರೀನಿವಾಸಪ್ರಸಾದ್, ಎಂಪಿ ಪ್ರಕಾಶ್ ಇತರರು ಬೇರೆ ಬೇರೆ ಭಾಗದಲ್ಲಿ ಹೋರಾಟ ಮಾಡುತ್ತಿದ್ದರು. ತುರ್ತು ಪರಿಸ್ಥಿತಿ ಘೋಷಣೆಯಾದ ಕೆಲವು ದಿನಗಳಲ್ಲಿಯೇ ಅನೇಕರ ಬಂಧನವಾಯಿತು. ಸಂಸದೀಯ ಸಮಿತಿ ಸಭೆಗೆ ಬಂದಿದ್ದ ವಾಜಪೇಯಿ, ಮಧು ದಂಡವತೆ, ಆಡ್ವಾಣಿ, ಎಸ್.ಎನ್. ಮಿಶ್ರಾ ಹಾಗೂ ಇತರರು ಬೆಂಗಳೂರಿನಲ್ಲಿಯೇ ಬಂಧನಕ್ಕೆ ಒಳಗಾದರು. ವಾಜಪೇಯಿ ಕೆಲ ದಿನ ಆಸ್ಪತ್ರೆಯಲ್ಲಿದ್ದು ನಂತರ ದೆಹಲಿಗೆ ಹೋದರು. ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಸಿಂಧ್ಯಾ, ದೊರೆಸ್ವಾಮಿ ಹಾಗೂ ಇತರರು ಬೇಗ ಜೈಲು ಸೇರಿದರು. ನಾವು ಭೂಗತರಾಗಿ ಚಟುವಟಿಕೆಗಳನ್ನು ನಡೆಸುತ್ತಿದ್ದೇವು.

    ಆ ಸಂದರ್ಭದಲ್ಲಿ ಬಿಹಾರದಲ್ಲಿ ಪ್ರವಾಹ ಬಂದಿತ್ತು. ಕಾಲೇಜುಗಳಿಂದ ನಿಧಿ ಸಂಗ್ರಹಕ್ಕೆ ನಮಗೆ ಡಿಸಿ ಅನುಮತಿ ನೀಡಿದರು. ಕಾಲೇಜುಗಳಿಗೆ ಹೋಗುವುದು ಅಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಕ್ರಿಯಾಶೀಲರನ್ನು ಗುರುತಿಸಿ ಅವರಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಮನೋಭೂಮಿಕೆ ಸಿದ್ಧಪಡಿಸುತ್ತಿದ್ದೇವು. ಆಗ ನಮ್ಮ ಜತೆ ದತ್ತಾತ್ರೇಯ ಹೊಸಬಾಳೆ, ಎಂಪಿ ಕುಮಾರ್, ಗೋವರ್ಧನ್, ಶಿವರಾಮ್ ಎಸ್. ಸುರೇಶ್​ಕುಮಾರ್ ಹಾಗೂ ಇತರರು ಇದ್ದರು. ಕಾಮನ್​ವೆಲ್ತ್ ತಂಡ ಬಂದಾಗ ಅಶೋಕ ಹೋಟೆಲ್ ಆವರಣದಲ್ಲಿ ಕರಪತ್ರ ಹಂಚಲಾಯಿತು. ನನ್ನನ್ನು 3-4 ಬಾರಿ ಪೊಲೀಸ್ ಠಾಣೆಗೆ ಕರೆಸಿದ್ದರು. 1976ರ ಜನವರಿ 14ರಂದು ಸಂಕ್ರಾಂತಿಯ ದಿನ ಗಾಂಧಿಬಜಾರ್​ನಲ್ಲಿ ಮೆರವಣಿಗೆ ಮಾಡುವಾಗ ಅಲ್ಲಿಂದ 20 ಜನರನ್ನು ಬಂಧಿಸಿದರು.

    ಸೆಂಟ್ರಲ್ ಜೈಲ್ ಒಂದು ರೀತಿಯಲ್ಲಿ ಕ್ಯಾಂಪ್ ಆಗಿತ್ತು. ದೇವರಾಜ ಅರಸು ಹೋರಾಟಗಾರರ ಬಗ್ಗೆ ಸಿಂಪಂಥಿ ಯನ್ನಿಟ್ಟುಕೊಂಡಿದ್ದರು. ಅವಕಾಶವನ್ನು ಅತಿರೇಕಕ್ಕೆ ಬಳಕೆ ಮಾಡಲಿಲ್ಲ. ಆದರೂ ಜೈಲಿನಲ್ಲಿದ್ದ ಅನೇಕರು ಮಾನಸಿಕವಾಗಿ ಕುಗ್ಗಿದ್ದರು. ಜೈಲಿನಲ್ಲಿ ಎಡಪಂಥೀಯರು, ಬಲಪಂಥೀಯರು, ದೊರೆಸ್ವಾಮಿ ಅವರಂತಹ ಸವೋದಯ ಹೋರಾಟಗಾರರು ಇದ್ದರು. ಜಾರ್ಜ್ ಫರ್ನಾಂಡೀಸ್ ರೈಲ್ವೆ ಹಳಿಗಳನ್ನು ಸ್ಪೋಟಿಸುತ್ತಾರೆ ಎಂಬ ಸುದ್ದಿ ನಮಗೆ ರೋಮಾಂಚನವನ್ನುಂಟು ಮಾಡುತ್ತಿತ್ತು.

    ಕಾರ್ವಿುಕರ ನಾಯಕ ವಿಜೆಕೆ ನಾಯರ್ ಜೈಲಿನಲ್ಲಿಯೇ ಕಾನೂನು ಪದವಿಯ ಅಧ್ಯಯನದಲ್ಲಿ ತೊಡಗಿದ್ದರು. ನಾಯಕರಿಗೆ ಪ್ರತ್ಯೇಕವಾದ ಗ್ರಂಥಾಲಯ ಇತ್ತು. ಆಡ್ವಾಣಿ, ಹೆಗಡೆ, ಜೆ.ಎಚ್. ಪಟೇಲ್, ದಂಡವತೆ ಇತರರು ಅಲ್ಲಿ ಹೆಚ್ಚು ಅಧ್ಯಯನದಲ್ಲಿ ತೊಡಗಿರುತ್ತಿದ್ದರು. ದೇವೇಗೌಡರು ಹೋರಾಟದಲ್ಲಿ ಭಾಗಿಯಾಗಿದ್ದರು. ಪ್ರತಿನಿತ್ಯ ಸಂಜೆ 6 ರಿಂದ 8.30ರ ತನಕ ಚರ್ಚೆ, ಸಂವಾದದಂತಹ ಚಟುವಟಿಕೆಗಳು ನಡೆಯುತ್ತಿದ್ದವು. ಕೆಲವು ಹೋರಾಟಗಾರರನ್ನು ಕಲಬುರ್ಗಿಯ ಜೈಲಿಗೂ ಸ್ಥಳಾಂತರ ಮಾಡಿದ್ದರು. ಆದರೆ ಯಾರಿಗೂ ತೊಂದರೆ ಕೊಡಲಿಲ್ಲ. ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆದಾಗ ಬಿಡುಗಡೆಯಾಯಿತು.

    ನಮ್ಮ ಹೋರಾಟ ಇದ್ದದ್ದು ಸರ್ವಾಧಿಕಾರಿ ಧೋರಣೆಯ ವಿರುದ್ಧ. ಇಡೀ ವಿಶ್ವದಲ್ಲಿಯೇ ಗಟ್ಟಿಯಾದ ಹಾಗೂ ವಿಶಿಷ್ಟವಾದ ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ಮಾಡಿದ ಹೋರಾಟ ಅದು. ನಮ್ಮನ್ನು ಆ ಹೋರಾಟ ಇನ್ನಷ್ಟು ಗಟ್ಟಿಗೊಳಿಸಿತು.

    ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts