More

    ಅಗತ್ಯ ಇರುವೆಡೆ ಇಂಗ್ಲೀಷ್ ಬಳಕೆ ತಡೆಯುವಂತಿಲ್ಲ

    ಬೆಂಗಳೂರು: ಸರ್ಕಾರದ ಎಲ್ಲ ಹಂತದ ವ್ಯವಹಾರಗಳಲ್ಲಿ ಸಂವಹನಕ್ಕಾಗಿ ಏಕ ಭಾಷಾ ಸೂತ್ರ ಅನುಸರಿಸಲು ಸಾಧ್ಯವಿಲ್ಲ. ಕನ್ನಡ ಕಡ್ಡಾಯ ಬಳಕೆ ಜತೆಗೆ ಅಗತ್ಯ ಇರುವೆಡೆ ಇಂಗ್ಲೀಷ್ ಬಳಸುವುದನ್ನು ತಡೆಯುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.

    ಅಲ್ಲದೆ, ಲೋಕಾಯುಕ್ತ ಸಂಸ್ಥೆಯಲ್ಲಿ ದಿನನಿತ್ಯದ ಎಲ್ಲ ಪ್ರಕ್ರಿಯೆಗಳನ್ನು ಕನ್ನಡದಲ್ಲಿ ನಡೆಸುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿದಾರರ ಮನವಿಯನ್ನು ವಿಚಾರಣೆಗೊಳಪಡಿಸಲು ನಿರಾಕರಿಸಿದೆ.

    ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

    ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಲೋಕಾಯುಕ್ತ ಸಂಸ್ಥೆಯ ಆದೇಶಗಳು ರಾಜ್ಯದ ಎಲ್ಲ ಜನರಿಗೂ ಅರ್ಥವಾಗುವಂತಿರಬೇಕು. ಹೀಗಾಗಿ ಆದೇಶಗಳು, ನೋಟಿಸ್ ಸೇರಿ ಎಲ್ಲ ಪ್ರಕ್ರಿಯೆಯನ್ನು ಕನ್ನಡದಲ್ಲಿರುವಂತೆ ನಿರ್ದೇಶನ ನೀಡಬೇಕೆಂದು ಕೋರಿದರು.

    ಈ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರೀಯಾ, ಸರ್ಕಾರದ ಆಡಳಿತದಲ್ಲಿ ಏಕಭಾಷೆ ಬಳಕೆ ಮಾಡಬೇಕೆಂಬ ಸಾರ್ವತ್ರಿಕವಾದ ಸೂತ್ರವಿಲ್ಲ. ಆ ಪ್ರಕಾರವಾಗಿ ಎಲ್ಲೆಲ್ಲಿ ಕನ್ನಡ ಭಾಷೆಯಿರುವಲ್ಲಿ ಇಂಗ್ಲೀಷ್ ಭಾಷೆ ಬಳಕೆ ಅಗತ್ಯವಿದೆಯೋ ಅದಕ್ಕೆ ಯಾವುದೇ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

    ಸರ್ಕಾರಿ ವ್ಯವಹಾರಗಳಲ್ಲಿ ಯಾವ ಭಾಷೆ ಬಳಸಬೇಕೆಂಬುದು ನೀತಿ ಮತ್ತು ಅನುಕೂಲತೆಯ ವಿಷಯವಾಗಿದೆ. ಕನ್ನಡ ಸ್ಥಳೀಯ ಭಾಷೆಯಾಗಿದ್ದು, ಅದಕ್ಕೆ ಪ್ರಾಮುಖ್ಯತೆ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಆದರೆ, ಈ ಅಂಶಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪುರಸ್ಕರಿಸಲು ಅರ್ಹವಾಗುವುದಿಲ್ಲ ಎಂದು ಪೀಠ ಹೇಳಿದೆ.

    ಮುಂದುವರಿದು, ಸರ್ಕಾರ ಮತ್ತು ಅದರ ಅಧೀನದ ಪ್ರಾಧಿಕಾರಗಳು ಕನ್ನಡ ಬಳಕೆ ಸಂಬಂಧ ಸಕಾರಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಮತ್ತು ಅಧಿಕಾರಿಗಳು ಸಾಧ್ಯವಾದಷ್ಟು ಸ್ಥಳೀಯ ಭಾಷೆ ಬಳಸಬೇಕು. ಆಗ ಮಾತ್ರ ಭಾಷಾ ಸಂಸ್ಕೃತಿ ಉಳಿಯುತ್ತದೆ ಎಂದು ನ್ಯಾಯಪೀಠ ಆಶಯ ವ್ಯಕ್ತಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts