More

    ಹಾಲಿನ ಪುಡಿ ದಂಧೆ ಹಿಂದೆ ಕಾಣದ ಕೈಗಳು

    ಕೇಶವಮೂರ್ತಿ ವಿ.ಬಿ. ಹಾವೇರಿ

    ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಹೊಟ್ಟೆ ಸೇರಬೇಕಿದ್ದ ಮೂರೂವರೆ ಟನ್ ಹಾಲಿನ ಪುಡಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲಿಸಲು ಧಾರವಾಡ ಹಾಲು ಒಕ್ಕೂಟ ಮೀನಮೇಷ ಎಣಿಸುತ್ತಿದೆ. ಇದರಿಂದ ಹಾಲಿನ ಪುಡಿ ದಂಧೆಯ ಹಿಂದೆ ಕಾಣದ ಕೈಗಳ ಕೈವಾಡ ಇರುವ ಸಂಶಯ ಮೂಡಿಸುತ್ತಿದೆ.

    ಧಾರವಾಡ ಹಾಲು ಒಕ್ಕೂಟದಿಂದ ಗುತ್ತಿಗೆದಾರ ಶಿವಕುಮಾರ ನಾಡಗೌಡ ದೇಸಾಯಿ ಎಂಬುವರು ಗದಗ, ಶಿರಹಟ್ಟಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಪೂರೈಸಲು ಹಾಲಿನ ಪುಡಿ ಪಡೆದಿದ್ದರು. ಅದನ್ನು ನೇರವಾಗಿ ಶಾಲೆಗಳಿಗೆ ಸರಬರಾಜು ಮಾಡಬೇಕಿತ್ತು. ಆದರೆ, ಅದು ಹಾವೇರಿ ಹಾಲು ಒಕ್ಕೂಟದ ಹಾಲಿನ ಪುಡಿ ಸರಬರಾಜು ಮಾಡುವ ಗುತ್ತಿಗೆದಾರ ಬಸವರಡ್ಡಿ ರಡ್ಡೇರ ಎಂಬುವರ ಸವಣೂರ ತಾಲೂಕಿನ ಡೊಂಬರಮತ್ತೂರ ಗ್ರಾಮದ ಮನೆಯ ಶೆಡ್‌ನಲ್ಲಿ ಜೂ. 21ರಂದು ಪತ್ತೆಯಾಗಿತ್ತು.

    ಕೂಡಲೇ ಎಚ್ಚೆತ್ತುಕೊಂಡ ದಂಧೆಕೋರರು ಅದನ್ನು ಹಾವೇರಿ ತಾಲೂಕಿನ ಜಂಗಮನಕೊಪ್ಪದಲ್ಲಿರುವ ಹಾವೇರಿ ಹಾಲು ಒಕ್ಕೂಟದ ಯುಎಚ್‌ಟಿ ಘಟಕಕ್ಕೆ ಸಾಗಿಸಲು ಯೋಚಿಸಿದ್ದರು. ಆದರೆ, ಅಂದು ಅಲ್ಲಿ ಅಂದರ್- ಬಾಹರ್ ಎಂಬ ದೊಡ್ಡ ಡ್ರಾಮಾ ನಡೆದಿತ್ತು. ಹಾವೇರಿ ತಹಸೀಲ್ದಾರ್, ಹಾವೆಮುಲ್ ಎಂಡಿ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಅದು ಧಾರವಾಡ ಹಾಲು ಒಕ್ಕೂಟಕ್ಕೆ ಸೇರಿದ್ದು ಎಂದು ತಿಳಿದುಬಂದಿತ್ತು. ಮರುದಿನ ಸಂಜೆ ಅವರಿಗೆ ಒಪ್ಪಿಸಿ, ಕೈತೊಳೆದುಕೊಂಡಿದ್ದರು.

    ನಂತರ ಧಾರವಾಡ ಹಾಲು ಒಕ್ಕೂಟ ಕೂಡಲೇ ಎಫ್‌ಐಆರ್ ದಾಖಲಿಸಿ, ಗುತ್ತಿಗೆದಾರರ ಪರವಾನಗಿ ರದ್ದುಪಡಿಸುವ ಮೂಲಕ ದಂಧೆಕೋರರಿಗೆ ಕಠೀಣ ಸಂದೇಶ ರವಾನಿಸಬೇಕಿತ್ತು. ಆದರೆ, ಹಾಗೆ ಮಾಡದೆ ಧಾರವಾಡ ವಿದ್ಯಾಗಿರಿಯಲ್ಲಿ, ಸವಣೂರಲ್ಲಿ ಎಫ್‌ಐಆರ್ ಮಾಡುವುದಾಗಿ ಅಧಿಕಾರಿಗಳು ಕಾಲಹರಣ ಮಾಡತೊಡಗಿದರು. ಹಾಗಾಗಿ, ಕೆಎಂಎಫ್‌ನ ಕೆಲ ಅಧಿಕಾರಿ ವರ್ಗವೂ ಈ ದಂಧೆಯಲ್ಲಿ ಶಾಮೀಲಾಗಿರುವ ಸಂಶಯ ಬಲವಾಗಿ ಮೂಡುತ್ತಿದೆ. ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಿದೆ. ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಿದೆ.

    ಅಕ್ರಮ ಮುಚ್ಚಿ ಹಾಕುವ ಹುನ್ನಾರ: ಹಾವೇರಿ, ಧಾರವಾಡ ಹಾಲು ಒಕ್ಕೂಟದ ಕೆಲ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪ್ರಭಾವ ಬಳಸಿ ಅಕ್ರಮ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಹಾಗಾಗಿ, ಎಫ್‌ಐಆರ್ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಅವಧಿಯೊಳಗೆ ಅವರು ಅಗತ್ಯ ದಾಖಲೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂಬ ಗುಮಾನಿ ಎದ್ದಿದೆ.
    ಕ್ರಮಕ್ಕೆ ಕಾಲಹರಣ: ಡೊಂಬರಮತ್ತೂರಿನ ಶೆಡ್‌ನಲ್ಲಿ ಹಾಲಿನ ಪುಡಿ ಪತ್ತೆಯಾದಾಗ, ಯೋಗ ದಿನಾಚರಣೆ, ಶಾಲೆಗಳಿಗೆ ರಜೆ ಇದ್ದ ಕಾರಣ ಶೆಡ್‌ನಲ್ಲಿ ಸಂಗ್ರಹಿಸಿದ್ದೆವು ಎಂದು ಸಂಗ್ರಹ ಮಾಡಿಕೊಂಡಿದ್ದವರು ಹೇಳಿಕೆ ನೀಡಿದ್ದರು. ನಂತರ ಧಾಮುಲ್ ಅಧಿಕಾರಿಗಳು, ಧಾರವಾಡ ವಿದ್ಯಾಗಿರಿ ಠಾಣೆಗೆ ದೂರು ಕೊಡುತ್ತೇವೆ. ಗುತ್ತಿಗೆದಾರನ ಪರವಾನಗಿ ಅಮಾನತು ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ವರಸೆ ಬದಲಿಸಿರುವ ಅಧಿಕಾರಿಗಳು, ಪ್ರಕರಣ ನಡೆದ ಸ್ಥಳ ವಿದ್ಯಾಗಿರಿ ಠಾಣೆ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ, ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ. ದಂಧೆಗೆ ಬ್ರೇಕ್ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ, ಅಕ್ರಮ ಮುಚ್ಚಿ ಹಾಕುವ ಯತ್ನಗಳು ನಡೆದಿರುವುದನ್ನು ಪುಷ್ಟೀಕರಿಸುತ್ತವೆ.

    ಶಾಲೆಗಳಿಗೆ ತಲುಪಬೇಕಿದ್ದ ಹಾಲಿನ ಪುಡಿ ಅಕ್ರಮ ದಂಧೆಕೋರರ ಶೆಡ್ ಸೇರುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಐದು ದಿನ ಕಳೆದರೂ ಎಫ್‌ಐಆರ್ ಮಾಡದಿರುವ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ತಪ್ಪಿತಸ್ಥರೆಲ್ಲರ ವಿರುದ್ಧ ಕ್ರಮ ಜರುಗಿಸಬೇಕು.
    ರಾಜಶೇಖರ ಬಳ್ಳಾರಿ, ಗ್ರಾಪಂ ಸದಸ್ಯ ಡೊಂಬರಮತ್ತೂರ

    ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಎಫ್‌ಆರ್ ಮಾಡಲು ಮುಂದಾಗಿದ್ದೆವು. ಸವಣೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾರಣ ಅಲ್ಲಿಯೇ ಪ್ರಕರಣ ದಾಖಲಿಸಲಾಗುವುದು. ಗುತ್ತಿಗೆದಾರ ಶಿವಕುಮಾರ ನಾಡಗೌಡ ದೇಸಾಯಿ ಟೆಂಡರ್ ರದ್ದುಗೊಳಲಾಗಿದೆ. ಅವರ ಪರವಾನಗಿ ರದ್ದುಗೊಳಿಸಿ, ಕಪ್ಪುಪಟ್ಟಿಗೆ ಸೇರಿಸಲಾಗುವುದು.
    ಡಾ. ವೀರೇಶ ತರಲಿ, ಎಂಡಿ, ಧಾರವಾಡ ಹಾಲು ಒಕ್ಕೂಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts