More

    ವಚನ ಸಾಹಿತ್ಯದ ಬೆಳಕು ಫ.ಗು.ಹಳಕಟ್ಟಿ

    | ಎಂ.ಬಿ. ಪಾಟೀಲ

    ಉಳ್ಳವರು ಶಿವಾಲಯ ಮಾಡಿಹರು,
    ನಾನೇನ ಮಾಡುವೆ ಬಡವನಯ್ಯಾ.
    ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನಕಲಶವಯ್ಯಾ.
    ಕೂಡಲಸಂಗಮದೇವಾ, ಕೇಳಯ್ಯಾ
    ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

    ವಚನ ಸಾಹಿತ್ಯದ ಬೆಳಕು ಫ.ಗು.ಹಳಕಟ್ಟಿ ವಿಶ್ವಗುರು ಬಸವಣ್ಣನವರ ಈ ವಚನ ಬಹು ಪ್ರಖ್ಯಾತಿ. ತಾಡೋಲೆಯಲ್ಲಿದ್ದ ಈ ವಚನವನ್ನು ಪ್ರಕಟಿಸಿ, ಪ್ರಚಾರ ಮಾಡಿದವರು ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು. 12ನೇ ಶತಮಾನದಲ್ಲಿ ತಾಡೋಲೆಗಳಲ್ಲಿ ಬರೆಯಲ್ಪಟ್ಟಿದ್ದ ವಚನ ಸಾಹಿತ್ಯ, ಕಲ್ಯಾಣ ಕ್ರಾಂತಿಯ ನಂತರ ಚೆಲ್ಲಾಪಿಲ್ಲಿಯಾಗಿತ್ತು. ಶರಣರು ಈ ವಚನ ಸಾಹಿತ್ಯವನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದರು. ವಚನ ಸಾಹಿತ್ಯವನ್ನು ತೆಗೆದುಕೊಂಡು ಕಲ್ಯಾಣದಿಂದ ಹೊರ ಹೊರಟ ಶರಣರು ಅಲ್ಲಲ್ಲಿ ಸಾಹಿತ್ಯವನ್ನು ರಕ್ಷಿಸಿರೆಂದು ಕೊಟ್ಟು ಹೋದರು. ಈ ರೀತಿ ಶರಣರಿಂದ ಪಡೆದಿದ್ದ ತಾಡೋಲೆಗಳನ್ನು ಶತಮಾನಗಳಿಂದ ಹಲವು ತಲೆಮಾರಿನವರು ತಮ್ಮ ಮನೆ-ಮಠಗಳಲ್ಲಿ, ಗದ್ದುಗೆಗಳಲ್ಲಿ ಭಕ್ತಿಯಿಂದ ಪೂಜಿಸುತ್ತ ಬಂದಿದ್ದರು.

    ಶಿಕ್ಷಕ ಗುರುಬಸಪ್ಪ, ದಾನಾದೇವಿ ದಂಪತಿಗೆ 1880ರ ಜುಲೈ 2ರಂದು ಫಕೀರಪ್ಪ ಹಳಕಟ್ಟಿ ಅವರು ಜನಿಸಿದರು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಆಗಿನ ಪ್ರಮುಖ ಪತ್ರಿಕೆಯಾದ ‘ವಾಗ್ಭೂಷಣ’ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು. ಕೆ.ಎಲ್.ಇ. ಸಂಸ್ಥೆ ಸ್ಥಾಪಕರಲ್ಲಿ ಒಬ್ಬರಾದ ಮತ್ತು ಮಾವನವರಾದ ತಮ್ಮಣ್ಣಪ್ಪ ಚಿಕ್ಕೋಡಿ ಅವರ ಸೂಚನೆ ಮೇರೆಗೆ 1904ರಲ್ಲಿ ವಕೀಲಿ ವೃತ್ತಿಗಾಗಿ ಧಾರವಾಡದಿಂದ ವಿಜಯಪುರಕ್ಕೆ ಬಂದಿದ್ದ ಫಕೀರಪ್ಪ ವಕೀಲಿ ವೃತ್ತಿ ಜೊತೆಗೆ ವಿಜಯಪುರ ನಗರಸಭೆ ಅಧ್ಯಕ್ಷರಾದರು. ಮರಾಠಿಮಯವಾಗಿದ್ದ ವಿಜಯಪುರದಲ್ಲಿ ಪ್ರಥಮವಾಗಿ ಕನ್ನಡ ಶಾಲೆಯನ್ನು ಪ್ರಾರಂಭಿಸಿದರು. ಅಖಿಲ ಭಾರತ ವೀರಶೈವ ಮಹಾಸಭೆಯ ಕರೆಯಂತೆ 1910ರಲ್ಲಿ ಬಿಜಾಪುರ ಲಿಂಗಾಯತ ಜಿಲ್ಲಾ ಶಿಕ್ಷಣ ಸಂಸ್ಥೆ ನೋಂದಣಿ ಮಾಡಿಸಿದರು. ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 1921ರಲ್ಲಿ ಭೂತನಾಳ ಕೆರೆಯನ್ನು ಕಟ್ಟಿಸಿದರು.

    12ನೇ ಶತಮಾನದ ಶರಣ, ಕಾಯಕಯೋಗಿ ಸಿದ್ಧರಾಮೇಶ್ವರರ ಸ್ಮರಣೆಯಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆಯನ್ನು ಧಾರ್ವಿುಕ ಚಟುವಟಿಕೆಗಳಿಗೆ ಆರಂಭಿಸಿದರು. ಜೊತೆಗೆ ಆರ್ಥಿಕ ಅನುಕೂಲತೆಗಾಗಿ ಶ್ರೀ ಸಿದ್ಧೇಶ್ವರ ಬ್ಯಾಂಕ್​ನ್ನು ಪ್ರಾರಂಭಿಸಿದ ಪ್ರಾತಃಸ್ಮರಣೀಯರು ಫ.ಗು. ಹಳಕಟ್ಟಿಯವರು. ಇವರದು ವೈವಿಧ್ಯಮಯ ವ್ಯಕ್ತಿತ್ವ. ವಕೀಲರಾಗಿ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಅಷ್ಟಕ್ಕೆ ಸೀಮಿತರಾಗದೆ, ಸಮಾಜಮುಖಿ ಸಂಘ-ಸಂಸ್ಥೆಗಳನ್ನು ಆರಂಭಿಸುವ ಮೂಲಕ ಜನಮುಖಿಯಾದರು. ನಂತರದಲ್ಲಿ ಮುಂಬೈ ವಿಧಾನ ಪರಿಷತ್ತಿನ ಸದಸ್ಯರಾದರು.

    ರಬಕವಿಯ ಶಿವಲಿಂಗಪ್ಪ ಮಂಚಾಲೆ ಮನೆಯಲ್ಲಿದ್ದ ಷಟ್​ಸ್ಥಲತಿಲಕ ಮತ್ತು ಪ್ರಭುಲಿಂಗದೇವರ ವಚನಗಳ ತಾಳೆ ಗರಿಗಳನ್ನು ನೋಡಿ ಆಕರ್ಷಿತರಾಗಿದ್ದ ಹಳಕಟ್ಟಿ ಅವರಿಗೆ ವಕೀಲ ವೀರಭದ್ರಪ್ಪ ಹಾಲಭಾವಿ ಅವರು ಗೋಠೆ ಗ್ರಾಮದಲ್ಲಿದ್ದ ಹಸ್ತಪ್ರತಿಗಳ ದೊಡ್ಡ ಮೂಟೆಯನ್ನೇ ತಂದುಕೊಟ್ಟರು. ಅದರಲ್ಲಿದ್ದ ‘ಪ್ರಭುಲಿಂಗಲೀಲೆ’, ‘ಗಣಭಾಷಿತರತ್ನಮಾಲೆ’ ಹಸ್ತಪ್ರತಿ ವಚನಗಳನ್ನು ಓದಿ ಸಮಗ್ರವಾಗಿ ಪರಿಶೀಲಿಸಿ, ಮಹತ್ವದ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡರು. ಬನಹಟ್ಟಿ ಶಿವಲಿಂಗಪ್ಪ ಗಲಗಲಿಯವರ ಮನೆಯಲ್ಲಿ 32, ಗುರುಬಸಯ್ಯ ಕಂತಿಯವರ ಮನೆಯಲ್ಲಿ 16, ಗುರುಸಿದ್ದಪ್ಪ ಗಿಲಗಂಚಿಯವರ ಮನೆಯಲ್ಲಿ 17, ಭೋಜಪ್ಪ ಭೋಜರ ಮನೆಯಲ್ಲಿ 10, ಶಿವಲಿಂಗಪ್ಪ ಮಂಚಾಲಿಯವರ ಮನೆಯಲ್ಲಿ ಪುರಾತನ ಗ್ರಂಥಗಳ ದೊಡ್ಡ ರಾಶಿಯನ್ನೇ ಗಮನಿಸಿದರು. ಮುಂದೆ ಶೋಧ, ಸಂಗ್ರಹಕಾರ್ಯವನ್ನು ಕೈಗೆತ್ತಿಕೊಂಡರು.

    ಹಳಕಟ್ಟಿಯವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ನಿರಂತರ 35 ವರ್ಷಗಳ ಕಾಲ ಮನೆ-ಮಠಗಳಿಗೆ ತೆರಳಿ, ತಾಡೋಲೆಗಳನ್ನು ಸಂಗ್ರಹಿಸಿ, ಅದರಲ್ಲಿನ ಸಾಹಿತ್ಯವನ್ನು ಜನರಿಗೆ ತಲುಪಿಸಲು ಸ್ವತಃ ‘ಹಿತಚಿಂತಕ ಮುದ್ರಣಾಲಯ’ ಸ್ಥಾಪಿಸಿದರು. ತಾವೇ ಪೆಡಲ್ ಯಂತ್ರದಿಂದ ಕೈಯಾರೆ ಮುದ್ರಿಸಿದರು. 1926ರಲ್ಲಿ ‘ಶಿವಾನುಭವ’ ತ್ರೖೆಮಾಸಿಕ ಪತ್ರಿಕೆ ಹಾಗೂ 1927ರಲ್ಲಿ ‘ನವಕರ್ನಾಟಕ’ ವಾರಪತ್ರಿಕೆ ಹೊರತಂದರು. ಹಳಕಟ್ಟಿಯವರಿಗಿಂತ ಮೊದಲು 2500 ವಚನಗಳು ಪ್ರಕಟಗೊಂಡಿದ್ದವು. ಹಳಕಟ್ಟಿಯವರ 35 ವರ್ಷಗಳ ಪರಿಶ್ರಮದಿಂದ ವಿವಿಧ ಶರಣರ 10 ಸಾವಿರ ವಚನಗಳು ಹೊರಬಂದವು.

    ಉದಾ: ಶರಣ ಉರಿಲಿಂಗ ದೇವ;
    ಲೋಕದಂತೆ ಬಾರರು, ಲೋಕದಂತೆ ಇರರು,
    ಲೋಕದಂತೆ ಹೋಗರು, ನೋಡಯ್ಯ.
    ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,
    ಮುಕ್ತಿಯಂತೆ ಹೋಹರು, ನೋಡಯ್ಯಾ.
    ಉರಿಲಿಂಗದೇವಾ, ನಿಮ್ಮ ಶರಣರು
    ಉಪಮಾತೀತರಾಗಿ ಉಪಮಿಸಬಾರದು.
    ಅದೇ ರೀತಿ, ಶರಣ ಬಹುರೂಪಿ ಚೌಡಯ್ಯ ಅವರ ವಚನ;
    ಮಿತಭೋಜನ ಮಿತವಾಕು ಮಿತನಿದ್ರೆಯ ಮಾಡಿರಣ್ಣಾ.
    ಯೋಗಸಿದ್ಧಿ ಬೇಕಪ್ಪಡೆ ಅತ್ಯಾಹಾರ ಇಂದ್ರಿಯ ವ್ಯವಹಾರ
    ರೇಕಣ್ಣಪ್ರಿಯ ನಾಗಿನಾಥಿನಲ್ಲಿ ಅಳಿಯದಂತೆ
    ಉಳಿಹಿಕೊಳ್ಳಿರಣ್ಣ, ಯೋಗ ಸಾಧ್ಯವಪ್ಪನ್ನಕ್ಕ.

    ಇಂಥಹ ನೂರಾರು ಶರಣರ 10 ಸಾವಿರಕ್ಕಿಂತಲೂ ಮಿಕ್ಕಿ ವಚನಗಳನ್ನು ಹಳಕಟ್ಟಿ ಅವರು ಸಂಗ್ರಹಿಸಿ ಪ್ರಕಟಿಸಿದ್ದು, ಐತಿಹಾಸಿಕ ದಾಖಲೆ.

    ವಚನ ಸಾಹಿತ್ಯಕ್ಕೆ ಇವರ ಜೀವನ ಸಮರ್ಪಿತವಾದ ಮೇಲೆ ಪತ್ರಿಕೆ ನಡೆಸುವುದು, ಮುದ್ರಣಾಲಯದಲ್ಲಿ ಪ್ರಕಟಿಸಲು ಕಷ್ಟವಾದಾಗ ಇದ್ದ ಮನೆಯನ್ನು ಮಾರಿ, ಬಾಡಿಗೆಮನೆಯಲ್ಲಿದ್ದು, ತಮ್ಮ ಜೀವನನ್ನು ತ್ಯಾಗ ಮಾಡಿದವರು ಹಳಕಟ್ಟಿಯವರು. ಮೈಸೂರು ಮಹಾರಾಜರೊಮ್ಮೆ ಭೇಟಿಯಾದಾಗ ಸನ್ಮಾನಿಸಿ, ‘ನಿಮಗೆ ಏನಾದರೂ ಸಹಾಯ ಬೇಕೆ?’ ಎಂದು ಕೇಳಿದಾಗ, ‘ವಚನ ಸಾಹಿತ್ಯ ಮುದ್ರಿಸಲು ಪ್ರಿಂಟಿಂಗ್ ಪ್ರೆಸ್ ಹಾಕಿದ್ದು, ಅವುಗಳಿಗೆ ಜೋಡಿಸುವ ಮೊಳೆಗಳನ್ನು ಲಂಡನ್​ನಿಂದ ತರಿಸಿ ಕೊಡಬೇಕು’ ಎಂದು ವಿನಂತಿಸಿದ್ದರು.

    ಸ್ವಂತಕ್ಕೆ ಏನನ್ನು ಬಯಸದೆ ಸಮಾಜಕ್ಕೆ ಸರ್ವಸ್ವವನ್ನು ಧಾರೆ ಎರೆದ ಹಳಕಟ್ಟಿಯವರು, ಪ್ರತಿಕೋದ್ಯಮದ ದಿನಗಳಲ್ಲಿ ಬಡತನವನ್ನೇ ಮೈತುಂಬ ಹೊತ್ತುಕೊಂಡರು. ಮಗ ದೂರದ ದೆಹಲಿಯಲ್ಲಿ ಅಪಘಾತಕ್ಕೀಡಾಗಿ ಮರಣವಾದಾಗ, ‘ಶಿವನ ಸೊತ್ತು, ಶಿವನಿಗೆ ಸಲ್ಲಿದೆ, ಇರಲಿ, ಇದೀಗ ಅಪ್ರಕಟಿತ ವಚನಸಾಹಿತ್ಯದ ಕಾರ್ಯ ಬಹಳಷ್ಟಿದೆ. ಅದನ್ನು ಪ್ರಕಟಿಸಬೇಕಿದೆ’ ಎಂದ ಪುಣ್ಯಾತ್ಮರಿವರು.

    1964ರ ಜೂನ್ 29ರಂದು ಅಗಲಿದ ಹಳಕಟ್ಟಿ ಅವರ ಹೆಸರನ್ನು ಶಾಶ್ವತವಾಗಿರಿಸಲು ಅವರ ಸಮಾಧಿ ಇರುವ ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆ ಆವರಣದಲ್ಲಿಯೇ ಭವ್ಯ ಸ್ಮಾರಕ ನಿರ್ವಿುಸಲಾಗಿದೆ ಮತ್ತು ಅವರ ಹೆಸರಿನ ಸಂಶೋಧನಾ ಕೇಂದ್ರ ಇಡೀ ರಾಜ್ಯದಲ್ಲಿ ಅತ್ಯುತ್ತಮ ಮಾದರಿಯಾಗಿದೆ. ಅಲ್ಲದೆ, ಇತ್ತೀಚೆಗೆ ಬೆಂಗಳೂರಿನಲ್ಲಿಯೂ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿಯೂ ವಚನಸಾಹಿತ್ಯ ಸಂಶೋಧನ ಕಾರ್ಯ ನಡೆಯುತ್ತಿದೆ. ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷನಾಗಿರುವ ನನಗೆ ಅವರು ಸದಾ ಪ್ರೇರಣಾಶಕ್ತಿ ಮತ್ತು ಆತ್ಮಬಲವಾಗಿದ್ದಾರೆ.

    ಇಂದು ಪ್ರಶಸ್ತಿ ಪ್ರದಾನ: ಡಾ. ಫ.ಗು. ಹಳಕಟ್ಟಿ ಫೌಂಡೇಷನ್ ಪ್ರದಾನಿಸುವ ವಚನ ಪಿತಾಮಹ ‘ಫ.ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ’ಗೆ ಸಾಹಿತ್ಯ ಕ್ಷೇತ್ರದಿಂದ ಸಾಣೇಹಳ್ಳಿಯ ಪಂಡಿತಾರಾಧ್ಯ ಡಾ. ಶಿವಾಚಾರ್ಯ ಸ್ವಾಮೀಜಿ, ಶಿಕ್ಷಣ ಕ್ಷೇತ್ರದಿಂದ ಪ್ರಭಾಕರ ಕೋರೆ ಹಾಗೂ ಸಮಾಜಸೇವೆ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ತಲಾ ಒಂದು ಲಕ್ಷ ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ಸಂಜೆ 5.30ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ.

    (ಲೇಖಕರು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts