More

    ಕೀಟ ಚಿಕ್ಕದು ಕಾಟ ದೊಡ್ಡದು

    ಗೌರಿಬಿದನೂರಿನಲ್ಲಿ ಡೆಂಘೆ ಜಾಗೃತಿ ಜಾಥಾ- ಜ್ವರದ ಉದಾಸೀನ ಬೇಡ ಎಂದು ತಹಸೀಲ್ದಾರ್ ಎಚ್ಚರಿಕೆ

    ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
    ಡೆಂಘಿ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ ಉದಾಸೀನ ತೋರಬಾರದು ಎಂದು ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಹೇಳಿದರು.
    ನಗರದ 6ನೇ ವಾರ್ಡ್‌ನಲ್ಲಿ ಆರೋಗ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಘಿ ಜ್ವರದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
    ಇತ್ತೀಚಿನ ದಿನಗಳಲ್ಲಿ ಜನರನ್ನು ಡೆಂಘೆ ಜ್ವರ ಮಾರಕವಾಗಿ ಕಾಡುತ್ತಿದೆ. ಇದರ ನಿಯಂತ್ರಣ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಸಾಂಕ್ರಾಮಿಕ ರೋಗಗಳಾದ ಡೆಂಘೆ ಹಾಗೂ ಮಲೇರಿಯಾ ರೋಗಗಳನ್ನು ತಡೆಯಬಹುದಾಗಿದೆ ಎಂದರು.
    ಮುಂಗಾರು ಸಂದರ್ಭದಲ್ಲಿ ಡೆಂಘೆ ಬಹಳ ವೇಗವಾಗಿ ಹರಡುತ್ತದೆ. ಸಾರ್ವಜನಿಕರು ಸುತ್ತಮುತ್ತಲ ಪರಿಸರದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸುವ ಜತೆಗೆ, ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಮಾರಕ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರ ಮೋಹಬ್ ರೆಡ್ಡಿ ಮಾತನಾಡಿ, ಯಾವುದೇ ಜ್ವರ ಬಂದರೂ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸಬೇಕು. ಡೆಂಘೆ ಜ್ವರ ರೋಗಕ್ಕೆ ತುತ್ತಾದವರಿಗೆ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಭಾಗದಲ್ಲಿ ತೀವ್ರನೋವು, ಕೀಲುನೋವು ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ನಗರಸಭೆ ಆಯುಕ್ತೆ ಎಂ.ಡಿ.ಗೀತಾ ಮಾತನಾಡಿ, ಎಲ್ಲಿ ಅನೈರ್ಮಲ್ಯ ಇರುತ್ತದೆಯೇ ಅಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಡೆಂಘೆ ಹಾಗೂ ಮಲೇರಿಯಾ ಜ್ವರ ನಿಯಂತ್ರಿಸಬೇಕಾದರೆ ನೀರಿನ ತೊಟ್ಟಿ, ಹಳೆಯ ಟೈರು, ಮಣ್ಣಿನ ಮಡಕೆ ಹಾಗೂ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತೆರೆದ ನೀರಿನ ತೊಟ್ಟಿ, ಡ್ರಂ, ಬ್ಯಾರಲ್, ಏರ್‌ಕೂಲರ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ಭರ್ತಿ ಮಾಡಿಕೊಳ್ಳಬೇಕು ಎಂದರು.

    ಕೀಟ ಚಿಕ್ಕದು ಕಾಟ ದೊಡ್ಡದು, ಡೆಂಘೆ ಜ್ವರದ ಬಗ್ಗೆ ಉದಾಸೀನ ಬೇಡ ಸೇರಿ ವಿವಿಧ ಘೋಷಣೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು.

    ನಗರಸಭಾ ಸದಸ್ಯ ಡಿ.ಎನ್. ವೆಂಕಟರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್‌ಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿ, ಆರೋಗ್ಯ ನಿರೀಕ್ಷಕ ನವೀನ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts