More

    11ನೇ ವಯಸ್ಸಿನಲ್ಲೇ ಎಮ್ಮೆ ಹಾಲು ಮಾರಾಟ! ಕೋಟಿಗಳ ಸಾಮ್ರಾಜ್ಯ ಕಟ್ಟಿದ ಯುವತಿಯ ಯಶೋಗಾಥೆ ಇದು…

    ಯಶಸ್ಸು ಸುಮ್ಮನೇ ಯಾರಿಗೂ ಬರುವುದಿಲ್ಲ ಮತ್ತು ಯಶಸ್ಸಿಗೂ ವಯಸ್ಸಿಗೆ ಯಾವುದೇ ಸಂಬಂಧವಿಲ್ಲ. ನಿಮ್ಮ ಮನಸ್ಸನ್ನು ಚುರುಕುಗೊಳಿಸಿ, ಬುದ್ಧಿವಂತಿಕೆಯಿಂದ ಯೋಚಿಸಿ ಅದಕ್ಕಾಗಿ ಶ್ರಮಿಸಿದರೆ ಸಾಕು ಯಾವುದೇ ಪವಾಡಗಳನ್ನು ಸೃಷ್ಟಿಸಬಹುದು ಮತ್ತು ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಹುದು. ಈ ಆಲೋಚನೆಗಳು, ಕಠಿಣ ಪರಿಶ್ರಮ ಮತ್ತು ಯಶಸ್ಸಿಗೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ಅಯ್ಯೋ… ಇದನ್ನೆಲ್ಲ ಈಗ್ಯಾಕೆ ಹೇಳ್ತಿದ್ದೀರಿ ಅಂತಾ ನೀವು ಕೇಳಬಹುದು. ಅದಕ್ಕೊಂದು ಕಾರಣವೂ ಇದೆ. ಈ ಸ್ಟೋರಿಯನ್ನು ಮಿಸ್​ ಮಾಡದೇ ಓದಿ, ನಿಮ್ಮ ಜೀವನಕ್ಕೆ ಒಂದು ಸ್ಫೂರ್ತಿ ಸಿಗುತ್ತದೆ.

    ಹನ್ನೊಂದನೇ ವಯಸ್ಸಿನಲ್ಲಿ ಸಾಮಾನ್ಯವಾಗಿ ಏನು ಮಾಡಬಹುದು? ಸ್ವಾಭಾವಿಕವಾಗಿ, ಆ ವಯಸ್ಸಿನಲ್ಲಿ ಮಕ್ಕಳು ಶಾಲೆಗೆ ಹೋಗುತ್ತಾರೆ, ಬರುತ್ತಾರೆ ಮತ್ತು ಓದುತ್ತಾರೆ. ಅದನ್ನು ಮೀರಿ ಅವರಿಗೆ ಕೆಲಸವಿಲ್ಲ, ಪ್ರಪಂಚವಿಲ್ಲ. ಆದರೆ ಈಗ ನಾವು ಮಾತನಾಡಲು ಹೊರಟಿರುವ ಯುವತಿಯೊಬ್ಬಳು ತನ್ನ ಹದಿಹರೆಯದಿಂದಲೂ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾಳೆ. ಮೇಲಾಗಿ ಆಕೆ ಇಂದು ಕೋಟಿಗಟ್ಟಲೆ ದುಡಿಯುವ ವ್ಯಾಪಾರದ ಮುಖ್ಯಸ್ಥಳಾಗಿದ್ದಾಳೆ. ಶಾಲಾ ಹಂತದಿಂದಲೇ ಕಠಿಣ ಪರಿಶ್ರಮದೊಂದಿಗೆ ಇಂದು ವ್ಯಾಪಾರ ಸಾಮ್ರಾಜ್ಯದ ಮುಖ್ಯಸ್ಥೆಯಾದ ಯುವತಿಯ ಯಶೋಗಾಥೆಯ ಬಗ್ಗೆ ನಾವಿಂದು ತಿಳಿಯೋಣ.

    ಸಾಮಾನ್ಯವಾಗಿ 11ನೇ ವಯಸ್ಸಿನ ಯಾರೇ ಆಗಿರಲಿ ಅವರು ಓದಿನಲ್ಲಿ ಮಾತ್ರ ತೊಡಗಿಸಿಕೊಂಡಿರುತ್ತಾರೆ. ಆದರೆ, ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಯುವತಿಯೊಬ್ಬಳು 11 ವಯಸ್ಸಿನಿಂದಲೇ ವ್ಯಾಪಾರವನ್ನು ಆರಂಭಿಸಿದಳು. ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾಳೆ. ಆಕೆಯದ್ದು ಡೈರಿ ವ್ಯಾಪಾರ ಆಗಿದೆ. ತಾನು ಸಾಕಿದ ಎಮ್ಮೆಗಳಿಂದ ಹಾಲನ್ನು ಕರೆದು ಮಾರಾಟ ಮಾಡುವುದರಿಂದ ಆರಂಭವಾದ ಆಕೆಯ ಕೆಲಸ ಇಂದು ಡೈರಿ ಫಾರಂ ಮಾಡಿ ಕೋಟಿಗೊಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾಳೆ. ಆ ಯುವತಿಯ ಹೆಸರು ಶ್ರದ್ಧಾ ಧವನ್.

    ಶ್ರದ್ಧಾ ಧವಮ್​ ತಂದೆ ಸತ್ಯವಾನ್ ವಿಕಲಚೇತನರು. ಆದ್ದರಿಂದ ಚಿಕ್ಕಂದಿನಿಂದಲೂ ಶ್ರದ್ಧಾ ಒಂದೆಡೆ ವಿದ್ಯಾಭ್ಯಾಸ ಮಾಡಿಕೊಂಡು, ಮತ್ತೊಂದೆಡೆ ತಂದೆಗೆ ವ್ಯಾಪಾರದಲ್ಲಿ ನೆರವಾಗುತ್ತಿದ್ದಳು. ಚಿಕ್ಕವಳಾಗಿದ್ದಾಗ ಎಮ್ಮೆಗಳಿಗೆ ಹಾಲುಣಿಸಿ, ಹತ್ತಿರದ ಡೈರಿಗಳಿಗೆ ಹಾಲು ಸರಬರಾಜು ಮಾಡುತ್ತಿದ್ದರು. ಆದರೆ, ಇಂದು ಏಕಾಂಗಿಯಾಗಿ ಕಂಪನಿಯನ್ನು ನಡೆಸುತ್ತಿದ್ದಾರೆ. ಶ್ರದ್ಧಾ ಧವನ್ ಅವರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಅಂದರೆ 13, 14ನೇ ವಯಸ್ಸಿನಲ್ಲೇ ತಮ್ಮ ಎಮ್ಮೆಗಳಿಂದ ಹಾಲಿನ ವ್ಯಾಪಾರವನ್ನು ಪ್ರಾರಂಭಿಸಿದರು. ಹಾಲು ಕರೆಯುವ ಕಲೆಯಿಂದ ಹಿಡಿದು ವ್ಯಾಪಾರಿಗಳೊಂದಿಗೆ ಬುದ್ಧಿವಂತ ಮಾತುಕತೆಗಳವರೆಗೆ ಎಲ್ಲವನ್ನೂ ಕಲಿತಳು.

    ತನ್ನ ಜಾಣ್ಮೆಯಿಂದಲೇ ಶ್ರದ್ಧಾ, ಎಮ್ಮೆಯ ಹಾಲನ್ನು ಮಾರಾಟ ಮಾಡುವುದರಿಂದ ಡೈರಿ ಉದ್ಯಮವನ್ನು ಸ್ಥಾಪಿಸುವವರೆಗೆ ಏರಿದರು. ಈ ಪ್ರಯಾಣದಲ್ಲಿ ಆಕೆ ಎಲ್ಲೂ ಸಾಲ ಮಾಡಿಲ್ಲ. ಆಕೆ ಸರ್ಕಾರದ ಅನೇಕ ಪ್ರಯೋಜನಗಳನ್ನು ಸಹ ಪಡೆದರು. 2017ರಲ್ಲಿ ಅವರ ಬಳಿ 45 ಎಮ್ಮೆಗಳಿದ್ದವು. ಕ್ರಮೇಣ ಹಾಲಿನ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಿದರು. ಆದರೆ ಅದು ಅಲ್ಲಿಗೆ ನಿಲ್ಲದೆ, ಶ್ರದ್ಧಾ ತಮ್ಮ ವ್ಯಾಪಾರದ ಪ್ರಯತ್ನಗಳನ್ನು ವೈವಿಧ್ಯಗೊಳಿಸಿದರು. ಅವಳು ವರ್ಮಿಕಾಂಪೋಸ್ಟಿಂಗ್‌ನಲ್ಲಿ ತೊಡಗಿದಳು. ಅವರ ಕಂಪನಿ ತಿಂಗಳಿಗೆ 30,000 ಕೆಜಿ ವರ್ಮಿಕಾಂಪೋಸ್ಟ್ ಅನ್ನು ಉತ್ಪಾದಿಸುತ್ತದೆ. ಸಿಎಸ್ ಆಗ್ರೋ ಆರ್ಗಾನಿಕ್ಸ್ ಬ್ರ್ಯಾಂಡ್ ಅಡಿಯಲ್ಲಿ ಇದನ್ನು ಮಾರಲಾಗುತ್ತದೆ. ಇದಿಷ್ಟೇ ಅಲ್ಲದೆ, ಎಮ್ಮೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಿದಳು. ತನ್ನ ಸಾಮ್ರಾಜ್ಯವನ್ನು ಶೂನ್ಯ-ತ್ಯಾಜ್ಯ ವ್ಯಾಪಾರವಾಗಿ ವಿಸ್ತರಿಸಿದಳು.

    ಇದೆಲ್ಲದರ ಜೊತೆಗೆ ಶ್ರದ್ಧಾ ಆನ್‌ಲೈನ್ ಮತ್ತು ಆಫ್‌ಲೈನ್ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಾರೆ. ತನ್ನ ಜ್ಞಾನ ಮತ್ತು ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾಳೆ. ಸದ್ಯ ಶ್ರದ್ಧಾ ಧವನ್‌ಗೆ 24 ವರ್ಷ. ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಸದ್ಯ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ನಿಘೋಜ್ ಗ್ರಾಮದ ಶ್ರದ್ಧಾ ಫಾರ್ಮ್‌ನ ಮುಖ್ಯಸ್ಥೆಯಾಗಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಶ್ರದ್ಧಾ ಡೈರಿ, ವರ್ಮಿಕಾಂಪೋಸ್ಟ್ ಮತ್ತು ತರಬೇತಿ ವ್ಯವಹಾರಗಳು ಸೇರಿ ಒಟ್ಟಾರೆಯಾಗಿ 1 ಕೋಟಿ ರೂಪಾಯಿ ಆದಾಯ ಬಂದಿದೆ. ಪ್ರಸ್ತುತ ಶ್ರದ್ಧಾ ಅವರ ಜಮೀನಿನಲ್ಲಿ 80 ಎಮ್ಮೆಗಳಿಗೆ ಅವಕಾಶ ಕಲ್ಪಿಸುವ ಎರಡು ಅಂತಸ್ತಿನ ಶೆಡ್ ಅನ್ನು ನಿರ್ಮಿಸಿದ್ದಾರೆ ಮತ್ತು ಅಲ್ಲಿಂದ ಹೈನುಗಾರಿಕೆಯನ್ನು ನಡೆಸುತ್ತಿದ್ದಾರೆ. ಚಿಕ್ಕಂದಿನಿಂದಲೂ ವ್ಯಾಪಾರದಲ್ಲಿ ಯಶಸ್ಸು ಸಾಧಿಸಿ, ಇಂದು ಸಂಸ್ಥೆಯ ಮುಖ್ಯಸ್ಥರಾಗಿರುವುದು ಹೆಮ್ಮೆಗೆ ಕಾರಣವಾಗಿದೆ. ಮೇಲಾಗಿ ಶ್ರದ್ಧಾ ಧವನ್ ಅವರ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ. (ಏಜೆನ್ಸೀಸ್​)

    ನಿಜ ಹೇಳ್ತೀನಿ 2 ಬಾರಿ ಅನುಷ್ಕಾ ಶರ್ಮಾರನ್ನು… ಮದ್ವೆ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟ ವಿಜಯ್​ ಮಲ್ಯ ಪುತ್ರ!

    ಭಾರತ-ಇಂಗ್ಲೆಂಡ್​ ಸೆಮೀಸ್​ಗೆ ಮಳೆ ಭೀತಿ; ಪಂದ್ಯ ರದ್ದಾದರೆ ಯಾರು ಫೈನಲ್​ಗೆ? ಐಸಿಸಿ ನಿಯಮವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts