More

    ಗ್ರಾಪಂ ಸ್ವತಂತ್ರ ನಿರ್ವಹಣೆಗೆ ಉದ್ಯೋಗ ಖಾತ್ರಿ ಯೋಜನೆ ಸಹಕಾರಿ

    ಪಂಚನಹಳ್ಳಿ: ಗ್ರಾಮ ಪಂಚಾಯಿತಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಉದ್ಯೋಗ ಖಾತ್ರಿ ಯೋಜನೆ ಅನುಕೂಲವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
    ಸೋಮವಾರ ಗಂಗನಹಳ್ಳಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಪಂ ವ್ಯವಸ್ಥೆಯನ್ನು ರಾಜೀವ್ ಗಾಂಧಿ ಅವರು ಜಾರಿಗೆ ತಂದರು. ಆದರೆ ಮನಮೋಹನ್ ಸಿಂಗ್ ಪ್ರಧಾನಿಯಾದಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದರು. ಈ ಕೇಂದ್ರ ಸರ್ಕಾರದಿಂದ ಮೂಲಕ ಕೋಟ್ಯಾಂತರ ರೂ.ಅನುದಾನ ಮಧ್ಯವರ್ತಿಗಳಿಲ್ಲದೆ ಗ್ರಾಪಂಗಳಿಗೆ ನೇರವಾಗಿ ಬರಲು ಆರಂಭವಾಯಿತು. ಇದರಿಂದ ಸ್ಥಳೀಯರಿಗೂ ಉದ್ಯೋಗ ದೊರೆಯಿತು ಎಂದರು.
    ಕಡೂರು ಕ್ಷೇತ್ರ ವ್ಯಾಪ್ತಿಗೆ ಒಟ್ಟು 47 ಗ್ರಾಪಂಗಳು ಬರುತ್ತವೆ. ಬಹುತೇಕ ಗ್ರಾಪಂಗಳು 1 ಕೋಟಿ ರೂ.ವರೆಗೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಅನುಮೋದನೆ ಪಡೆದು ಕೆಲಸ ಮಾಡಿದ್ದಾರೆ. ಇಷ್ಟು ಅನುದಾನ ಯಾವುದೇ ಶಾಸಕರಿಗೂ ಬರುವುದಿಲ್ಲ.15ನೇ ಹಣಕಾಸು ಯೋಜನೆ ಅನುದಾನವನ್ನು ಕುಡಿಯುವ ನೀರು ಮತ್ತು ಮತ್ತಿತರೆ ಬಹು ಮುಖ್ಯ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಚರಂಡಿ ಸ್ವಚ್ಛತೆಯಂತಹ ಸಣ್ಣಪುಟ್ಟ ಕೆಲಸಗಳಿಗೆ ವರ್ಗ 1ರ ಅನುದಾನ ಬಳಸಿಕೊಳ್ಳಬೇಕು. ಶಾಸಕನಾಗಿ ಗ್ರಾಪಂನ ಯಾವುದೇ ಅಧಿಕಾರ ಮತ್ತು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸದಸ್ಯರು ಕೂಡ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಮುರುಳಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಶಾಸಕರು ಸಹಕಾರ ನೀಡಬೇಕು. ಗ್ರಾಮದ ಕೆರೆ ಹಿಂದಿನ ಕೃಷಿ ಜಮೀನುಗಳಿಗೆ ತೆರಳಲು ಸಮಸ್ಯೆಯಾಗುತ್ತಿದೆ. ಅದ್ದರಿಂದ ಎರಡು ಸೇತುವೆ ನಿರ್ಮಾಣಕ್ಕೆ ಶಾಸಕರು ಸಹಕರಿಸಬೇಕು. ಕಡೂರಿನಿಂದ ಗಂಗನಹಳ್ಳಿ ಮಾರ್ಗವಾಗಿ ಪಂಚನಹಳ್ಳಿ ತಲುಪುವಂತೆ ಬಸ್‌ಗಳನ್ನು ಓಡಿಸಬೇಕು. ವರ್ಷದಲ್ಲಿ ಮೂರು ತಿಂಗಳು ಹೇಮಾವತಿ ಚಾನೆಲ್‌ನಿಂದ ಗಂಗನಹಳ್ಳಿ ಕೆರೆಗೆ ನೀರು ಬಿಡಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
    ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಎಚ್.ಜ್ಯೋತಿ, ರತ್ನಮ್ಮ, ಸ್ವಾಮಿ, ಸಂತೋಷ್,ಆಶಾ, ಮಾಜಿ ಅಧ್ಯಕ್ಷ ಶಿವಣ್ಣ, ಮುಖಂಡರಾದ ಷಣ್ಮುಖ ಭೋವಿ, ಪಿ.ಸಿ.ಪ್ರಸನ್ನ,ತಿಮ್ಮಲಾಪುರ ದಿನೇಶ್,ಪಿಡಿಒ ಲತಾ ಚರಣ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts