More

    ಬೆಂಗಳೂರಿನಲ್ಲಿ ಡೆಂಘೆಯಿಂದ ಯುವಕನ ಸಾವು ದೃಢ

    ಬೆಂಗಳೂರು: ಮಹಾನಗರದಲ್ಲಿ ಸೋಂಕಿನಿಂದ ಮೃತಪಟ್ಟಿದ್ದ 27 ವರ್ಷದ ಯುವಕನು ಡೆಂಘೆಯಿಂದಲೇ ಸಾವಿಗೀಡಾಗಿದ್ದಾನೆ ಎಂಬುದು ದೃಢಪಟ್ಟಿದೆ. ಈ ಸಂಬಂಧ ಬಿಬಿಎಂಪಿ ಶನಿವಾರ ಆರೋಗ್ಯ ಇಲಾಖೆಗೆ ಡೆತ್ ಆಡಿಟ್ ಸಲ್ಲಿಕೆ ಮಾಡಿದೆ.

    ಕೆಲ ದಿನಗಳ ಹಿಂದೆ ನಗರದಲ್ಲಿ ವೃದ್ಧೆ ಸೇರಿ ಇಬ್ಬರು ಮೃತಪಟ್ಟಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಇಬ್ಬರಿಗೂ ವಿವಿಧ ಕಾಯಿಲೆಗೆ ಒಳಗಾಗಿದ್ದರು. ಚಿಕಿತ್ಸೆ ಪಡೆಯುತ್ತಿರುವಾಗಲೇ ಡೆಂಘೆ ಸೋಂಕು ತಗುಲಿತ್ತು. ಆದರೆ, ತಮಿಳುನಾಡು ಮೂಲದ ವೃದ್ಧೆ ಕ್ಯಾನ್ಸರ್ ಸಹಿತ ಇನ್ನಿತರ ಕಾಯಿಲೆಗೆ ತುತ್ತಾಗಿದ್ದರು. ಇದರ ಜತೆಗೆ ಸೋಂಕು ತಗುಲಿದ್ದರೂ, ಡೆಂಘೆಯಿಂದ ಸತ್ತಿಲ್ಲ ಎಂದು ವರದಿಯಲ್ಲಿ ನಮೂದಿಸಲಾಗಿದೆ. ಸಿ.ವಿ.ರಾಮನ್‌ನಗರದ 27ರ ಹರೆಯದ ಯುವಕ ಇತರ ಕಾಯಿಲೆಯಿಂದ ಬಳಲುತ್ತಿದ್ದರೂ, ಡೆಂಘೆ ಸೋಂಕಿನಿಂದಲೇ ಸತ್ತಿರುವುದಾಗಿ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

    ಈ ಇಬ್ಬರೂ ವ್ಯಕ್ತಿಗಳ ಸಾವಿನ ವಿಚಾರದಲ್ಲಿ ಪಾಲಿಕೆಗೆ ಗೊಂದಲ ಇತ್ತು. ಜತೆಗೆ ಡೆಂಘೆ ಪ್ರಕರಣಗಳಲ್ಲಿ ಪರೀಕ್ಷೆ ಮಾಡದೆ ಏಕಾಏಕಿ ಸಾವನ್ನು ದೃಢಪಡಿಸುವಂತಿಲ್ಲ. ಖಾಸಗಿ ಆಸ್ಪತ್ರೆಗೂ ಈ ಅಧಿಕಾರ ಇಲ್ಲ. ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ ಬಳಿಕ ಅದನ್ನು ಆರೋಗ್ಯ ಇಲಾಖೆಗೆ ರವಾನಿಸಬೇಕು. ವರದಿಯನ್ನು ಪರಾಮರ್ಶಿಸಿಯೇ ಸ್ವತ: ಆರೋಗ್ಯ ಇಲಾಖೆ ಡೆಂಘೆ ಸಾವನ್ನು ಪ್ರಕಟಿಸುವ ನಿಯಮವನ್ನು ಪಾಲಿಸಲಾಗುತ್ತಿದೆ.

    ಪ್ರಕರಣಗಳ ಸಂಖ್ಯೆ 2 ಸಾವಿರಕ್ಕೆ ಏರಿಕೆ:

    ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೆ ಪ್ರಕರಣಗಳ ಸಂಖ್ಯೆ 2 ಸಾವಿರ ದಾಟಿದೆ. ಕಳೆದ ಜೂ.15ರವರೆಗೆ 1,230 ಪ್ರಕರಣಗಳು ದೃಢಪಟ್ಟಿದ್ದವು. ಡೆಂಘೆ ಹೆಚ್ಚಳ ಹಿನ್ನೆಲೆಯಲ್ಲಿ ಪಾಲಿಕೆಯು ಮನೆ ಮನೆ ಸಮೀಕ್ಷೆ ಆರಂಭಿಸಿದೆ. ಜತೆಗೆ ನಾಗರಿಕರಲ್ಲಿ ಜಾಗೃತಿ ಕೂಡ ಮೂಡಿಸುತ್ತಿದೆ. ಪ್ರತಿನಿತ್ಯವೂ ಎಲ್ಲ ಎಂಟೂ ವಲಯಗಳಲ್ಲಿ ಡೆಂಘೆ ಸಂಬಂಧ ಜಾಗೃತಿ, ತಪಾಸಣೆ ಹಾಗೂ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts