More

    ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಪತ್ರಕರ್ತರ ಕೊಡುಗೆ ಅಪಾರ

    ಪಿರಿಯಾಪಟ್ಟಣ: ಪತ್ರಕರ್ತರ ವೃತ್ತಿಗೆ ಗೌರವ ಉಳಿಯಬೇಕಾದರೆ ಸಮಸ್ಯೆಗಳ ಬಗ್ಗೆ ಮತ್ತು ಸಾಧಕರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.

    ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ರಾಜಕೀಯ ವ್ಯಕ್ತಿಗಳು ಮಾಡುವ ಟೀಕೆ ಮತ್ತು ಆರೋಪಗಳನ್ನು ಸತ್ಯಾಸತ್ಯತೆ ಪರಿಶೀಲಿಸದೆ ವರದಿ ಮಾಡುವ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಕೆಲವು ಪತ್ರಿಕೆಗಳು ತೇಜೋವಧೆ ಮಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

    ಪತ್ರಕರ್ತರು ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸುವ ಮೂಲಕ ಗ್ರಾಮೀಣ ಜನರ ಬದುಕು ಸುಧಾರಿಸಲು ನೆರವಾಗಬೇಕು. ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆ ಪತ್ರಕರ್ತರದಾಗಿದ್ದು ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಪತ್ರಕರ್ತರ ಕೊಡುಗೆ ಅಪಾರ ಎಂದರು.

    ಹಿರಿಯ ಪತ್ರಕರ್ತ ಟಿ.ಗುರುರಾಜ್ ದಿನದ ಮಹತ್ವ ಕುರಿತು ಮಾತನಾಡಿ, ರಾಜಕಾರಣಿಗಳನ್ನು ದೂರುವುದು, ಅಧಿಕಾರಿಗಳತ್ತ ಬೆರಳು ಮಾಡಿ ತೋರಿಸುವುದು, ಸುಳ್ಳು ಮತ್ತು ಭ್ರಮೆಗಳನ್ನು ವೈಭವೀಕರಿಸುವುದು ನಮ್ಮ ಹಕ್ಕು ಎಂದು ಪತ್ರಕರ್ತರು ತಿಳಿಯಬೇಕಿಲ್ಲ. ನಮಗೆ ಸಿಗುತ್ತಿರುವ ಗೌರವಕ್ಕೆ ಭಾದ್ಯಸ್ತರಾಗಿ ನಡೆದುಕೊಳ್ಳುತ್ತಿದ್ದೇವಾ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು ಹೇಳಿದರು.

    ಹಿರಿಯ ಪತ್ರಕರ್ತ ಕಂಪಲಾಪುರ ಸದಾಶಿವ ಅವರನ್ನು ಸನ್ಮಾನಿಸಲಾಯಿತು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು.

    ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಾಪಂ ಇಒ ಸುನೀಲ್ ಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಸಂಘದ ಅಧ್ಯಕ್ಷ ಬಿ.ಎಸ್.ಸತೀಶ್ ಆರಾಧ್ಯ, ಕಾರ್ಯದರ್ಶಿ ಪಿ.ಡಿ.ಪ್ರಸನ್ನ, ಉಪಾಧ್ಯಕ್ಷ ರವಿಚಂದ್ರ, ಖಜಾಂಚಿ ಪಿ.ಎನ್.ದೇವೇಗೌಡ, ಸಹ ಕಾರ್ಯದರ್ಶಿ ಅಶೋಕ್, ಸಂಘದ ನಿರ್ದೇಶಕರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts