More

    ‘ತಾರಾನಾಥ ಅಸ್ತಂಗತ’ ಸಾರಸ್ವತ ಲೋಕಕ್ಕೆ ಆಘಾತ

    ಮಂಜುನಾಥ ತಿಮ್ಮಯ್ಯ ಮೈಸೂರು

    ಸುಪ್ರಸಿದ್ಧ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ ಅಸ್ತಂಗತ ಸುದ್ದಿ ಸಂಗೀತ ಲೋಕದಲ್ಲಿ ನೀರವ ಮೌನ ಕವಿಯುವಂತೆ ಮಾಡಿದೆ.

    ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿರುವ ನಿವಾಸದಲ್ಲಿ ತಿಂಗಳ ಹಿಂದೆ ಕುಸಿದು ಬಿದ್ದು ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆ ದಾಖಲಾಗುತ್ತಿದ್ದಂತೆ ಸಂಗೀತ ಕಲಾವಿದರು, ಅವರ ಶಿಷ್ಯರು ಆತಂಕಕ್ಕೆ ಒಳಗಾಗಿದ್ದರು. ಈ ನಡುವೆ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿತ್ತು. ಆದರೀಗ ಅವರ ಸಾವಿನ ಸುದ್ದಿ ಬಂದಿರುವುದು ಸಾರಸ್ವತ ಲೋಕ, ಸಂಗೀತ ಕ್ಷೇತ್ರದ ಕಲಾವಿದರಿಗೆ ಆಘಾತ ಉಂಟು ಮಾಡಿದೆ.

    ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಅವರು ಮೈಸೂರಿನ ಮೇಲಿನ ಪ್ರೀತಿಯಿಂದ ಇಲ್ಲೇ ನೆಲೆವೂರಿದರು. ಅವರು ಮನಸ್ಸು ಮಾಡಿದ್ದರೆ ಚೆನ್ನೈ, ಪುಣೆ, ಮುಂಬೈ ಸೇರಿದಂತೆ ದೇಶದ ಪ್ರತಿಷ್ಠಿತ ಮಹಾನಗರದಲ್ಲಿ ನೆಲೆ ನಿಲ್ಲಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಸಂಧ್ಯಾಕಾಲವನ್ನು ಇಲ್ಲಿಯೇ ಕಳೆದು ಶಿಷ್ಯರಿಗೆ ಸಂಗೀತ ಕಲೆಯನ್ನು ಧಾರೆ ಎರೆದರು.

    ಸಂಗೀತವೇ ಮೊದಲ ಆಕರ್ಷಣೆ:


    ಸಂಗೀತ ಹಿನ್ನೆಲೆಯ ಕುಟುಂಬದಿಂದ ಬಂದ ಅವರಿಗೆ ಸಂಗೀತವೇ ಮೊದಲ ಆಕರ್ಷಣೆಯಾಗಿತ್ತು. ಅದನ್ನು ಒಲಿಸಿಕೊಳ್ಳಲು ಅವಿರತವಾಗಿ ಅವರು ಶ್ರಮಿಸುವ ಮೂಲಕ ದೊಡ್ಡ ಸಾಧಕರಾಗಿ ಮೈಲಿಗಲ್ಲು ನಿರ್ಮಿಸಿರುವುದು ಇದೀಗ ಚರಿತ್ರೆ.


    ಸವಣೂರು ಕೃಷ್ಣಾಚಾರ್ಯರಲ್ಲಿ ಸಂಗೀತದ ಪ್ರಾರಂಭಿಕ ಶಿಕ್ಷಣ ಪಡೆದ ಅವರು, 9ನೇ ವಯಸ್ಸಿನಲ್ಲೇ ಕಛೇರಿ ಮಾಡಿ ಬಾಗೇಶ್ರೀ ರಾಗ ಹಾಡಿ ಪ್ರಶಂಸೆ ಪಡೆದುಕೊಂಡರು. ಉಸ್ತಾದ್ ಅಲಿ ಅಕ್ಬರ್ ಅಲಿಖಾನ್ ಅವರಲ್ಲಿ ಸರೋದ್ ಅಭ್ಯಾಸ ಮಾಡಿದರು.


    ಪಂ.ರವಿಶಂಕರ್, ನಿಖಿಲ್ ಬ್ಯಾನರ್ಜಿ ಮತ್ತು ಅನ್ನಪೂರ್ಣದೇವಿ ಅವರಿಂದ ಸಂಗೀತದ ಮಾರ್ಗದರ್ಶನ ಪಡೆದುಕೊಂಡರು. ಇದು ಅವರನ್ನು ಇನ್ನಷ್ಟು ಪಕ್ವಗೊಳ್ಳಲು ನೀರೆರೆಯಿತು. ಬಳಿಕ ಇವರು ದೇಶಾದ್ಯಂತ ಸರೋದ್ ಕಛೇರಿಗಳನ್ನು ನೀಡಿದರು.

    ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡ ರಾಜೀವ್ ತಾರಾನಾಥ:


    ಕೋಲ್ಕತ್ತಾದ ಅಖಿಲ ಭಾರತ ಸಂಗೀತೋತ್ಸವ, ಮುಂಬೈನ ಭಾತ್ ಖಂಡೆ ಸಂಗೀತ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವ, ಗ್ವಾಲಿಯರ್‌ನ ತಾನಸೇನ ಸಮಾರೋಹದಲ್ಲಿ ಸಂಗೀತ ಕಾರ್ಯಕ್ರಮ ನೀಡಿ ದೇಶದ ಸಂಗೀತ ಲೋಕದ ಗಮನ ಸೆಳೆದರು. ಆಕಾಶವಾಣಿ, ದೂರದರ್ಶನಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಿಡ್ನಿ, ಅಡಿಲೈಡ್, ಕ್ಯಾನ್‌ಬೆರ‌್ರಾ ಸೇರಿದಂತೆ ವಿದೇಶಗಳಲ್ಲೂ ಕಾರ್ಯಕ್ರಮ ನೀಡಿ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡರು.

    ಯು.ಆರ್.ಅನಂತಮೂರ್ತಿ ಸಹಪಾಠಿ:


    ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದ ಇವರಿಗೆ ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನಲ್ಲಿ ಯು.ಆರ್.ಅನಂತಮೂರ್ತಿ, ಷ.ಶೆಟ್ಟರ್ ಅಂತಹ ದಿಗ್ಗಜರು ಸಹಪಾಠಿಯಾಗಿದ್ದರು ಎಂಬುದು ವಿಶೇಷ. ಬಿ.ಎ., ಎಂ.ಎ. ಪಿಎಚ್.ಡಿ ಪಡೆದ ಅವರು, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕೊನೆಗೆ ಸಂಗೀತ ಲೋಕಕ್ಕೆ ಅರ್ಪಿಸಿಕೊಂಡರು.


    ನವ್ಯದ ಉತ್ತುಂಗದಲ್ಲಿ ಪ್ರಮುಖ ವಿಮರ್ಶಕರಾಗಿದ್ದ ಅವರು, ಅನುವಾದಕರಾಗಿ ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಕಂಬಾರರ ಕೆಲ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು. ತಾರಾನಾಥರು ತಮ್ಮ ತಲೆಮಾರಿನ ಅತ್ಯಂತ ಪ್ರಖರ ವಿಚಾರವಾದಿ. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು ಹೇಳುವ ಹಾಗೆ, ತಾರಾನಾಥರು ಎಲ್ಲವನ್ನೂ ತೊರೆದು ಸರೋದ್‌ಗೆ ಶರಣಾದರು.

    ನನ್ನ ಗುರು ಅಲಿ ಅಕ್ಬರ್ ಅಲಿಖಾನ್ ನನ್ನ ದೇವರು..:


    ‘ನನ್ನ ಗುರು ಅಲಿ ಅಕ್ಬರ್ ಅಲಿಖಾನ್ ಮತ್ತು ನನ್ನ ತಂದೆ ನನ್ನ ದೇವರು, ನನ್ನ ಬೆರಳುಗಳೇ ನನ್ನ ಸಂಗೀತವಾಗಿದೆ. ಖಾನ್ ಕಲಿಸಿಕೊಟ್ಟ ಸರೋದ್ ವಾದನವನ್ನು ನುಡಿಸುವಾಗ ನಾನು ನನ್ನನ್ನೇ ಮರೆಯುತ್ತೇನೆ. ಒಂದು ಕಾರ್ಯಕ್ರಮದಲ್ಲಿ ಎರಡು ವಿರಾಮ ನೀಡಿದರೆ 8 ಗಂಟೆಗಳ ಕಾಲ 86ನೇ ವಯಸ್ಸಿನಲ್ಲೂ ಸರೋದ್ ವಾದನವನ್ನು ನುಡಿಸುತ್ತೇನೆ. ರಾತ್ರಿ ಆರಂಭಿಸಿದರೆ ಬೆಳಗಿನ ತನಕ ನುಡಿಸಬಲ್ಲೆ. ಮಲಗಿರುವವರನ್ನು ಎಬ್ಬಿಸಬಲ್ಲೆ’ ಎಂದು ಪ್ರತಿಷ್ಠಿತ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಯನ್ನು ಸ್ವೀಕರಿಸಿ ಭಾವುಕರಾಗಿ ನುಡಿದಿದ್ದರು. ಇದು ಸಂಗೀತದ ಮೇಲಿನ ಅವರ ಒಲವನ್ನು ತೋರಿಸುತ್ತದೆ. ಸಂಗೀತ ಕಲಾವಿದರಿಗೆ ಸಮಾಜದಿಂದ ಸೂಕ್ತ ಗೌರವ ದೊರೆಯುತ್ತಿಲ್ಲ ಎಂಬ ಬೇಸರವೂ ಅವರಲ್ಲಿ ಸದಾ ಇತ್ತು.


    ಇಳಿವಯಸ್ಸಿನಲ್ಲೂ ತಾರಾನಾಥರು ಸರೋದವನ್ನು ಕೈಬಿಟ್ಟಿರಲಿಲ್ಲ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಲೂ ಸಂಗೀತವನ್ನೂ ಅಪ್ಪಿಕೊಂಡಿದ್ದರು. ಅವರನ್ನು ನೋಡಲು ಬರುವ ಕಲಾವಿದರಿಗೆ, ಶಿಷ್ಯರಿಗೆ ಶಾಸ್ತ್ರೀಯ ಗಾಯನದ ಮೂಲಕ ಗಮನ ಸೆಳೆದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಇನ್ನಿತರರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಸರ್ಕಾರ ಇತ್ತೀಚೆಗೆ ಒಪ್ಪಿಕೊಂಡಿತ್ತು.

    ರಾಜೀನಾಮೆ ರಾಜೀವ್ ತಾರಾನಾಥ….!


    ಪಂ.ರಾಜೀವ್ ತಾರಾನಾಥ ಅವರನ್ನು ‘ರಾಜೀನಾಮೆ ರಾಜೀವ್ ತಾರಾನಾಥ’ ಎಂದೂ ಕರೆಯುತ್ತಾರೆ. ಸರೋದ್ ವಾದನಕ್ಕಾಗಿ ತಮಗೆ ಸಿಕ್ಕ ಸುಮಾರು 18 ಕೆಲಸಗಳಿಗೆ ರಾಜೀನಾಮೆ ಕೊಟ್ಟಿದ್ದರು. ಅದಕ್ಕೆ ಈ ಬಿರುದು ದೊರೆಯಿತು. 8 ಭಾಷೆಗಳನ್ನು ಮಾತನಾಡಬಲ್ಲ, ಆಸ್ಟ್ರೇಲಿಯಾದ ಒಪೆರಾ ಹೌಸ್‌ನಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರವಾಗಿದ್ದರು ಎಂದು ಅವರ ಶಿಷ್ಯರು ಸ್ಮರಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts