More

    ಪಶು ಇಲಾಖೆ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ

    ಕಡೂರು: ರೈತರಿಗೆ ದೊರಕಬೇಕಾದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಲು ಸಂಬಂಧಿಸಿದ ಇಲಾಖೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ಸೂಚಿಸಿದರು.
    ತಾಲೂಕಿನ ಕೆರೆಸಂತೆ ಗ್ರಾಮದಲ್ಲಿ ಗುರುವಾರ ಪಶುಸಂಗೋಪನಾ ಇಲಾಖೆ ಏರ್ಪಡಿಸಿದ್ದ ಮಿಶ್ರತಳಿ, ನಾಟಿತಳಿ ಎಮ್ಮೆ, ಹಸು ಕರುಗಳ ಪ್ರದರ್ಶನ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬಯಲು ಸೀಮೆಯಾದ ಕಡೂರು ಪ್ರದೇಶದಲ್ಲಿ ರೈತಾಪಿವರ್ಗದವರಿಗೆ ಹೈನುಗಾರಿಕೆ ಜೀವನಾಧಾರ. ರೈತರು ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಸಮರ್ಪಕ ಮೇವು ದೊರಕಿಸಬೇಕು. ಈ ನಿಟ್ಟಿನಲ್ಲಿ ಪಶುಇಲಾಖೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ನೀಡುವ ಮೇವಿನ ಬೀಜಗಳ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
    ಕೃಷಿ, ತೋಟಗಾರಿಕೆ, ಪಶು ಇಲಾಖೆ ಕಾರ್ಯಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಕಟ್ಟಕಡೆಯ ಅರ್ಹ ರೈತರಿಗೂ ಸರ್ಕಾರದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯವನ್ನು ಇಲಾಖೆ ಅಧಿಕಾರಿಗಳು ಮಾಡಬೇಕು ಎಂದರು.
    ಪಶು ಇಲಾಖೆ ತಾಲೂಕು ಅಧಿಕಾರಿ ಡಾ.ಎಸ್.ಎನ್.ಉಮೇಶ್ ಮಾತನಾಡಿ, ಪಶು ಇಲಾಖೆ ಜಾನುವಾರುಗಳಿಗೆ ಆರೋಗ್ಯ ಸಮಸ್ಯೆಯಾದರೆ ಕೂಡಲೇ ಸ್ಪಂದಿಸುತ್ತದೆ. ಹಸು ಕರುಗಳು ಮುಂತಾದವುಗಳಿಗೆ ಯಾವುದೇ ಆರೋಗ್ಯ ವ್ಯತ್ಯಾಸವಾದರೂ ಪಶು ಇಲಾಖೆ ಮಾರ್ಗದರ್ಶನ ಪಡೆದುಕೊಳ್ಳಬೇಕು. ತುರ್ತು ಪರಿಸ್ಥಿತಿ ಸಮಯದಲ್ಲಿ ಸಂಚಾರಿ ಪಶು ಚಿಕಿತ್ಸಾಲಯದ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಸಹಾಯವಾಣಿ ಸಂಖ್ಯೆ1962 ಗೆ ಕರೆಮಾಡಬಹುದು ಎಂದರು.
    ಮಿಶ್ರ ತಳಿಪಶುಗಳ ಪ್ರದರ್ಶನದಲ್ಲಿ ಬಹುಮಾನಗಳಿಸಿದ 25ಕ್ಕೂ ಹೆಚ್ಚು ರೈತರಿಗೆ ಬಹುಮಾನ ವಿತರಿಸಲಾಯಿತು. ರೈತರಿಗೆ ಪಶು ಅಹಾರದ ಮಿನರಲ್ಸ್ ಮತ್ತು ಟಾನಿಕ್‌ಗಳನ್ನು ವಿತರಿಸಲಾಯಿತು. ಕೆರೆಸಂತೆ ಗ್ರಾಪಂ ಅಧ್ಯಕ್ಷೆ ವಂದನಾಬಾಯಿ ರವಿನಾಯ್ಕ, ಗ್ರಾಪಂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts