More

    ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

    ಹೊಳೆನರಸೀಪುರ: ಸರ್ಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು, ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಚೆನ್ನಾಗಿ ಕಲಿತು ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಸಲಹೆ ನೀಡಿದರು.


    ತಾಲೂಕಿನ ಹಳ್ಳಿಮೈಸೂರಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.


    ಈ ಹಾಸ್ಟೆಲ್‌ನಲ್ಲಿ ಓದುವ ವಿದ್ಯಾರ್ಥಿಗಳಿಗೆ ಪುಸ್ತಕ, ಊಟ, ವಸತಿ, ಸಮವಸ್ತ್ರ ಎಲ್ಲವೂ ಉಚಿತವಾಗಿ ದೊರೆಯುತ್ತದೆ. ಈ ಸೌಲಭ್ಯಗಳನ್ನು ಬಳಸಿಕೊಳ್ಳಿ. ಇಲ್ಲಿನ ಹಾಸ್ಟೆಲ್ ಮಕ್ಕಳಿಗೆ ಉತ್ತಮ ಊಟೋಪಚಾರ ನೀಡಿ, ಶುಚಿತ್ವ ಕಾಪಾಡಿ, ಸದಾ ಕಾಲ ಕುಡಿಯಲು ಶುದ್ಧ ನೀರನ್ನು ಒದಗಿಸಿ. ಇಲ್ಲಿ 6 ರಿಂದ 10ನೇ ತರಗತಿ ಓದುವ 250 ವಿದ್ಯಾರ್ಥಿಗಳಿಗೆ ಅವಕಾಶ ಇದೆ ಎಂದರು.


    108 ತುರ್ತು ಚಕಿತ್ಸಾ ವಾಹನಕ್ಕೆ ಚಾಲನೆ: ಸರ್ಕಾರ ಹಳ್ಳಿ ಮೈಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ನೀಡಿರುವ 108 ತುರ್ತು ಚಿಕಿತ್ಸಾ ವಾಹನಕ್ಕೆ ಎ. ಮಂಜು ಚಾಲನೆ ನೀಡಿ, ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸಾ ವಾಹನ ಇಲ್ಲದೆ ಸುತ್ತಲ ಹಳ್ಳಿಗಳ ಜನರಿಗೆ ತೀವ್ರ ತೊಂದರೆ ಆಗಿತ್ತು. ವೈದ್ಯರ ಒತ್ತಾಯದ ಹಾಗೂ ಅವರ ನಿರಂತರ ಪ್ರಯತ್ನದಿಂದ ಸರ್ಕಾರ 108 ವಾಹನ ನೀಡಿದೆ. ಚಾಲಕ ಹಾಗೂ ನಿರ್ವಾಹಕರು ಇದನ್ನು ಚೆನ್ನಾಗಿ ನಿರ್ವಹಿಸಿ ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡಿ. ಅಗತ್ಯ ಸಮಯದಲ್ಲಿ ಸರಿಯಾದ ಸಮಯಕ್ಕೆ ತಲುಪಿ ಉತ್ತಮ ಚಿಕಿತ್ಸೆ ದೊರೆಯಲು ಸಹಕರಿಸಿ ಎಂದರು.


    ಬೆಳೆ ವಿಮೆ ಮಾಡಿಸಿಕೊಳ್ಳಲು ಸಲಹೆ: ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಶಾಸಕ ಎ.ಮಂಜು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ನಿಮಗೆ ತಲುಪಿಸಲು ರೈತ ಸಂಪರ್ಕ ಕೇಂದ್ರ ತೆರೆಯಲಾಗಿದೆ. ರೈತರು ಕೇಂದ್ರದ ಉಪಯೋಗ ಪಡೆದುಕೊಳ್ಳಿ. ಕೆಲವು ಭಾಗದಲ್ಲಿ ರೈತರು ಬೆಳೆ ವಿಮೆ ಪಾವತಿಸಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟಕ್ಕೆ ಇನ್ಶೂರೆನ್ಸ್ ಕಂಪನಿಯಿಂದ ಪರಿಹಾರ ಪಡೆದುಕೊಂಡಿದ್ದಾರೆ. ಆದರೆ ಈ ಭಾಗದ ರೈತರು ಬೆಳೆವಿಮೆ ಪಾವತಿಸಲು ಆಸಕ್ತಿ ತೋರಿಸುತ್ತಿಲ್ಲ. ಕೃಷಿ ಇಲಾಖೆ ಸಹಾಯ ಪಡೆದು ಅಗತ್ಯ ಸಮಯದಲ್ಲಿ ಬೆಳೆವಿಮೆಗೆ ನಿಗದಿತ ಶುಲ್ಕ ಪಾವತಿಸಿ ಬೆಳೆನಷ್ಟ ಆದಾಗ ಪರಿಹಾರ ಪಡೆದುಕೊಳ್ಳಿ ಎಂದರು.


    ಇದೇ ಸಂದರ್ಭದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನಕ್ಕೆ ಭೂಮಿಪೂಜೆ ನೆರವೇರಿಸಿದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೌಸರ್ ಅಹಮದ್, ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts