More

    ‘ಗ್ರೇಟರ್ ಬೆಂಗಳೂರು’ ರಚನೆಗೆ ಸಲಹೆ

    ಬೆಂಗಳೂರು: ಬಿಬಿಎಂಪಿಗೆ ಚುನಾವಣೆ ನಡೆಸಬೇಕೇ ಅಥವಾ ವಿಭಜನೆ ಮಾಡಬೇಕೆ ಎಂಬ ಚರ್ಚೆ ನಡೆದಿರುವಾಗಲೇ ಇಡೀ ರಾಜಧಾನಿಯನ್ನು ಏಕ ವ್ಯವಸ್ಥೆಯ ಆಡಳಿತಕ್ಕೆ ತರುವ ‘ಗ್ರೇಟರ್ ಬೆಂಗಳೂರು’ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ. ಇದರ ಅಧ್ಯಕ್ಷತೆಯನ್ನು ಸ್ವತ: ಮುಖ್ಯಮಂತ್ರಿಯೇ ವಹಿಸಿಕೊಳ್ಳಲಿದ್ದು, ಪಾಲಿಕೆಯ ಚುನಾಯಿತ ಸರ್ಕಾರಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವಂತಹ ವ್ಯವಸ್ಥೆ ಭವಿಷ್ಯದ ಬೆಂಗಳೂರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲದು ಎಂಬ ವಾದವನ್ನು ಮುಂದಿಡಲಾಗಿದೆ.

    ಮುಖ್ಯವಾಗಿ ಬೆಂಗಳೂರು ಅಭಿವೃದ್ಧಿಯಲ್ಲಿ ಪಾಲುದಾರಿಕೆ ಹೊಂದಿರುವ ಸರ್ಕಾರದ ವಿವಿಧ ಏಜೆನ್ಸಿಗಳನ್ನು ಸಮನ್ವಯ ಮೂಲಕ ಸಿಎಂ ಅಧೀನದಲ್ಲಿ ಬರುವಂತಹ ಕಾರ್ಯಶೈಲಿ ಇದಾಗಲಿದೆ. ವಿಶ್ವದಲ್ಲೇ ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರು ನಗರಕ್ಕೆ ಅಷ್ಟೇ ದೂರದೃಷ್ಟಿ ಹಾಗೂ ಪರಿಣಾಮಕಾರಿಯಾದ ಆಡಳಿತ ವ್ಯವಸ್ಥೆ ಅತ್ಯಗತ್ಯವಿದೆ. ಇದಕ್ಕಾಗಿ ಈಗಿನ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಮಾರ್ಪಡಿಸಿ ಗ್ರೇಟರ್ ಬೆಂಗಳೂರು ಕನಸನ್ನು ಬಿತ್ತಲಾಗಿದೆ. ಈಗಾಗಲೇ ಬಿಬಿಎಂಪಿ ಪುನಾರಚನಾ ತಜ್ಞರ ಸಮಿತಿ ಇಂಥದ್ದೊಂದು ಹೊಸ ಮಾದರಿಯ ಆಡಳಿತವು ಬೆಂಗಳೂರಿಗೆ ಬೇಕಿದೆ ಎಂದು ಊಹಿಸಿ ಸರ್ಕಾರದ ವಿವಿಧ ಹಂತಗಳಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದನ್ನು ಇನ್ನಷ್ಟೇ ವಿಸ್ತೃತವಾಗಿ ಚಿಂತನ-ಮಂಥನ ನಡೆಸಿ ಸರ್ಕಾರದ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಡುವ ಯತ್ನ ನಡೆದಿದೆ.

    ಗ್ರೇಟರ್ ಬೆಂಗಳೂರು ಏಕೆ?:

    ಪ್ರಸ್ತುತ ಬಿಬಿಎಂಪಿ 800 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದರ ಆಜುಬಾಜಿನಲ್ಲಿ ಕೆಲ ನಗರಸಭೆ, ಪುರಸಭೆ ಹಾಗೂ ಗ್ರಾಪಂಗಳು ಹೊಂದಿಕೊಂಡಿವೆ. ಇದರಿಂದಾಚೆಗೆ ವಿವಿಧ ಯೋಜನಾ ಪ್ರಾಧಿಕಾರಗಳು ತಮ್ಮದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ನಗರದ ಅಭಿವೃದ್ಧಿ ಪಾಲುದಾರರಾಗಿರುವ ಬಿಡಿಎ, ಜಲಮಂಡಳಿ ಇತ್ಯಾದಿ ಏಜೆನ್ಸಿಗಳು ಸಮನ್ವಯ ಇಲ್ಲದೆ ಕೆಲಸ ಮಾಡುತ್ತಿವೆ. ಇದರಿಂದ ಹಲವು ಕಾರ್ಯಕ್ರಮಗಳು ಪುನರಾವರ್ತಿತವಾಗುತ್ತಿದ್ದು, ತೆರಿಗೆ ಹಣ ಪೋಲಾಗುತ್ತಿದೆ. ಮುಖ್ಯವಾಗಿ ಚುನಾಯಿತ ಸರ್ಕಾರ ಹಾಗೂ ಅಧಿಕಾರಿಗಳು ಮುಖ್ಯಸ್ಥರಾಗಿರುವ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡದೆ ವೈಲ್ಯ ಕಂಡಿವೆ. ಅಧಿಕಾರಿಗಳು ಕೂಡ ಜನಪ್ರತಿನಿಧಿಗಳ ಜತೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ಷೇಪವೂ ಇದೆ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಿ ಏಕ ಆಡಳಿತ ವ್ಯವಸ್ಥೆಯನ್ನು ಸಿಎಂ ಅಧ್ಯಕ್ಷತೆಯಲ್ಲಿ ಮುನ್ನಡೆಸಿಕೊಂಡು ಹೋಗಬಹುದು ಎನ್ನಲಾಗಿದೆ.

    ಯೋಜನಾಬದ್ಧ ಅಭಿವೃದ್ಧಿಗೆ ಆದ್ಯತೆ:

    ಗ್ರೇಟರ್ ಬೆಂಗಳೂರು ಪರಿಕಲ್ಪನೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಸರ್ಕಾರದ ಮುಖ್ಯಸ್ಥರ ಸಮ್ಮುಖದಲ್ಲೇ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಅನುಮೋದನೆ, ಮಾರ್ಗಸೂಚಿ ಅಂಶಗಳೆಂದು ಕಾಲವ್ಯಯ ಮಾಡದೆ ನೇರವಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅವಕಾಶವಿರಲಿದೆ. ಎಲ್ಲ ಏಜೆನ್ಸಿಗಳು ಒಟ್ಟಾಗಿ ಹಾಗೂ ಸಮನ್ವಯದೊಂದಿಗೆ ಕೆಲಸ ಮಾಡಲೇಬೇಕಾಗುತ್ತದೆ. ಜತೆಗೆ ಪ್ರತೀ 5 ವರ್ಷಕ್ಕೆ ಯೋಜನೆಯ ಮುನ್ನೋಟ ಸಿದ್ಧಪಡಿಸಿ ಜಾರಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಏಜೆನ್ಸಿಗಳು ಕೂಡ ಈ ಏಕ ವ್ಯವಸ್ಥೆ ಆಡಳಿತಕ್ಕೆ ಒಳಪಡುವುದರಿಂದ ರೈಲ್ವೆ ಇಲಾಖೆ ಕೂಡ ಹೊಸ ವ್ಯವಸ್ಥೆಯಂತೆ ಕೆಲಸ ಮಾಡಬೇಕಾಗುತ್ತದೆ.

    ನೆರೆಯ ಜಿಲ್ಲೆಗಳ ಪ್ರದೇಶಗಳ ಸೇರ್ಪಡೆ:

    ಬಿಬಿಎಂಪಿ ವ್ಯಾಪ್ತಿಯ ಹೊರಗಿರುವ ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಯೋಜನಾ ಪ್ರಾಧಿಕಾರಗಳನ್ನು ಕೂಡ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಒಳಪಡಲಿದೆ. ಇದರಿಂದ ನಗರ, ಗ್ರಾಮೀಣ ಭಾಗದ ಸಮಾನ ಅಭಿವೃದ್ಧಿಗೆ ಒತ್ತು ಸಿಗಲಿದೆ. ಮೆಟ್ರೋಪಾಲಿಟನ್ ಪ್ಲಾನಿಂಗ್ ಕಮಿಟಿ (ಎಂಪಿಸಿ) ನೇತೃತ್ವವನ್ನು ಸಿಎಂ ಮುನ್ನಡೆಸಲಿದ್ದಾರೆ. ಇದರಿಂದಾಗಿ ರಾಜಧಾನಿ ಆಚೆಯೂ ಅಭಿವೃದ್ಧಿಗೆ ಯಥೇಚ್ಛ ಅನುದಾನ ಲಭ್ಯವಾಗಲಿದೆ ಎಂಬ ಭರವಸೆ ನೀಡಲಾಗಿದೆ.

    ನಗರದ ಸರ್ಕಾರಿ ಏಜೆನ್ಸಿಗಳಿವು:

    ಬಿಬಿಎಂಪಿ, ಬಿಡಿಎ, ಬಿಎಂಆರ್‌ಡಿಎ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಂಟಿಸಿ, ಬಿಎಂಆರ್‌ಸಿಎಲ್, ಬಿಎಂಎಲ್‌ಟಿಎ, ಬೆಸ್ಕಾಂ, ಬಯಪಾ, ಕೆಎಸ್‌ಪಿಸಿಬಿ, ಬೆಂಗಳೂರು ನಗರ ಪೊಲೀಸ್/ಸಂಚಾರ ಪೊಲೀಸ್, ಡಲ್ಟ್, ಕೆರೆ ಅಭಿವೃದ್ಧಿ ಪ್ರಾಧಿಕಾರ.

    ಕಸ ಹೆಕ್ಕಲು, ಮೋರಿ ಸ್ವಚ್ಚತೆಗೆ ಬಿಬಿಎಂಪಿ ಇರಬೇಕೆ?:

    ಪ್ರಸ್ತುತ ಬಿಬಿಎಂಪಿಯು ನಗರದಲ್ಲಿ ಕಸ ವಿಲೇವಾರಿ, ಚರಂಡಿಗಳ ಸ್ವಚ್ಚತೆ ಹಾಗೂ ರಸ್ತೆಗುಂಡಿಗಳನ್ನು ಮುಚ್ಚಲಷ್ಟೇ ಸೀಮಿತಗೊಂಡಿದೆ. ಉಳಿದ ಕೆಲಸಗಳು ಇತರ ಏಜೆನ್ಸಿಗಳು ಮಾಡುತ್ತಿವೆ. ಜಲಮಂಡಳಿ ಕುಡಿಯುವ ನೀರು ವಿತರಿಸುವ ಹೊಣೆ ಹೊತ್ತಿದೆ. ಬೆಸ್ಕಾಂ ವಿದ್ಯುತ್ ಪೂರೈಕೆ, ಬಿಎಂಟಿಸಿ ಬಸ್ ಸೇವೆ, ಬಿಡಿಎ ಮನೆ/್ಲ್ಯಾಟ್ ಹಂಚಿಕೆ ಈ ರೀತಿ ವಿವಿಧ ಸೌಲಭ್ಯಕ್ಕಾಗೊ ಒಂದೊಂದು ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ನಗರದಲ್ಲಿ ಎಲ್ಲೇ ಸಮಸ್ಯೆಯಾದರೂ ಬಿಬಿಎಂಪಿಗೆ ದೂರು ನೀಡಲಾಗುತ್ತದೆ. ಸಂಬಂಧ ಇಲ್ಲದ ಕೆಲಸಗಳನ್ನು ಮೈ ಮೇಲೆ ಎಳೆದುಕೊಂಡು ಕಾರ್ಯನಿರ್ವಹಿಸಲು ಅಧಿಕಾರಿ ಅಥವಾ ಕಾರ್ಪೊರೇಟರ್‌ಗಳಿಗೆ ಸಾಧ್ಯವಾಗದು. ಹೀಗಾಗಿ ದೇಶದ ಇತರ ಮಹಾನಗರಗಳಲ್ಲಿರುವಂತೆ ಪಾಲಿಕೆ ಹೆಚ್ಚು ಅಧಿಕಾರ ಹಾಗೂ ನಿರ್ವಹಣಾ ಹೊಣೆಯನ್ನು ನೀಡುವ ವ್ಯವಸ್ಥೆ ಬಮದಾಗಲಷ್ಟೇ ಬಿಬಿಎಂಪಿ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ ಎಂದು ಮಾಜಿ ಮೇಯರ್ ಎಂ.ರಾಮಚಂದ್ರಪ್ಪ ಪ್ರತಿಪಾದಿಸಿದ್ದಾರೆ.

    ಬಿಬಿಎಂಪಿಯ ಹಾಲಿ ಕಾರ್ಯವೈಖರಿಯಿಂದಾಗಿ ಜನರಿಗೆ ಸಮರ್ಪಕವಾಗಿ ಸೌಲಭ್ಯ ಸಿಗುತ್ತಿಲ್ಲ. ಕೋಟಿ ಜನಸಂಖ್ಯೆ ಮೀರಿದ್ದರೂ ಪಾಲಿಕೆ ಅಧಿಕಾರಿಗಳು ಜನರ ಬೇಕು ಬೇಡಗಳನ್ನು ತಿಳಿದುಕೊಳ್ಳದೆ ತಮ್ಮಿಷ್ಟದಂತೆ ಆಡಳಿತ ನಡೆಸುವಂಥ ಸ್ಥಿತಿ ಇದೆ. ಸ್ಥಳೀಯ ಸಂಸ್ಥೆಗೆ ಸೀಮಿತ ಅಧಿಕಾರ ಇರುವುದರಿಂದ ಗ್ರೇಟರ್ ಬೆಂಗಳೂರು ಆಡಳಿತ ವ್ಯವಸ್ಥೆಗೆ ಅಧಿಕಾರ ನೀಡಿ ಮುನ್ನಡೆದಲ್ಲಿ ಮಾತ್ರ ನಮ್ಮ ಮಹಾನಗರವು ಅಭಿವೃದ್ಧಿಯಾಗಲು ಸಾಧ್ಯ. ಬೇಕಿದ್ದಲ್ಲಿ ನ್ಯೂಡೆಲ್ಲಿ ಮೆಟ್ರೋಪಾಲಿಟನ್ ಕೌನ್ಸಿಲ್ (ಎನ್‌ಡಿಎಂಸಿ) ಅಳವಡಿಸಿಕೊಂಡಿರುವ ಅಂಶಗಳನ್ನು ಅನುಸರಿಸಿದರೆ ತಪ್ಪಲ್ಲ.
    – ಪಿ.ಆರ್.ರಮೇಶ್, ಮಾಜಿ ಮೇಯರ್

    ಬಿಬಿಎಂಪಿಗೆ ಈಗಾಗಲೇ 2020ರ ಕಾಯ್ದೆಯಂತೆ ವಲಯ ಆಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಈ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳನ್ನೇ ನಿಯೋಜಿಸಲಾಗಿದೆ. ಹಾಗಿದ್ದರೂ ಜನರಿಗೆ ನಾಗರಿಕ ಸೌಲಭ್ಯ ಹಾಗೂ ಅಭಿವೃಧ್ಧಿಯ ಪ್ರಯೋಜನ ತಲುಪಿಸಲು ಸಾಧ್ಯವಾಗುತ್ತಿಲ್ಲ. ಈ ಅಧಿಕಾರಿಗಳಿಗೆ ಇನ್ನಷ್ಟು ಅಧಿಕಾರ ನೀಡಿ ಸ್ಥಳೀಯವಾಗಿಯೇ ಕೆಲಸಗಳು ನಡೆಯುವಂತಾಗಬೇಕು. ಪಾಲಿಕೆಗೆ ಚುನಾವಣೆ ನಡೆಸಿ ಹೊಸ ಕೌನ್ಸಿಲ್‌ಗೆ ಹೆಚ್ಚಿನ ಅಧಿಕಾರ ನೀಡಿದ್ದಲ್ಲಿ ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸಬಹುದು. ಇಲ್ಲದಿದ್ದಲ್ಲಿ ಗ್ರೇಟರ್ ಬೆಂಗಳೂರು ರಚಿಸಿದರೂ ಪ್ರಯೋಜನವಿಲ್ಲ.
    – ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts