More

    ಹಾಸ್ಟೆಲ್ ದೊರಕದೆ ಪರದಾಟ : ಹೊರಜಿಲ್ಲೆಯ ವಿದ್ಯಾರ್ಥಿಗಳು ಅತಂತ್ರ ; ತಾತ್ಕಾಲಿಕ ವ್ಯವಸ್ಥೆಗೆ ಮನವಿ

    ನರೇಂದ್ರ ಎಸ್.ಮರಸಣಿಗೆ ಹೆಬ್ರಿ

    ಶಾಲೆ ಆರಂಭವಾಗಿ ತಿಂಗಳು ಕಳೆದರೂ ಹಾಸ್ಟೆಲ್‌ಗೆ ದಾಖಲಾತಿ ಆರಂಭವಾಗದ ಕಾರಣ ಹೊರಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ..
    ಉಡುಪಿ ಜಿಲ್ಲೆಯಲ್ಲಿ 18 ಮೆಟ್ರಿಕ್ ಪೂರ್ವ ಹಾಗೂ 25 ಮೆಟ್ರಿಕ್ ನಂತರದ ಬಿಸಿಎಂ ಹಾಸ್ಟೆಲ್‌ಗಳಿವೆ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆದರೆ ಸ್ಕೂಲ್ ಹಾಸ್ಟೆಲ್ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಇನ್ನೂ ಅರ್ಜಿ ಸಲ್ಲಿಸಲಾಗದೆ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ.

    ಉಡುಪಿ ಜಿಲ್ಲೆಗೆ ಬಹಳಷ್ಟು ಮಂದಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಉಳಿದುಕೊಳ್ಳಲು ಬಿಸಿಎಂ ಹಾಸ್ಟೆಲ್‌ಗಳನ್ನು ಅವಲಂಭಿಸಿದ್ದಾರೆ. ಪಾಲಕರು ಮಕ್ಕಳನ್ನು ಉಡುಪಿಗೆ ಕರೆದುಕೊಂಡು ಬಂದಾಗಿದೆ. ವಾಪಸ್ ಕರೆದುಕೊಂಡು ಹೋಗಿ ಮತ್ತೆ ಬರಲು ಹಣವಿಲ್ಲ. ಬಾಡಿಗೆ ರೂಮ್ ಮಾಡಿ ನಿಲ್ಲುವಷ್ಟು ಆರ್ಥಿಕವಾಗಿ ಶಕ್ತರಾಗಿಲ್ಲ ಎಂದು ಪಾಲಕರೊಬ್ಬರು ತಿಳಿಸಿದ್ದಾರೆ.

    ಹಾಜರಾತಿ ಕೊರತೆ

    ಶಾಲೆ ಆರಂಭವಾಗಿ ತಿಂಗಳು ಕಳೆದಿದೆ. ಶೇ.75ರಷ್ಟು ಹಾಜರಾತಿ ಕಡ್ಡಾಯ ಇರುವಾಗ ಮುಂದಿನ ದಿನಗಳಲ್ಲಿ ಮನೆಯ ಶುಭಸಮಾರಂಭಗಳಿಗೂ ರಜೆ ಮಾಡುವಂತಿಲ್ಲ. ಈ ರೀತಿ ಸಮಸ್ಯೆ ಆದಾಗ ಉನ್ನತ ಮಟ್ಟದ ಅಧಿಕಾರಿಗಳು ಬಡವರ್ಗದ ಜನರಿಗೆ ಕಿಂಚಿತ್ತು ಕರುಣೆ ತೋರಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

    ಎಲ್ಲ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳನ್ನು ಮೆರಿಟ್, ಕೆಟಗರಿ ಹಾಗೂ ಮೀಸಲಾತಿ ನೋಡಿ ತೆಗೆದುಕೊಳ್ಳಲಾಗುತ್ತದೆ. ಕೆಲವೊಮ್ಮೆ ಅದು ಕೆಲವರಿಗೆ ಸಿಗದೇ ಇರಬಹುದು. ಕಳೆದ ವರ್ಷ ಸುಮಾರು 257 ಮಂದಿಗೆ ಹಾಸ್ಟೆಲ್ ಸೀಟ್ ಸಿಕ್ಕಿರಲಿಲ್ಲ. ಈ ರೀತಿಯ ಬೆಳವಣಿಗೆಯಿಂದ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತವಾಗುತ್ತದೆ.

    2 ಹೆಚ್ಚುವರಿ ಹಾಸ್ಟೆಲ್

    ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷ ಎರಡು ಹೆಚ್ಚುವರಿ ಹಾಸ್ಟೆಲ್ ತೆರೆಯಲಾಗಿದೆ. ಅರ್ಜಿಗಳು ಜಾಸ್ತಿ ಬಂದಾಗ ಇದೂ ಸಾಲದೆ ಇರಬಹುದು. ಒಂದು ವೇಳೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಗದಿದ್ದರೆ ಯಾವುದಾದರೂ ತಾತ್ಕಾಲಿಕ ವ್ಯವಸ್ಥೆ ಮಾಡಬೇಕಿದೆ.

    ಶಾಲಾರಂಭಕ್ಕೂ ಮೊದಲೇ ಪ್ರಕ್ರಿಯೆ

    ಶಾಲೆ ಆರಂಭವಾದ ನಂತರ ಹಾಸ್ಟೆಲ್‌ಗೆ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಅನೇಕ ವಿದ್ಯಾರ್ಥಿಗಳ ಬದುಕು ಆತಂತ್ರವಾಗುತ್ತದೆ. ಶಾಲೆ ಆರಂಭವಾಗುವ ಮೊದಲೇ ಎಲ್ಲ ಪ್ರಕ್ರಿಯೆ ನಡೆದು ಶಾಲೆ ಹಾಗೂ ಹಾಸ್ಟೆಲ್ ಒಟ್ಟಾಗಿ ತೆರೆಯಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

    ಯಾರದೋ ಮನೆಯಲ್ಲಿ ಬೀಡು

    ಸದ್ಯಕ್ಕೆ ವಿಜಯಪುರದ ಮಂದಿ ಜಿಲ್ಲೆಗೆ ಆಗಮಿಸಿ ಯಾರದೋ ಮನೆಯಲ್ಲಿ ಮಕ್ಕಳೊಂದಿಗೆ ನಿಂತಿದ್ದಾರೆ. ಬಹುತೇಕರು ಅಲ್ಲಿ ಇಲ್ಲಿ ನಿಂತು ದಿನ ಕಳೆಯುತ್ತಿದ್ದಾರೆ.

    ಒಂದು ತಿಂಗಳು ವಿಳಂಬ

    ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಸಲ್ಲಿಕೆ ಜೂನ್ 27ರಂದು ಆರಂಭವಾಗಿ ಎಲ್ಲ ಪ್ರಕ್ರಿಯೆ ಮುಗಿದು ಜುಲೈ 20ಕ್ಕೆ ಹಾಸ್ಟೆಲ್‌ಗಳು ಆರಂಭವಾಗುತ್ತದೆ. ಸುಮಾರು 20 ದಿವಸ ತಡವಾಗುತ್ತದೆ. ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಜೂನ್ 28ಕ್ಕೆ ಅರ್ಜಿ ಆರಂಭವಾಗಿ ಹಾಸ್ಟೆಲ್‌ಗೆ ಪ್ರವೇಶ ಪಡೆಯಲು ಜುಲೈ 31ರ ತನಕ ಕಾಯಬೇಕು. ಇದು ಸುಮಾರು ಒಂದು ತಿಂಗಳು ತಡವಾಗುತ್ತದೆ. ದೂರದ ವಿದ್ಯಾರ್ಥಿಗಳ ಭವಿಷ್ಯ ಏನಾಗುತ್ತದೆಯೆಂದು ಪಾಲಕರು ಆತಂಕದಲ್ಲಿದ್ದಾರೆ.

    ನವೀಕರಣ ವಿದ್ಯಾರ್ಥಿಗಳಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿದಿದೆ. ಜಿಲ್ಲೆಯಲ್ಲಿ ಹಾಸ್ಟೆಲ್‌ಗಾಗಿ ಬಹಳಷ್ಟು ಬೇಡಿಕೆ ಇದೆ. 18 ಮೆಟ್ರಿಕ್ ಪೂರ್ವ ಹಾಗೂ 25 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಶೀಘ್ರ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
    ಎಚ್.ಆರ್.ಲಮಾಣಿ, ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಇಲಾಖೆ

    ನಾವು ವಿಜಯಪುರದಿಂದ ಹತ್ತು ಮಂದಿ ಮಕ್ಕಳು, ಪಾಲಕರು ಬಂದಿದ್ದೇವೆ. ನಿಲ್ಲಲು ಯಾವುದೇ ವ್ಯವಸ್ಥೆ ಇಲ್ಲ. ಯಾರದೋ ಮನೆಯಲ್ಲಿ ಕಾಡಿಬೇಡಿ ಸ್ವಲ್ಪ ಜಾಗ ಕೊಟ್ಟಿದಾರೆ. ರೂಂ ಮಾಡಿ ನಿಲ್ಲುವಷ್ಟು ಆರ್ಥಿಕ ಶಕ್ತಿ ಹೊಂದಿಲ್ಲ. ಕೂಲಿ ಮಾಡಿ ಬದುಕುವ ನಮ್ಮ ಪರಿಸ್ಥಿತಿ ಕೇಳುವವರಿಲ್ಲ. ಜಿಲ್ಲಾಧಿಕಾರಿಯವರೇ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಬೇಕು.
    -ಬಸವರಾಜ್ ವಿಜಯಪುರ, ಪಾಲಕರು

    ಇಲಾಖೆ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಸಂಬಂಧಪಟ್ಟ ಇಲಾಖೆಯವರೊಂದಿಗೆ ಮಾತಾಡಲಿ. ನಮ್ಮ ಕಡೆಯಿಂದ ಏನು ಕ್ರಮ ಆಗಬೇಕು ಅದನ್ನು ಶೀಘ್ರದಲ್ಲಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ.
    -ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts