More

    ವಿಶ್ವ ವಿಜಯದ ಮೆಟ್ಟಿಲುಗಳು; ಭಾರತದ ಗೆಲುವಿಗೆ ಕಾರಣವಾದ ಟರ್ನಿಂಗ್​ ಪಾಯಿಂಟ್ಸ್​…

    ಬೆಂಗಳೂರು: ವಿಶ್ವಕಪ್​ ಗೆಲುವೆಂದರೆ ಬರೀ ಸಾಮರ್ಥ್ಯ, ಪ್ರತಿಭೆಗೆ ಒಲಿಯುವಂಥದ್ದಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ, ಸೂಕ್ತ ಆಟಗಾರರನ್ನು ಕಣಕ್ಕಿಳಿಸುವುದರ ಜತೆಗೆ ಅದೃಷ್ಟದ ಬಲವೂ ಬೇಕಾಗಿರುತ್ತದೆ. 2014ರ ಟಿ20 ವಿಶ್ವಕಪ್​, 2021 ಮತ್ತು 2023ರ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಮತ್ತು 2023ರ ಏಕದಿನ ವಿಶ್ವಕಪ್​ನಲ್ಲಿ ಭಾರತಕ್ಕೆ ಸಾಮರ್ಥ್ಯ, ಪ್ರತಿಭೆಯ ಬಲವಿದ್ದರೂ, ಫೈನಲ್​ನಲ್ಲಿ ಅದೃಷ್ಟ ಕೈಕೊಟ್ಟಿತ್ತು. ಆದರೆ ಈ ಬಾರಿ ಎಲ್ಲವೂ ಕೂಡಿಬರುವುದರೊಂದಿಗೆ ಭಾರತ ಟಿ20 ಕ್ರಿಕೆಟ್​ನಲ್ಲಿ ಮತ್ತೆ ವಿಶ್ವ ಚಾಂಪಿಯನ್​ ಪಟ್ಟವೇರಿದೆ. ಅದಕ್ಕೆ ಕಾರಣವಾದ ಪ್ರಮುಖಾಂಶಗಳು ಇಲ್ಲಿವೆ…

    ಬಲಿಷ್ಠ ತಂಡದ ಲಭ್ಯತೆ
    ಕಳೆದ ಆವೃತ್ತಿಯ ಸೆಮೀಸ್​ ಸೋಲಿನ ಬಳಿಕ ಭಾರತ ಟಿ20 ಕ್ರಿಕೆಟ್​ನಲ್ಲಿ ಹಲವು ಯುವ ಆಟಗಾರರನ್ನು ಆಡಿಸಿ ಪ್ರಯೋಗಗಳನ್ನು ನಡೆಸಿದರೂ, ವಿಶ್ವಕಪ್​ ತಂಡದ ಆಯ್ಕೆ ಸಮಯ ಬಂದಾಗ ಬಲಿಷ್ಠ ತಂಡದ ಆದ್ಯತೆ ನೀಡಿತು. ಹೀಗಾಗಿ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಅವರಂಥ ಆಟಗಾರರ ಅನುಭವಕ್ಕೆ ಹೆಚ್ಚಿನ ಆದ್ಯತೆ ದೊರೆಯಿತು. ಚುಟುಕು ಮಾದರಿ ಯುವಕರ ಆಟವೆಂದು ಹಿರಿಯ ಆಟಗಾರರನ್ನು ಕಡೆಗಣಿಸಲಿಲ್ಲ. ಟೂರ್ನಿಯುದ್ದಕ್ಕೂ ವೈಫಲ್ಯ ಕಂಡರೂ ವಿರಾಟ್​ ಕೊಹ್ಲಿ ನಿರ್ಣಾಯಕ ಫೈನಲ್​ನಲ್ಲಿ ದಿಟ್ಟ ಆಟವಾಡುವ ಮೂಲಕ ನಂಬಿಕೆ ಉಳಿಸಿಕೊಂಡರು. ಇನ್ನು ವೇಗಿ ಮೊಹಮದ್​ ಶಮಿ ಹೊರತಾಗಿ ಭಾರತಕ್ಕೆ ಎಲ್ಲ ಪ್ರಮುಖ ಆಟಗಾರರು ಆಯ್ಕೆಗೆ ಲಭ್ಯರಾಗಿದ್ದರು. ಇದರಿಂದ ಯುವ-ಅನುಭವ ಮಿಶ್ರಿತ ತಂಡ ರಚನೆಯಾಯಿತು.

    ಸ್ಪಿನ್​ ಕಾರ್ಯತಂತ್ರ
    ಕೆರಿಬಿಯನ್​ ನೆಲ ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್​ಗೆ ಮಾರಕ ವೇಗಿಗಳನ್ನು ನೀಡಿತ್ತು. ಅದೇ ನೆಲ ಈಗ ಸ್ಪಿನ್​ ಬೌಲಿಂಗ್​ ಸ್ನೇಹಿಯೂ ಆಗಿದೆ. ಇದನ್ನು ಅರಿತೇ ಭಾರತ ತಂಡ ನಾಲ್ವರು ಸ್ಪಿನ್ನರ್​ಗಳನ್ನು ಆರಿಸಿತು. ಮೂರೇ ತಜ್ಞ ವೇಗಿಗಳನ್ನು ಆರಿಸಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು. ಆದರೆ ವಿಶ್ವಕಪ್​ನಲ್ಲಿ ಭಾರತ ತನ್ನ ಪಂದ್ಯಗಳನ್ನು ಬೆಳಗ್ಗಿನ ಸಮಯದಲ್ಲಿ ಆಡಲಿರುವುದರಿಂದ ಸ್ಪಿನ್ನರ್​ಗಳೇ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ತಂಡದ ಕಾರ್ಯತಂತ್ರ ಲಿಸಿದೆ. ಎಡಗೈ ಸ್ಪಿನ್ನರ್​ ಕುಲದೀಪ್​ ಯಾದವ್​ ಎದುರಾಳಿಗಳಿಗೆ ಕಂಟಕ ಎನಿಸಿದರು.

    ಸಮತೋಲನ ತಂದ ಹಾರ್ದಿಕ್​
    ಕಳೆದ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ನಾಯಕರಾಗಿ ಹಾರ್ದಿಕ್​ ಪಾಂಡ್ಯ ಭಾರಿ ಟೀಕೆಗಳನ್ನು ಎದುರಿಸಿದರು. ನಾಯಕ ಮಾತ್ರವಲ್ಲದೆ ಬ್ಯಾಟಿಂಗ್​&ಬೌಲಿಂಗ್​ನಲ್ಲೂ ವೈಫಲ್ಯ ಕಂಡರು. ಇದರ ನಡುವೆ ವಿಶ್ವಕಪ್​ ತಂಡದಿಂದ ಅವರನ್ನು ಕೈಬಿಡಬೇಕೆಂಬ ವಾದಗಳೂ ಇದ್ದವು. ಆದರೆ ಟೀಮ್​ ಮ್ಯಾನೇಜ್​ಮೆಂಟ್​ ಹಾರ್ದಿಕ್​ಗೆ ಆದ್ಯತೆ ನೀಡಿತು. ಈ ನಂಬಿಕೆಯನ್ನು ಹಾರ್ದಿಕ್​ ಉಳಿಸಿಕೊಂಡಿದ್ದು ವಿಶ್ವಕಪ್​ನಲ್ಲಿ ಬ್ಯಾಟಿಂಗ್​-ಬೌಲಿಂಗ್​ ಎರಡಲ್ಲೂ ಉಪಯುಕ್ತ ಕೊಡುಗೆ ನೀಡುವ ಮೂಲಕ ತಂಡಕ್ಕೆ ಹೆಚ್ಚಿನ ಸಮತೋಲನವನ್ನೂ ತಂದುಕೊಟ್ಟರು. ಫೈನಲ್​ನಲ್ಲಿ ನಿರ್ಣಾಯಕ ಪಾತ್ರವನ್ನೂ ನಿರ್ವಹಿಸಿದರು.

    ರೋಹಿತ್​ ಶರ್ಮ ನಾಯಕನಾಟ
    ರೋಹಿತ್​ ಶರ್ಮ ನಾಯಕನಾಗಿ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 119 ರನ್​ ರಸಿಕೊಳ್ಳುವಲ್ಲಿ ರೋಹಿತ್​ ಮಾಡಿದ ಬೌಲಿಂಗ್​ ಬದಲಾವಣೆಗಳು ಗಮನಸೆಳೆದವು. ಇನ್ನು ಬ್ಯಾಟರ್​ ಆಗಿಯೂ ಅವರ ಕೊಡುಗೆ ಮಹತ್ವದ್ದು. ತಂಡದ ಟಾಪ್​ ಸ್ಕೋರರ್​ ಎನಿಸಿದ ರೋಹಿತ್​, ಸೂಪರ್​-8ನಲ್ಲಿ ಆಸ್ಟ್ರೆಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆಕ್ರಮಣಕಾರಿ ಆಡುವ ಮೂಲಕ 2023ರ ಏಕದಿನ ವಿಶ್ವಕಪ್​ ಫೈನಲ್​ ಸೋಲಿನ ಸೇಡು ತೀರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೆಮೀಸ್​ನಲ್ಲಿ ಇಂಗ್ಲೆಂಡ್​ ವಿರುದ್ಧವೂ ಅವರ ಆಟ ನಿರ್ಣಾಯಕವೆನಿಸಿತು.

    ಮರಳಿದ ರಿಷಭ್​ ಪಂತ್​
    2022ರ ಕೊನೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾಗಿ ಒಂದು ವರ್ಷ ಕಾಲ ಕ್ರಿಕೆಟ್​ ಮೈದಾನದಿಂದ ದೂರವಿದ್ದ ರಿಷಭ್​ ಪಂತ್​ ಯಶಸ್ವಿ ಪುನರಾಗಮನವನ್ನೇ ಕಂಡರು. ವಿಕೆಟ್​ ಕೀಪರ್​ ಪಾತ್ರದೊಂದಿಗೆ ವನ್​ಡೌನ್​ ಕ್ರಮಾಂಕದ ಹೊಸ ಜವಾಬ್ದಾರಿಯನ್ನೂ ಅವರು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರ 42 ರನ್​ ಕೊಡುಗೆ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೇ ನಿರ್ವಹಿಸಿತು.

    ಬುಮ್ರಾಗೆ ಅರ್ಷದೀಪ್​ ಸಾಥ್​
    ಜಸ್​ಪ್ರೀತ್​ ಬುಮ್ರಾ ಎಂದಿನಂತೆ ಮಾರಕ ಎಸೆತಗಳಿಂದ ಎದುರಾಳಿಯನ್ನು ಕಾಡಿದರು. ಮೊಹಮದ್​ ಶಮಿ ಗೈರಿನಲ್ಲಿ ಅವರಿಗೆ ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಸಮರ್ಥ ಬೆಂಬಲವನ್ನೇ ಒದಗಿಸಿದರು. ಇವರಿಬ್ಬರು ಪವರ್​ಪ್ಲೇ ಮತ್ತು ಡೆತ್​ ಓವರ್​ಗಳಲ್ಲಿ ಎದುರಾಳಿ ಪಾಲಿಗೆ ದುಃಸ್ವಪ್ನ ಎನಿಸಿದರು. ಈ ಮೂಲಕ ಭಾರತದ ಯಶಸ್ಸಿಗೆ ಬಲ ತುಂಬಿದರು. ಫೈನಲ್​ನಲ್ಲಿ ಕೊನೇ 5 ಓವರ್​ಗಳಲ್ಲಿ 30 ರನ್​ ಮಾತ್ರ ಬೇಕಿದ್ದಾಗ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕುವಲ್ಲಿ ಇವರಿಬ್ಬರ ಪಾತ್ರವೂ ಮಹತ್ವದ್ದಾಗಿದೆ.

    ಚುರುಕಿನ ಫೀಲ್ಡಿಂಗ್​
    ಪ್ರತಿ ಪಂದ್ಯ ಶ್ರೇಷ್ಠ ಫೀಲ್ಡಿಂಗ್​ ನಿರ್ವಹಣೆಗೆ ಪದಕ ನೀಡುವ ಸಂಪ್ರದಾಯವನ್ನು ಏಕದಿನ ವಿಶ್ವಕಪ್​ನಲ್ಲಿ ಆರಂಭಿಸಿದ್ದ ಭಾರತ ಅದನ್ನು ಟಿ20 ವಿಶ್ವಕಪ್​ನಲ್ಲೂ ಮುಂದುವರಿಸಿತು. ಇದು ಮೈದಾನದಲ್ಲಿ ಆಟಗಾರರ ಫೀಲ್ಡಿಂಗ್​ ನಿರ್ವಹಣೆ ಸುಧಾರಿಸಿತು. ಸೂಪರ್-8ನಲ್ಲಿ ಆಸೀಸ್​ ಎದುರು ಅಕ್ಷರ್​ ಪಟೇಲ್​ ಬೌಂಡರಿ ಬಳಿ ಹಿಡಿದ ಮಿಚೆಲ್​ ಮಾರ್ಷ್​ರ ಅದ್ಭುತ ಕ್ಯಾಚ್​ ಪಂದ್ಯಕ್ಕೆ ತಿರುವು ನೀಡಿದರೆ, ಫೈನಲ್​ನ ಕೊನೇ ಓವರ್​ನಲ್ಲಿ ಸೂರ್ಯಕುಮಾರ್​ ಬೌಂಡರಿ ಬಳಿ ಹಿಡಿದ ಡೇವಿಡ್​ ಮಿಲ್ಲರ್​ರ ಕ್ಯಾಚ್​ “ವಿಶ್ವಕಪ್​’ನಷ್ಟೇ ಅಮೂಲ್ಯವಾದುದು.

    ಕೋಚ್​ ದ್ರಾವಿಡ್​ ಮಾರ್ಗದರ್ಶನ
    ಟೀಮ್​ ಇಂಡಿಯಾ ಕೋಚ್​ ಆಗಿ ರಾಹುಲ್​ ದ್ರಾವಿಡ್​ ಕೊಡುಗೆಯೂ ಮಹತ್ವದ್ದಾಗಿದೆ. 2023ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​, ಏಕದಿನ ವಿಶ್ವಕಪ್​ ಫೈನಲ್​ ಸೋತರೂ ತಂಡದ ಮನೋಬಲ ಕುಗ್ಗದಂತೆ ಇನ್ನೊಂದು ಅವಧಿಗೆ ಮುಂದುವರಿದ ದ್ರಾವಿಡ್​, ತಾನು ಸಾಧಿಸಬೇಕಾದ್ದನ್ನು (ಐಸಿಸಿ ಟ್ರೋಫಿ ಗೆಲುವು) ಕೊನೆಗೂ ಸಾಧಿಸಿ ತೋರಿಸಿದರು. ನಾಯಕ ರೋಹಿತ್​ ಶರ್ಮ ಜತೆಗಿನ ಅವರ ಜುಗಲ್​ಬಂದಿಯಲ್ಲಿ ಕೊನೆಗೂ ಐಸಿಸಿ ಟ್ರೋಫಿ ಗೆಲುವಿನ ಬರವೂ ನೀಗಿದೆ.

    ವಿಶ್ವಕಪ್​ ಗೆಲುವಿನ ಹಾದಿ…
    ಲೀಗ್​
    *ಐರ್ಲೆಂಡ್​ ಎದುರು 8 ವಿಕೆಟ್​ ಜಯ
    *ಪಾಕಿಸ್ತಾನ ವಿರುದ್ಧ 6 ರನ್​ ಜಯ
    *ಅಮೆರಿಕ ಎದುರು 7 ವಿಕೆಟ್​ ಜಯ
    *ಕೆನಡಾ ವಿರುದ್ಧ ಪಂದ್ಯ ರದ್ದು
    ಸೂಪರ್​-8
    *ಅಫ್ಘಾನಿಸ್ತಾನ ಎದುರು 47 ರನ್​ ಜಯ
    *ಬಾಂಗ್ಲಾದೇಶ ವಿರುದ್ಧ 50 ರನ್​ ಜಯ
    *ಆಸ್ಟ್ರೆಲಿಯಾ ಎದುರು 24 ರನ್​ ಜಯ
    ಸೆಮಿಫೈನಲ್​
    *ಇಂಗ್ಲೆಂಡ್​ ಎದುರು 68 ರನ್​ ಗೆಲುವು
    ಫೈನಲ್​
    *ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ ಜಯ

    ಟಿ20 ವಿಶ್ವಕಪ್​ ವಿಜೇತ ಭಾರತ ತಂಡಕ್ಕೆ ಬಂಪರ್​ ಬಹುಮಾನ ಘೋಷಿಸಿದ ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts