More

    ರಾಜ್ಯ ಮಟ್ಟದ ಸರಕು ಸಾಗಣೆದಾರರ ಸಮ್ಮೇಳನ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಹಳೇ ಗಬ್ಬೂರ್​ನ ಸ್ಟಾರ್ ಗಾರ್ಡನ್ ಹೋಟೆಲ್​ನಲ್ಲಿ ಜೂ. 9ರಂದು ಬೆಳಗ್ಗೆ 10.30ಕ್ಕೆ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್​ನ 33ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ರಾಜ್ಯ ಮಟ್ಟದ ಲಾರಿ ಮಾಲೀಕರ ಮತ್ತು ಸರಕು ಸಾಗಣೆದಾರರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಸಿ. ನವೀನ ರೆಡ್ಡಿ ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 8ರಿಂದ 10 ಸಾವಿರ ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ. ವಾರ್ಷಿಕ ಸಭೆ ಹಾಗೂ ಸಮ್ಮೇಳನದಲ್ಲಿ ರಾಜ್ಯ 30 ಜಿಲ್ಲೆಗಳ ಹಾಗೂ ತಮಿಳುನಾಡು, ಕೇರಳ, ಮಹಾರಾಷ್ಟ್ರ, ತೇಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಲಾರಿ ಮಾಲೀಕರು ಪಾಲ್ಗೊಳ್ಳುವರು. ಪ್ಯಾನಿಕ್ ಬಟನ್, ಟೋಲ್ ಸಂಗ್ರಹ, ಜಿಎಸ್​ಟಿ ಸಮಸ್ಯೆ ಕುರಿತು ಚರ್ಚೆ ನಡೆಸಲಾಗುವುದು ಎಂದರು.

    ಹುಬ್ಬಳ್ಳಿ-ಧಾರವಾಡ ಬೈಪಾಸ್​ನಲ್ಲಿ ಕಳೆದ 25 ವರ್ಷಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇದೀಗ ಪುನಃ ಅವಧಿ ವಿಸ್ತರಣೆ ಮಾಡಿರುವುದು ಯಾಕೆ? ಈ ಮಾರ್ಗದಲ್ಲಿ ತಕ್ಷಣ ಟೋಲ್ ಸಂಗ್ರಹ ಕೈ ಬಿಡಬೇಕು. ಹೆದ್ದಾರಿಯಲ್ಲಿ ಪ್ರತಿ 65 ಕಿಲೋ ಮೀಟರ್​ಗೆ ಟೋಲ್ ಗೇಟ್ ಇರಬೇಕೆಂಬ ನಿಯಮವಿದೆ. ಆದರೆ, 30-35 ಕಿ.ಮೀ. ಒಂದರಂತೆ ಟೋಲ್ ಗೇಟ್ ಇವೆ. ಟೋಲ್ ಗೇಟ್ ಬಳಿ ಅಥವಾ ಆ ಮಾರ್ಗದಲ್ಲಿ ಲಾರಿ ಮಾಲೀಕರಿಗೆ ವಿಶ್ರಾಂತಿ ಕೊಠಡಿ, ಅಂಬುಲೆನ್ಸ್ ವ್ಯವಸ್ಥೆ, ಶೌಚಗೃಹ, ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಆದರೆ, ಬಹುತೇಕ ಕಡೆ ಇರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎನ್. ಶ್ರೀನಿವಾಸ ರಾವ್, ಗೈಬುಸಾಬ ಹೊನ್ಯಾಳ, ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣ ಪ್ರಸಾದ, ವಾಸು ಕೋನರಡ್ಡಿ, ರವೀಂದ್ರ ಬೆಳಂಕರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts