ಲಖನೌ: ಸತ್ಸಂಗ ಕಾರ್ಯಕ್ರಮದಲ್ಲಿ ಉಂಟಾದ ಭೀಕರ ಕಾಲ್ತುಳಿತದಿಂದಾಗಿ 27ಕ್ಕೂ ಹೆಚ್ಚು ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಸಿಕಂದರಾವು ಪಟ್ಟಣದ ಫುಲ್ರೈ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಕೀಯ ಅಧಿಕಾರಿ ಉಮೇಶ್ ತ್ರಿಪಾಠಿ, ಸತ್ಸಂಗದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ 25 ಮಹಿಳೆಯರು, 2 ಪುರುಷರು ಒಳಗೊಂಡಂತೆ 27 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಗಾಯಾಳುಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಲಿನ ಬದಲು ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು; ಮುಂದೆ ನಡೆದಿದ್ದು ಮಾತ್ರ…!
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಹತರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಭೋಲೆ ಬಾಬಾರ ಸತ್ಸಂಗ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಈ ವೇಳೆ ನೂಕುನುಗ್ಗಲಾಗಿದ್ದು, ಕಾಲ್ತುಳಿತ ಉಂಟಾಗಿದೆ. ಘಟನೆಯಲ್ಲಿ 27 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದು, ಅಧಿಕಾರಿಗಳಿಗೆ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಆಗ್ರಾ ಎಡಿಜಿ ಮತ್ತು ಅಲಿಗಢದ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಮೃತರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.