More

    ಶ್ರೀಲಂಕಾದ 13ನೇ ತಿದ್ದುಪಡಿ; ಅನುಷ್ಠಾನಕ್ಕೆ ಭಾರತದ ಒತ್ತಾಸೆ

    ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಈ ತಿದ್ದುಪಡಿಯನ್ನು ಏಕೆ ಮಾಡಲಾಯಿತು? ಪೂರ್ಣ ಪ್ರಮಾಣದಲ್ಲಿ ಇದು ಏಕೆ ಜಾರಿಯಾಗಿಲ್ಲ? ಇದರಲ್ಲಿ ಭಾರತದ ಪಾತ್ರ, ಆಸಕ್ತಿ ಏನು?

    ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘ ಅವರು ಬುಧವಾರ (ಜುಲೈ 26) ತಮಿಳು ಸಾಮರಸ್ಯ ಮತ್ತು ಕಲ್ಯಾಣ ವಿಷಯದ ಬಗ್ಗೆ ರ್ಚಚಿಸಲು ಸರ್ವಪಕ್ಷ ಸಭೆ ನಡೆಸಿದರು. ಅವರು ಭಾರತಕ್ಕೆ ಭೇಟಿ ನೀಡಿದ ಕೆಲವು ದಿನಗಳ ನಂತರ ಈ ಸಭೆ ಜರುಗಿದೆ. ವಿಕ್ರಮಸಿಂಘ ಅವರು ಕೆಲ ದಿನಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾದಲ್ಲಿನ ತಮಿಳು ಸಮುದಾಯಕ್ಕೆ ಗೌರವಪೂರ್ಣ ಜೀವನವನ್ನು ಖಾತ್ರಿಪಡಿಸುವ ಅಗತ್ಯವನ್ನು ಒತ್ತಿಹೇಳಿದ್ದರು.

    1987ರ ಭಾರತ-ಶ್ರೀಲಂಕಾ ಒಪ್ಪಂದದಿಂದ ಹೊರಹೊಮ್ಮಿರುವ ಶ್ರೀಲಂಕಾದ ಸಂವಿಧಾನದ 13 ನೇ ತಿದ್ದುಪಡಿಯನ್ನು ಕಾರ್ಯಗತಗೊಳಿಸಲು ಮತ್ತು ಪ್ರಾಂತೀಯ ಕೌನ್ಸಿಲ್ ಚುನಾವಣೆಗಳನ್ನು ನಡೆಸಲು ವಿಕ್ರಮಸಿಂಘ ಅವರು ಬದ್ಧರಾಗಿದ್ದಾರೆ ಎಂಬ ಭರವಸೆಯನ್ನು ಕೂಡ ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದರು.

    ರಾಜಕೀಯ ಪಕ್ಷಗಳ ಒಪ್ಪಂದಕ್ಕೆ ಒಳಪಟ್ಟು 13ನೇ ತಿದ್ದುಪಡಿಯನ್ನು ಜಾರಿಗೊಳಿಸಲಾಗುವುದು ಎಂದು ವಿಕ್ರಮಸಿಂಘ ಅವರು ಕಳೆದ ವಾರ ಶ್ರೀಲಂಕಾದ ಸಂಸತ್ತಿನಲ್ಲಿ ಹೇಳಿದ್ದರು ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿವೆ. 13ಎ ಸಂಪೂರ್ಣ ಅನುಷ್ಠಾನವು ಇಡೀ ದೇಶಕ್ಕೆ ನಿರ್ಣಾಯಕವಾಗಿರುವುದರಿಂದ ಈ ನಿಟ್ಟಿನಲ್ಲಿ ಒಮ್ಮತಕ್ಕೆ ಬರಲು ಎಲ್ಲ ರಾಜಕೀಯ ಪಕ್ಷಗಳು ಮಾತುಕತೆಗೆ ಸೇರಬೇಕು ಎಂದೂ ಬುಧವಾರ ನಡೆದ ಸಭೆಯಲ್ಲಿ ವಿಕ್ರಮಸಿಂಘ ಹೇಳಿದ್ದಾರೆ.

    1987ರ ಭಾರತ ಶ್ರೀಲಂಕಾ ಒಪ್ಪಂದ

    1987ರ ಜುಲೈ 29 ರಂದು ಕೊಲಂಬೊದಲ್ಲಿ ಭಾರತದ ಅಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿ ಮತ್ತು ಶ್ರೀಲಂಕಾದ ಅಂದಿನ ಅಧ್ಯಕ್ಷ ಜೆ.ಆರ್. ಜಯವರ್ಧನೆ ಅವರ ನಡುವೆ ಭಾರತ- ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಶ್ರೀಲಂಕಾದ ಸಂವಿಧಾನಕ್ಕೆ 13ನೇ ತಿದ್ದುಪಡಿಯನ್ನು ಮಾಡಲಾಯಿತು. 1978ರ ಸಂವಿಧಾನದ ಅನುಸಾರ, ಶ್ರೀಲಂಕಾ ದೇಶವು ಏಕೀಕೃತ ಸರ್ಕಾರವನ್ನು ಹೊಂದಿದ್ದು, ಎಲ್ಲ ಅಧಿಕಾರಗಳು ಕೇಂದ್ರ ಸರ್ಕಾರದ ಕೈಯಲ್ಲಿವೆ. ಶ್ರೀಲಂಕಾದಲ್ಲಿನ ತಮಿಳು ಅಲ್ಪಸಂಖ್ಯಾತರು ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಕೇಂದ್ರೀಕೃತವಾಗಿದ್ದಾರೆ. ಇಲ್ಲಿ ನಾಗರಿಕ ಹಕ್ಕುಗಳು ಮತ್ತು ಹೆಚ್ಚಿನ ಸ್ವಾಯತ್ತತೆಗಾಗಿ ನಡೆದ ಹೋರಾಟವು ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್​ಟಿಟಿಇ) ಮತ್ತು ಶ್ರೀಲಂಕಾ ಸರ್ಕಾರದ ನಡುವಿನ ದೀರ್ಘ ಮತ್ತು ರಕ್ತಸಿಕ್ತ ಅಂತರ್ಯುದ್ಧಕ್ಕೆ ಕಾರಣವಾಗಿತ್ತು. ಇತರ ಕೆಲವು ಗುಂಪುಗಳು ಸಹ ಈ ಹೋರಾಟದಲ್ಲಿ ಪಾಲ್ಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಭಾರತ- ಶ್ರೀಲಂಕಾ ನಡುವಿನ 1987ರ ಒಪ್ಪಂದವು ಶ್ರೀಲಂಕಾ ದೇಶದ ಒಂಬತ್ತು ಪ್ರಾಂತ್ಯಗಳ ಸರ್ಕಾರಗಳಿಗೆ ಕೆಲವು ಅಧಿಕಾರಗಳನ್ನು ವರ್ಗಾಯಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಹೊಂದಿತ್ತು. ಈ ಮೂಲಕ ಅಂತರ್ಯುದ್ಧಕ್ಕೆ ಸಾಂವಿಧಾನಿಕ ಪರಿಹಾರವನ್ನು ಕಂಡುಕೊಳ್ಳಲು ಬಯಸಲಾಗಿತ್ತು. ಈ ಒಪ್ಪಂದದ ನಂತರ ಪ್ರಾಂತ್ಯಗಳಿಗೆ ಅಧಿಕಾರದ ವಿಕೇಂದ್ರೀಕರಣವನ್ನು ಅನುಮತಿಸಲು ಸಂವಿಧಾನದ 13ನೇ ತಿದ್ದುಪಡಿಯನ್ನು ಶ್ರೀಲಂಕಾ ಕೈಗೊಂಡಿತು. ಭಾರತ ಸರ್ಕಾರವು ನಿರ್ಣಯಗಳನ್ನು ಖಾತರಿಪಡಿಸುತ್ತದೆ ಮತ್ತು ಈ ಪ್ರಸ್ತಾಪಗಳ ಅನುಷ್ಠಾನದಲ್ಲಿ ಸಹಕರಿಸುತ್ತದೆ ಎಂದೂ ಒಪ್ಪಂದವು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ವಿಕ್ರಮಸಿಂಘ ಅವರು ಈ ತಿಂಗಳ ಆರಂಭದಲ್ಲಿ ಭಾರತ ಭೇಟಿಯ ಮೊದಲು ಸೇರಿದಂತೆ ಹಲವಾರು ಬಾರಿ ಶ್ರೀಲಂಕಾದ ತಮಿಳು ಗುಂಪುಗಳು ಭಾರತಕ್ಕೆ ಮನವಿ ಸಲ್ಲಿಸಿದ್ದು, ಒಪ್ಪಂದವನ್ನು ಸಂಪೂರ್ಣವಾಗಿ ಜಾರಿ ಗೊಳಿಸಲಾಗಿದೆ ಎಂದು ಖಚಿತ ಪಡಿಸಿಕೊಳ್ಳಲು ಒತ್ತಾಯಿಸಿವೆ.

    ಸ್ವಾಯತ್ತತೆ ಅನುಷ್ಠಾನದ ಸ್ಥಿತಿಗತಿ

    ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಸಶಸ್ತ್ರ ಹೋರಾಟ ನಡೆದಿದ್ದ ಸಂದರ್ಭದಲ್ಲಿ, ಸಂವಿಧಾನದ 13ನೇ ತಿದ್ದುಪಡಿಯ ನಂತರ ಶ್ರೀಲಂಕಾದಾದ್ಯಂತ ಪ್ರಾಂತ್ಯಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಲಾಯಿತು. ಕೇಂದ್ರ ಸರ್ಕಾರವು ಭೂಮಿ ಮತ್ತು ಪೊಲೀಸ್ ಅಧಿಕಾರಗಳನ್ನು ಉಳಿಸಿಕೊಂಡರೆ, ಚುನಾಯಿತ ಪ್ರಾಂತೀಯ ಕೌನ್ಸಿಲ್​ಗಳು (ಭಾರತದಲ್ಲಿನ ರಾಜ್ಯ ವಿಧಾನಸಭೆಗಳ ರೀತಿಯಲ್ಲಿ) ಕೃಷಿ, ವಸತಿ, ರಸ್ತೆ ಸಾರಿಗೆ, ಶಿಕ್ಷಣ ಮತ್ತು ಆರೋಗ್ಯದಂತಹ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರ ನೀಡಲಾಯಿತು. ಆದರೆ, ಅಧಿಕಾರಗಳ ವಿಭಜನೆಯನ್ನು ಎಂದಿಗೂ ಸಂಪೂರ್ಣವಾಗಿ ಮಾಡಲಾಗಿಲ್ಲ. ಅಲ್ಲದೆ, ಕಡಿಮೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಕೆಲವರು ಅತೃಪ್ತಿ ಹೊಂದಿದ್ದರೆ, ತೀವ್ರ ರಾಷ್ಟ್ರೀಯವಾದಿಗಳು ಕೇಂದ್ರ ಸರ್ಕಾರದ ಅಧಿಕಾರವನ್ನು ದುರ್ಬಲಗೊಳಿಸುವ ಕುರಿತಂತೆ ಎಚ್ಚರಿಕೆ ವಹಿಸಬೇಕೆಂದು ಪ್ರತಿಪಾದಿಸುತ್ತಾರೆ. ಸಿಂಹಳ ರಾಷ್ಟ್ರೀಯವಾದಿಗಳು 13ನೇ ತಿದ್ದುಪಡಿಯನ್ನು ಭಾರತವು ಹೇರಿದೆ ಎಂದೇ ಪರಿಗಣಿಸುತ್ತಾರೆ. ಅಲ್ಲದೆ, ಮೂಲತಃ ಯಾವ ಪ್ರದೇಶಗಳಿಗಾಗಿ ಅಧಿಕಾರ ವಿಕೇಂದ್ರೀಕರಣ ವನ್ನು ಕೈಗೊಳ್ಳಲಾಗಿತ್ತೋ ಆ ಪ್ರದೇಶಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನ ಅಗಲಿಲ್ಲ.

    ನೆರವೇರದ ಪ್ರಾಂತ್ಯ ವಿಲೀನ…

    1987ರ ಭಾರತ-ಶ್ರೀಲಂಕಾ ಒಪ್ಪಂದದ ಅನುಸಾರವಾಗಿ, ತಮಿಳರು ಬಹುಸಂಖ್ಯೆಯಲ್ಲಿರುವ ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳನ್ನು ತಾತ್ಕಾಲಿಕವಾಗಿ ವಿಲೀನಗೊಳಿಸಿದ ನಂತರ, ಇವೆರಡೂ ಒಟ್ಟಿಗೆ ಇರಬೇಕೇ ಅಥವಾ ಎರಡು ಪ್ರತ್ಯೇಕ ಪ್ರಾಂತೀಯ ಮಂಡಳಿಗಳನ್ನು ಹೊಂದಬೇಕೆ ಎಂದು ನಿರ್ಧರಿಸಲು ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಬೇಕಾಗಿತ್ತು. ಹೀಗಾಗಿ, ವಿಲೀನಗೊಂಡ ಉತ್ತರ ಮತ್ತು ಪೂರ್ವ ಪ್ರಾಂತ್ಯಕ್ಕೆ 1988ರ ನವೆಂಬರ್ 19ರಂದು ಚುನಾವಣೆಗಳು ನಡೆದವು. ಆದರೆ, ಮೂರು ತಿಂಗಳ ನಂತರ ಮುಖ್ಯಮಂತ್ರಿ ಅಣ್ಣಾಮಲೈ ವರದರಾಜ ಪೆರುಮಾಳ್ ಅವರು ಸ್ವತಂತ್ರ ’ಈಳಮ್ ಅನ್ನು ಘೊಷಿಸಲು ಪರಿಷತ್ತಿನಲ್ಲಿ ಒಂದು ಪ್ರಸ್ತಾವನೆಯನ್ನು ಮಂಡಿಸಿದರು. ಇದು ಅಂದಿನ ಶ್ರೀಲಂಕಾ ಅಧ್ಯಕ್ಷ ರಣಸಿಂಗ್ ಪ್ರೇಮದಾಸ ಅವರು ಪರಿಷತ್ತನ್ನು ವಿಸರ್ಜಿಸಲು ಮತ್ತು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಪ್ರೇರೇಪಿಸಿತು. ರಾಷ್ಟ್ರಪತಿ ಆಳ್ವಿಕೆಯು 2006ರ ಡಿಸೆಂಬರ್​ವರೆಗೆ ಮುಂದುವರಿಯಿತು. ಈ ಎರಡು ಪ್ರಾಂತ್ಯಗಳ ವಿಲೀನ ಕುರಿತಂತೆ ಜನಾಭಿಪ್ರಾಯ ಸಂಗ್ರಹಣೆಯು ಎಂದಿಗೂ ನಡೆಯಲಿಲ್ಲ. 2006ರಲ್ಲಿ ಶ್ರೀಲಂಕಾದ ಸುಪ್ರೀಂ ಕೋರ್ಟ್ ಈ ವಿಲೀನವು ಕಾನೂನುಬಾಹಿರ ಎಂದು ತೀರ್ಪು ನೀಡಿತು. ಹೀಗಾಗಿ, ಉತ್ತರ ಮತ್ತು ಪೂರ್ವ ಪ್ರಾಂತ್ಯಗಳನ್ನು 2007ರ ಜನವರಿ 1 ರಂದು ಮತ್ತೆ ಬೇರ್ಪಡಿಸಲಾಯಿತು. 2008ರ ಮೇ 10ರಂದು ಪೂರ್ವ ಪ್ರಾಂತೀಯ ಕೌನ್ಸಿಲ್​ಗೆ ಚುನಾವಣೆಗಳು ನಡೆದವು. ಉತ್ತರ ಪ್ರಾಂತ್ಯಕ್ಕೆ 2013ರ ಸೆಪ್ಟೆಂಬರ್ 21ರಂದು ಕೌನ್ಸಿಲ್​ಗೆ ಚುನಾವಣೆಗಳು ಜರುಗಿದವು. ಆದರೆ, 2014ರಿಂದಲೂ ಸಂಪೂರ್ಣ ಶ್ರೀಲಂಕಾದಲ್ಲಿ ಪ್ರಾಂತೀಯ ಚುನಾವಣೆಗಳು ಬಾಕಿ ಉಳಿದಿವೆ. ಏಕೆಂದರೆ ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸಲು 2017ರ ಕಾಯ್ದೆಯನ್ನು ಸಂಸತ್ತಿನಲ್ಲಿ ಇನ್ನೂ ತಿದ್ದುಪಡಿ ಮಾಡಬೇಕಾಗಿದೆ.

    ಒಪ್ಪಂದ ಇತರ ಷರತ್ತುಗಳು

    1. ಸಿಂಹಳ ಭಾಷೆಯ ಜತೆಗೆ ತಮಿಳು ಮತ್ತು ಇಂಗ್ಲಿಷ್ ಅನ್ನು ಅಧಿಕೃತ ಭಾಷೆಗಳಾಗಿ ಅಳವಡಿಸಿಕೊಳ್ಳುವುದು

    2. 1987ರ ಆಗಸ್ಟ್ 15ರ ಒಳಗಾಗಿ ಪೂರ್ವ ಮತ್ತು ಉತ್ತರ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕುವುದು

    3. ಉಗ್ರಗಾಮಿ ಗುಂಪುಗಳಿಂದ ಶಸ್ತ್ರಾಸ್ತ್ರಗಳ ಶರಣಾಗತಿ

    4. ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಇತರ ತುರ್ತು ಕಾನೂನುಗಳ ಅಡಿಯಲ್ಲಿ ಬಂಧಿಸಲಾದ ರಾಜಕೀಯ ಮತ್ತು ಇತರ ಕೈದಿಗಳಿಗೆ ಸಾಮಾನ್ಯ ಕ್ಷಮಾದಾನ

    ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts