ಕೆ.ಆರ್.ನಗರ: ಪಟ್ಟಣದ 1ನೇ ವಾರ್ಡಿನಲ್ಲಿರುವ ಶ್ರೀ ದಿಡ್ಡೇದಮ್ಮ ತಾಯಿಯ ವಾರ್ಷಿಕ ಮಹೋತ್ಸವವು ಅದ್ದೂರಿಯಾಗಿ ಶುಕ್ರವಾರ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಮಧುವನಹಳ್ಳಿ ಬಡಾವಣೆಯ 1, 22 ಮತ್ತು 23 ವಾರ್ಡ್ಗಳು ಹಾಗೂ ಜೋಡಿಗೌಡನಕೊಪ್ಪಲು ಗ್ರಾಮಕ್ಕೆ ಒಳಪಡುವ ಈ ಗ್ರಾಮ ದೇವತೆಯು ಬಹಳ ಪ್ರಸಿದ್ಧಿಯಾಗಿದ್ದು ಕಳೆದ 1 ತಿಂಗಳಿನಿಂದಲೇ ಹಬ್ಬದ ಪೂರ್ವಸಿದ್ಧತೆ ಮತ್ತು ದೇವಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ಶುಕ್ರವಾರ ಮಧ್ಯಾಹ್ನ ಪಟ್ಟಣದ ಮಧುವನಹಳ್ಳಿ ಬಡಾವಣೆಯ 1ನೇ ವಾರ್ಡಿನಲ್ಲಿರುವ ಹಳೆಯ ದೇವಾಲಯದಿಂದ ಮೆರವಣಿಗೆ ಹೊರಟ ತಾಯಿಯ ಉತ್ಸವ ಮೂರ್ತಿಯು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಪಟ್ಟಣದ ಹೊರವಲಯದಲ್ಲಿರುವ ಹಳೇ ಎಡತೊರೆಯ ಕಾವೇರಿ ನದಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಶುದ್ಧಗೊಳಿಸುವ ಮೂಲಕ ವಿವಿಧ ಪೂಜೆ ಪುನಸ್ಕಾರಗಳ ಮೂಲಕ ಅಲಂಕಾರ ಮಾಡಿ ಕಳಸ, ಛತ್ರಿ, ಛಾಮರಗಳೊಂದಿಗೆ ಮಂಗಳವಾದ್ಯ, ತಮಟೆಗಳ ಮೇಳದೊಂದಿಗೆ 1ನೇ ವಾರ್ಡಿನ ಚೀರ್ನಹಳ್ಳಿ ರಸ್ತೆ ಬಳಿಯಿರುವ ಶ್ರೀ ದಿಡ್ಡೇದಮ್ಮ ತಾಯಿಯ ದೇವಸ್ಥಾನದ ಬಳಿ ತರಲಾಯಿತು.
ನಂತರ ಕಳಸಗಳನೊತ್ತ ಬಾಲಕಿಯರು ಮತ್ತು ಅರ್ಚಕರನ್ನು ತಾಳ ಮೇಳಗಳೊಂದಿಗೆ ತಮಟೆಯೊಂದಿಗೆ ಪದ ಹಾಡಿ ಕುಣಿಯುವ ಮೂಲಕ ತಾಯಿ ಮೈದುಂಬುವಂತೆ ಮಾಡಿ ದೇವಸ್ಥಾನದ ಒಳಗೆ ಕರೆದೊಯ್ದು ಪೂಜೆ ನೆರವೇರಿಸಿ ಅಲ್ಲಿಂದ ಮಧುವನಹಳ್ಳಿ ಬಡಾವಣೆಯ 23ನೇ ವಾರ್ಡಿನಲ್ಲಿರುವ ಶ್ರೀ ಮಾರಮ್ಮ ತಾಯಿ ದೇವಸ್ಥಾನದ ಬಳಿ ತಂದು ಪೂಜಿಸಿ ಅಲ್ಲಿಂದ 1ನೇ ವಾರ್ಡಿನಲ್ಲಿರುವ ಹಳೇ ದೇವಾಲಯದಲ್ಲಿ ಉತ್ಸವಮೂರ್ತಿಗಳನ್ನು ಇರಿಸಲಾಯಿತು.
ಈ ಉತ್ಸವವನ್ನು ತಾಲೂಕಿನ ಜನತೆಯ ಜತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಕಣ್ತುಂಬಿಕೊಂಡು ತಾಯಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು.