More

    ಬಿಬಿಎಂಪಿ ಟೆಂಡರ್ ಪ್ರಕ್ರಿಯೆಗೆ ವೇಗ

    ಬೆಂಗಳೂರು: ಬಿಬಿಎಂಪಿ ರೂಪಿಸಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಅನುಷ್ಠಾನಗೊಳಿಸಿ ಟೆಂಡರ್ ಪ್ರಕ್ರಿಯೆಗೆ ವೇಗ ನೀಡಲು ನಿರ್ಧರಿಸಿದೆ.

    ಲೋಕಸಭಾ ಚುನಾವಣೆ ನೀತಿ ಸಂಹಿತಿಯಿಂದಾಗಿ ಬಹುತೇಕ ಟೆಂಡರ್‌ಗಳನ್ನು ಆಹ್ವಾನಿಸದೆ ಸ್ಥಗಿತಗೊಳಿಸಲಾಗಿತ್ತು. ಚಾಲ್ತಿಯಲ್ಲಿದ್ದ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಕಾರ್ಯಾದೇಶ ನೀಡುವ ಕಾರ್ಯಕ್ರಮಗಳನ್ನು ಇದ್ದ ಸ್ಥಿತಿಯಲ್ಲೇ ಕಡತ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ನಾಗರಿಕರಿಗೆ ತಲುಪಿಸಬೇಕಿದ್ದ ವಿವಿಧ ಕಾರ್ಯಕ್ರಮಗಳನ್ನು ತಲುಪಿಸಲು ಸಾಧ್ಯವಾಗಿರಲಿಲ್ಲ. ಸುಮಾರು ಮೂರು ತಿಂಗಳ ಬಳಿಕ ಪಾಲಿಕೆಯು ಟೆಂಡರ್‌ಗಳನ್ನು ಆಹ್ವಾನಿಸುವ ಕೆಲಸನವನ್ನು ಪುನಾರಂಭಿಸಿದೆ.

    ಕಳೆದ ಫೆಬ್ರವರಿ 16ರಂದು ರಾಜ್ಯ ಬಜೆಟ್ ಮಂಡನೆಯಾಗಿತ್ತು. ಆ ಬಳಿಕ ಫೆ.29ರಂದು ಬಿಬಿಎಂಪಿ ಆಯವ್ಯಯ ಮಂಡಿಸಲಾಗಿತ್ತು. ಈ ಎರಡೂ ಬಜೆಟ್ ಮಂಡನೆಯಾದರೂ ಟೆಂಡರ್ ಆಹ್ವಾನಿಸಲು ಹೆಚ್ಚಿನ ಸಮಯ ಬೇಕಿತ್ತು. ಈ ಹಂತದಲ್ಲೇ ಮಾ.16ರಂದು ಲೋಕಸಭೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ದಿನದಿಂದಲೇ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಟೆಂಡರ್ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮೇಲ್ಮನೆ ಚುನಾವಣೆಯ ನೀತಿ ಸಂಹಿತೆಯನ್ನು ಹಿಂತೆಗೆದುಕೊಂಡ ಬಳಿಕ ಸ್ಥಗಿತಗೊಳಿಸಲಾಗಿದ್ದ ಟೆಂಡರ್‌ಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಮುಖ್ಯವಾಗಿ ಕುಡಿಯುವ ನೀರಿನ ಯೋಜನೆಗಳು, ಉದ್ಯಾನಗಳ ನಿರ್ವಹಣೆ, ಮಳೆನೀರುಗಾಲುವೆಗಳ ಬಾಕಿ ಯೋಜನೆಗಳು, ರಸ್ತೆ ಕಾಮಗಾರಿ ಹಾಗೂ ವಾರ್ಡ್ ಮಟ್ಟದ ಕೆಲಸಗಳಿಗೆ ಸಂಬಂಧಿಸಿ ಟೆಂಡರ್‌ಗಳನ್ನು ಅಂತಿಮಗೊಳಿಸುವ ಕಾರ್ಯವನ್ನು ಆಯಾ ವಿಭಾಗದ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ವಲಯ ಮಟ್ಟದಲ್ಲಿ ಆದ್ಯತೆಯ ಮೇರೆಗೆ ಟೆಂಡರ್‌ಗಳನ್ನು ಕರೆಯುವಂತೆ ಕೇಂದ್ರ ಕಚೇರಿಯಿಂದ ಆಯಾ ವಲಯಗಳ ವಲಯ ಆಯುಕ್ತರಿಗೆ ಸೂಚನೆ ರವಾನಿಸಲಾಗಿದೆ.

    ಟೆಂಡರ್ ಒಪ್ಪಿಗೆ ಕೋರಿ ಪ್ರಸ್ತಾವನೆ:

    ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಕ್ರಮವನ್ನು ಹೊಸ ಮೆನುವಿನೊಂದಿಗೆ ಇನ್ನಷ್ಟು ವಿಸ್ತೃತ ರೂಪದಲ್ಲಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಪಾಲಿಕೆಗೆ ಸೂಚನೆ ನೀಡಿದೆ. ಇದರನ್ವಯ ವಲಯವಾರು ಟೆಂಡರ್ ಸಿದ್ಧಪಡಿಸಿ ಜಾರಿಗೆ ತರಲು ಆರ್ಥಿಕ ನೆರವಿನ ಅಗತ್ಯವಿದೆ. ಜತೆಗೆ ಕೆಲವೆಡೆ ಹೊಸದಾಗಿ ಕ್ಯಾಂಟೀನ್‌ಗಳನ್ನು ನಿರ್ಮಿಸಬೇಕಿದೆ. ಈ ಎಲ್ಲದಕ್ಕೂ ಅನುಮೋದನೆ ನೀಡುವಂತೆ ಕೋರಿ ಪಾಲಿಕೆಯು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ನೀತಿ ಸಂಹಿತೆ ಮುಗಿದ ಬಳಿಕ ಗುರುವಾರ (ಜೂ.13) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕ್ಯಾಂಟೀನ್ ಪ್ರಸ್ತಾವನೆಗೆ ಒಪ್ಪಿಗೆ ಸಿಗುವ ಆಶಾಭಾವವನ್ನು ಪಾಲಿಕೆ ವ್ಯಕ್ತಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts