More

    ಟೀಮ್​ ಇಂಡಿಯಾ ವಿರುದ್ಧ ಕೇಳಿ ಬಂತು ಮೋಸದಾಟದ ಆರೋಪ; ಸೂರ್ಯಕುಮಾರ್​ ಹಿಡಿದ ಕ್ಯಾಚ್​ನ ಸುತ್ತ ವಿವಾದದ ಹುತ್ತ

    ಬಾರ್ಬಡೋಸ್​: 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ 2011ರ ಬಳಿಕ ಐಸಿಸಿ ಟ್ರೋಫಿ ಜಯಿಸಿದ್ದು, ದೇಶದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಟೀಮ್​ ಇಂಡಿಯಾ ಯಶಸ್ಸಿನಲ್ಲಿ ಬೌಲರ್​ಗಳೊಂದಿಗೆ ಸೂರ್ಯಕುಮಾರ್​ ಯಾದವ್​ ಬೌಂಡರಿ ಲೈನ್​ನಲ್ಲಿ ಹಿಡಿದ ಆ ಕ್ಯಾಚ್​ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ರೋಹಿತ್​ ಶರ್ಮಾ ವಿರಾಟ್​ ಕೊಹ್ಲಿ (76 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್), ಅಕ್ಷರ್​ ಪಟೇಲ್​ (47 ರನ್, 31 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ ಗಳಿಸಿತ್ತು. ಗೆಲ್ಲುವ ಆಸೆಯೊಂದಿಗೆ ಗುರಿ ಬೆನ್ನತ್ತಿದ್ದ ಹರಿಣಗಳಿಗೆ ಆರಂಭದಲ್ಲೇ ಶಾಕ್​ ನೀಡಿದ ಭಾರತದ ಬೌಲರ್​ಗಳು ದಿಟ್ಟ ಪ್ರತಿರೋಧ ತೋರಿದರು.

    ಈ ವೇಳೆ ಅಪಾಯಕಾರಿಯಾಗಿದ್ದ ಹೆನ್ರಿಚ್​ ಕ್ಲಾಸೆನ್​ಗೆ​ (52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್) ಹಾರ್ದಿಕ್​ ಪಾಂಡ್ಯ ಡಗೌಟ್​ ದಾರಿ ತೋರಿಸಿದರು. ವಾಸ್ತವವಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದ್ದಾಗ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಯಾವುದೇ ತಪ್ಪು ಮಾಡದೆ ಅಮೋಘ ಕ್ಯಾಚ್ ಪಡೆದರು. ಈ ಕ್ಯಾಚ್ ಹಿಡಿಯುವಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ತಪ್ಪು ಮಾಡಿದ್ದರೆ ವಿಶ್ವಕಪ್ ಕನಸು ಭಗ್ನವಾಗುತ್ತಿತ್ತು. ಸೂರ್ಯ ಅವರ ಈ ಅದ್ಬುತ ಫೀಲ್ಡಿಂಗ್‌ಗೆ ದೇಶದ ಕ್ರಿಕೆಟ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಮೊಸಳೆಯೊಂದಿಗೆ ಕಾದಾಡಿ ಕೈ ಕಳೆದುಕೊಂಡ ಬಾಲಕನೊಂದಿಗೆ ವೈದ್ಯರ ಅಮಾನವೀಯ ವರ್ತನೆ; ವಿಡಿಯೋ ವೈರಲ್

    ಇದೀಗ ಈ ಕ್ಯಾಚ್​ನ ಸುತ್ತ ವಿವಾದದ ಹುತ್ತವೇ ನಿರ್ಮಾಣವಾಗಿದ್ದು, ಪಂದ್ಯ ಮುಗಿದು ಕೆಲ ಗಂಟೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಯಾಚ್​ನ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ. ಸೂರ್ಯ ಕುಮಾರ್ ಅವರು ಕ್ಯಾಚ್ ಹಿಡಿದು ಗಾಳಿಗೆ ಚೆಂಡನ್ನು ಎಸೆದಾಗ ಅವರ ಶೂ ಬೌಂಡರಿಯ ಕುಷನ್ ಅನ್ನು ಸ್ಪರ್ಶಿಸಿದೆ ಎನ್ನಲಾದ ವಿಡಿಯೊ ಹರಿದಾಡುತ್ತಿದೆ. ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಬೌಂಡರಿಯ ರೋಪ್ ಅಲುಗಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ -ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಐಸಿಸಿ ಹಾಗೂ ಸಂಬಂಧಪಟ್ಟವರು ಈ ವಿವಾದಕ್ಕೆ ಸಂಬಂಧಿಸಿದಂತೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts