More

    ಸೌರಘಟಕ ಸ್ಥಾಪನೆಗೆ ಅರಭಘಟ್ಟ ರೈತರ ಅಡ್ಡಿ

    ಹೊನ್ನಾಳಿ: ಸೋಲಾರ್ ವಿದ್ಯುತ್ ಘಟಕ ನಿರ್ಮಾಣಕ್ಕೆ ಸರ್ಕಾರಿ ಜಮೀನನ್ನು ಮೀಸಲಿರಿಸಲು ಬಂದ ಅಧಿಕಾರಿಗಳು ಮಂಗಳವಾರ ಸ್ಥಳೀಯ ರೈತರ ವಿರೋಧ ಎದುರಿಸಬೇಕಾಯಿತು.

    ತಾಲೂಕಿನ ಅರಬಗಟ್ಟೆ ಗ್ರಾಮದ 49.14 ಎಕರೆ ಜಮೀನಿನಲ್ಲಿ ಕೇಂದ್ರ ಸರ್ಕಾರದ ಪಿಎಂ ಕುಸುಮ್ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆಯಡಿ ಸೌರ ಘಟಕ ಸ್ಥಾಪಿಸಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ವಿಷಯ ತಿಳಿದ ರೈತರು ಸ್ಥಳಕ್ಕೆ ಧಾವಿಸಿ, ಪ್ರತಿಭಟನೆ ನಡೆಸಿದರು.

    ರೈತ ಸಂಘದ ಬಸಪ್ಪ, ತಾಪಂ ಮಾಜಿ ಸದಸ್ಯ ಉಮೇಶ್ ಮಾತನಾಡಿ, ಇಲ್ಲಿನ ರೈತರು ಹತ್ತಾರು ವರ್ಷಗಳಿಂದ ಈ ಜಮೀನುಗಳಲ್ಲಿ ಉಳುಮೆ ಮಾಡುತ್ತಿದ್ದಾರೆ. ಇದೀಗ ಏಕಾಏಕಿಯಾಗಿ ಜಮೀನು ಹದ್ದುಬಸ್ತ್ ಮಾಡಿ ಬೇಲಿ ಹಾಕಿದರೆ ರೈತರ ಪಾಡೇನು ಎಂದು ಪ್ರಶ್ನಿಸಿದರು. ಇದೇ ವೇಳೆ ಕುರಿ ಮೇಯಿಸಲು ಸರ್ಕಾರಿ ಜಮೀನು ಮೀಸಲಿರಿಸುವಂತೆ ಕುರಿಗಾಹಿಗಳ ತಂಡದವರು ಆಗ್ರಹಿಸಿದರು.

    ಎರಡೂ ತಂಡಗಳ ಮನವಿ ಆಲಿಸಿದ ಎಸಿ ಅಭಿಷೇಕ ಅವರು, ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ವಾಹನಗಳಿಗೆ ಅಡ್ಡ ಕುಳಿತ ರೈತರು

    ಅಧಿಕಾರಿಗಳು ಜಮೀನು ಗಡಿ ಭಾಗ ಗುರುತಿಸಿ ಕಂಬ ನೆಡುತ್ತಿದ್ದಾಗ ರೈತರು ವಾಹನಗಳಿಗೆ ಅಡ್ಡವಾಗಿ ಕುಳಿತು ಕಣ್ಣೀರಿಟ್ಟರು. ಈ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬರುತ್ತಿರುವ ನಮಗೆ ಬದುಕಲು ಬಿಡಿ ಎಂದು ಅಲವತ್ತುಕೊಂಡರು.

    ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪಿಐ ಸುನೀಲ್‌ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆಂಬುಲೆನ್ಸ್, ಆರೋಗ್ಯ ಸಿಬ್ಬಂದಿ ಸಹ ಸ್ಥಳದಲ್ಲಿದ್ದರು.

    ಹೊನ್ನಾಳಿ ತಹಸೀಲ್ದಾರ್ ಸುರೇಶ್, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ನ್ಯಾಮತಿ ಪಿಐ ರವಿ, ಹೊನ್ನಾಳಿ ಬೆಸ್ಕಾಂ ಎಇಇ ಜಯಪ್ಪ, ಬಸವಾಪಟ್ಟಣ ಪಿಎಸ್‌ಐ ರೂಪಾ ತೆಂಬದ್, ಸಂತೆಬೆನ್ನೂರು ಪಿಎಸ್‌ಐ ವೀಣಾ, ಎಎಸೈ ಹರೀಶ್, ಕಂದಾಯ ಅಧಿಕಾರಿಗಳಾದ ಸಂತೋಷ್, ರಮೇಶ್, ಜಯಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts