ಕರಾಚಿ: ಕರೊನಾ ವೈರಸ್ ಸಾಂಕ್ರಾಮಿಕವೆಂದು ಘೋಷಣೆ ಮಾಡಲಾಗಿದೆ. ಹಾಗಿದ್ದರೂ ಸೋಂಕಿತ ವ್ಯಕ್ತಿಯೊಂದಿಗೆ ಸೆಲ್ಫೀ ತೆಗೆದುಕೊಂಡ ಸಹೋದ್ಯೋಗಿಗಳನ್ನು ಪಾಕಿಸ್ತಾನದ ಸರ್ಕಾರ ಅಮಾನತು ಮಾಡಿದೆ.
ಇರ್ಷಾದ್ ಅಲಿ ರಾಜ್‌ಪರ್ ಹೆಸರಿನ ವ್ಯಕ್ತಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಇರಾನ್ಗೆ ಪ್ರವಾಸ ಕೈಗೊಂಡು ಬಂದಿದ್ದ. ಆತ ಪಾಕಿಸ್ತಾನಕ್ಕೆ ಮರಳಿದ ನಂತರ ಆತನಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಆತನಲ್ಲಿ ಸೋಂಕಿದೆ ಎಂದು ತಿಳಿದ ನಂತರವೂ ಆತನ ಸಹೋದ್ಯೋಗಿಗಳು ಆತನೊಂದಿಗೆ ಸೆಲ್ಫೀ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಸೋಂಕಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರ ಮೂಲಕ ವಿಷಯ ತಿಳಿದುಕೊಂಡ ಉನ್ನತ ಅಧಿಕಾರಿಗಳು ಸೆಲ್ಫೀ ತೆಗೆದುಕೊಂಡ ಆರು ಸಹೋದ್ಯೋಗಿಗಳನ್ನು ಅಮಾನತು ಮಾಡಿದ್ದಾರೆ. ಖೈರ್ಪುರ್ ಜಿಲ್ಲೆಯ ಉಪ ವಕ್ತಾರರು ಆರು ಜನ ಜಿಲ್ಲಾಡಳಿತದ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಆದೇಶ ಹೊರಡಿಸಿದ್ದಾರೆ.
ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ 800ರ ಗಡಿ ದಾಟಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಖೈರ್ಪುರದ ಸಿಂಧ್ ನಗರವೊಂದರಲ್ಲೇ 350ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ನಗರದಾದ್ಯಂತ ಇಂದಿನಿಂದ 15 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. (ಏಜೆನ್ಸೀಸ್)