More

    ‘ಸಿಲಿಕಾನ್ ಚೇಂಬರ್’ ಮಂಜೂರಾತಿ ಪತ್ರ ಹಸ್ತಾಂತರ

    ಕುಶಾಲನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ಸಿಲಿಕಾನ್ ಚೇಂಬರ್’ ಮಂಜೂರಾತಿ ಪತ್ರವನ್ನು ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರಿಗೆ ಹಸ್ತಾಂತರಿಸಲಾಯಿತು.

    ಯೋಜನೆಯ ಚಿಕ್ಕತ್ತೂರು ಕಾರ್ಯ ಕ್ಷೇತ್ರ ವತಿಯಿಂದ ಮಂಗಳವಾರ ಹುಲುಗುಂದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಲೋಹಿತ್ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು. ದೇಹ ದಹಿಸಲೆಂದು ಹಾರಂಗಿ ಗ್ರಾಮದಲ್ಲಿ 1,51,630 ರೂ. ವೆಚ್ಚದಲ್ಲಿ ‘ಸಿಲಿಕಾನ್ ಚೇಂಬರ್’(ಹಿಂದು ರುದ್ರಭೂಮಿ) ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

    ಯೋಜನಾಧಿಕಾರಿ ರೋಹಿತ್ ಮಾತನಾಡಿ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದಿಂದ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳಾಗಿವೆ. ಸಮುದಾಯ ಭವನ, ಶಾಲೆಗಳ ದುರಸ್ತಿ ಕಾರ್ಯ, ಮೃತಪಟ್ಟವರಿಗೆ ಧನಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮ ಮಾಡಲಾಗಿದೆ ಎಂದರು.

    ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ-ಹುಲುಗುಂದ ಗ್ರಾಮದಲ್ಲಿ ಹಿಂದು ರುದ್ರಭೂಮಿ ನಿರ್ಮಾಣಕ್ಕೆಂದು ಆದೇಶ ಪತ್ರವನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

    ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಮಳೆಗಾಲದಲ್ಲಿ ರುದ್ರಭೂಮಿಯಲ್ಲಿ ದೇಹ ದಹನ ಕಾರ್ಯ ಕಷ್ಟಕರವಾಗಿತ್ತು. ಹಾಗಾಗಿ ಗ್ರಾಮ ಪಂಚಾಯಿತಿ ಅನುದಾನದಿಂದ ಎರಡು ಹಂತದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲದೆ ಸಿಲಿಕಾನ್ ಚೇಂಬರ್ ಅವಶ್ಯಕತೆ ಇರುವ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಮನವಿ ಸಲ್ಲಿಸಲಾಗಿತ್ತು. ಈಗ ಅನುಮೋದನೆಯಾಗಿದ್ದು, ಸಂತಸ ತಂದಿದೆ ಎಂದರು.

    ಸಿಲಿಕಾನ್ ಚೇಂಬರ್‌ನಿಂದ ಸೌದೆ ಉಳಿತಾಯದೊಂದಿಗೆ ದೈಹಿಕ ಶ್ರಮವೂ ಬಹುಪಾಲು ತಪ್ಪುತ್ತದೆ. ಸರಿಯಾಗಿ ಬಿಸಿಯಾಗುವ ಈ ಚೇಂಬರ್‌ನಿಂದಾಗಿ ಅಂತ್ಯಕ್ರಿಯೆಯು ಸುಗಮವಾಗುತ್ತದೆ ಎಂದು ಹೇಳಿದರು.

    ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಮಣಿಕಂಠ, ಗ್ರಾಮಾಭಿವೃದ್ಧಿ ಸಂಸ್ಥೆ ಮೇಲ್ವಿಚಾರಕ ಯತೀಶ್, ಸೇವಾ ಪ್ರತಿನಿಧಿ ಸಂಗೀತಾ ದಿನೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts