More

    ಅಪಾಯದಲ್ಲಿ ಸಾರಕೂಟೇಲು ಸೇತುವೆ : ನಿರ್ಮಾಣಗೊಂಡಿದೆ ಬೃಹತ್ ಹೊಂಡ : ಮಣ್ಣು ಸಡಿಲವಾಗಿ ಆತಂಕ

    ಶಶಿ ಕುತ್ಯಾಳ ಈಶ್ವರಮಂಗಲ

    ಪುತ್ತೂರು-ಕೌಡಿಚ್ಚಾರು-ಸುಳ್ಯಪದವು ಅಂತರ್‌ರಾಜ್ಯ ರಸ್ತೆಯ ಪರಿಗೇರಿ ಬಳ್ಳಿಕಾನ ಎಂಬಲ್ಲಿಂದ ಕಾವು-ಈಶ್ವರಮಂಗಲ-ಸುಳ್ಯಪದವು ಅಂತರ್‌ರಾಜ್ಯ ರಸ್ತೆಗೆ ಪುಳಿತ್ತಡಿ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ನೇರ ರಸ್ತೆಯಾದ ಬಳ್ಳಿಕಾನ -ಅಂಬಟೆಮೂಲೆ -ಪುಳಿತ್ತಡಿ ರಸ್ತೆಯಲ್ಲಿರುವ ಸಾರಕೂಟೇಲು ಸೇತುವೆಯಲ್ಲಿ ಬೃಹತ್ ಹೊಂಡ ನಿರ್ಮಾಣಗೊಂಡಿದ್ದು, ಬಿರುಕು ಬಿಟ್ಟಿರುವ ಸೇತುವೆ ಅಪಾಯಕಾರಿಯಾಗಿದೆ.

    ಸೇತುವೆಯ ಒಂದು ಬದಿಯಲ್ಲಿ ಕಾಂಕ್ರೀಟ್ ಕಳಚಿ ಹೋಗಿ ಆಳೆತ್ತರದ ಹೊಂಡ ನಿರ್ಮಾಣಗೊಂಡಿದ್ದು, ಸೇತುವೆಯ ಅದೇ ಬದಿಯ ತಡೆಗೋಡೆ ಸರಳುಗಳು ನಡುವಣ ಭಾಗದಲ್ಲಿ ಮುರಿದಿದೆ. ಹೊಂಡ ಬಿದ್ದಿರುವ ಭಾಗದ ಮಣ್ಣು ಸಡಿಲಗೊಂಡು ಕುಸಿದು ಸೇತುವೆಯ ಒಳಭಾಗದಲ್ಲಿ ಬಿರುಕು ಬಿಟ್ಟಿದೆ. ಭಾರಿ ವಾಹನ ಸಂಚಾರದ ವೇಳೆ ಹೊಂಡ ಬಿದ್ದ ಭಾಗ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.

    ಬೃಹತ್ ಮರವೊಂದು ಕೆಲ ದಿನಗಳ ಹಿಂದೆ ಸೇತುವೆಯ ಮೇಲೆಯೇ ಉರುಳಿ ಬಿದ್ದ ಪರಿಣಾಮ ಸೇತುವೆ ಬಿರುಕುಬಿಟ್ಟು ಹೊಂಡ ನಿರ್ಮಾಣವಾಗಿರಬಹುದು. ಭಾರಿ ಮಳೆಯಿಂದಾಗಿ ಹೊಂಡ ಬಿದ್ದ ಭಾಗದ ಮಣ್ಣು ಕುಸಿದು ಹೊಂಡ ಆಳಗೊಂಡಿರಬಹುದು ಎಂಬ ಅಭಿಪ್ರಾಯ ಸಾರ್ವಜನಿಕರದ್ದು.. ಮರ ಉರುಳಿ ಬಿದ್ದ ಪರಿಣಾಮ ಸೇತುವೆಯ ಸರಳಿನ ತಡೆಗೋಡೆಗೂ ಹಾನಿಯಾಗಿದೆ.

    ಬಿರುಕು ಕಾಣಿಸಿಕೊಂಡಿರುವ ಸಾರಕೂಟೇಲು ಸೇತುವೆಯ 50 ಮೀ. ಅಂತರದಲ್ಲೇ ಪಡುಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಗೋಡೆ ಇದೆ. ಸೇತುವೆಯ ಪಕ್ಕದಲ್ಲೇ ಇರುವ ಪಡುಮಲೆ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನಕ್ಕೆ ಸೇರಿದ ಜಾಗದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂ ಕಟ್ಟೆ, ನಾಗ, ರಕ್ತೇಶ್ವರಿ, ಗುಳಿಗ ದೈವದ ಕಟ್ಟೆಗಳಿದ್ದು, ಅಲ್ಲಿ ಸಾರ್ವಜನಿಕವಾಗಿ ಆರಾಧನೆ ನಡೆಯುತ್ತಿದೆ. ಪ್ರತಿ ದಿನ ಬಹಳಷ್ಟು ಮಕ್ಕಳು ಇದೇ ಸೇತುವೆಯಾಗಿ ಪಡುಮಲೆ ಶಾಲೆಗೆ ಹೋಗುತ್ತಿದ್ದಾರೆ. ಒಂದಿಷ್ಟು ಎಚ್ಚರ ತಪ್ಪಿದರೆ ಆಳವಾದ ಗುಂಡಿಯೊಳಗೆ ಬೀಳುವ ಅಪಾಯ ಇದೆ.

    ಗ್ರಾಪಂನಿಂದ ಸೂಚನೆಯ ಬ್ಯಾನರ್

    ಬಡಗನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಲತಾ ಎಂ, ಉಪಾಧ್ಯಕ್ಷೆ ಸುಶೀಲ ಪಕ್ಯೋಡು, ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ಕಲಾವತಿ ಪಟ್ಲಡ್ಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋನಪ್ಪ ಅವರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಪ್ರಾಕೃತಿಕ ವಿಕೋಪ ನೋಡೆಲ್ ಅಧಿಕಾರಿ ಡಾ.ಧರ್ಮಪಾಲ ಅವರೊಂದಿಗೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಬ್ಯಾನರ್ ಅಳವಡಿಸಿ ಸಂಚಾರ ನಿಷೇಧಿಸಿದ್ದಾರೆ. ಆದರೆ ಎಂದಿನಂತೆ ವಾಹನಗಳು ಸೇತುವೆಯ ಮೇಲೆ ಓಡಾಡುತ್ತಿವೆ.

    ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಬಡಗನ್ನೂರು ಮತ್ತು ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ನೋಡೆಲ್ ಅಧಿಕಾರಿ ಡಾ.ಧರ್ಮಪಾಲ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಪಟ್ಟ ಇಲಖೆಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಸೇತುವೆಯಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿರುವುದರಿಂದ ದುರಸ್ತಿ ಆಗಬೇಕು.

    – ರವಿರಾಜ್ ರೈ ಸಜಂಕಾಡಿ, ಸ್ಥಳೀಯ ವಾರ್ಡಿನ ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts