More

    ಸಂಗೀತ ಮತ್ತು ನೃತ್ಯ ದೇಶದ ಪರಂಪರೆಯ ಭಾಗವಾಗಿದೆ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್

    ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ, ವಿಜ್ಞಾನ, ಕಲೆ ಮತ್ತು ಸಂಗೀತ ಮಹತ್ವದ ಪಾತ್ರ ವಹಿಸುತ್ತಿದ್ದು, ಇವುಗಳಲ್ಲಿ ಪ್ರಾಚೀನ ಕಾಲದಿಂದಲೂ ಸಂಗೀತ ಮತ್ತು ನೃತ್ಯ ದೇಶದ ಪರಂಪರೆಯ ಭಾಗವಾಗಿ ಬೆಳೆದು ಬಂದಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ತಿಳಿಸಿದರು.

    ಸ್ವರ ಫೌಂಡೇಶನ್ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡ ‘ಸಂಗೀತೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ, ಸಾಧಕರಾದ ಭಾರತಿದೇವಿ ರಾಜಗುರು, ಪಂ. ವಿನಾಯಕ ತೊರವಿ ಹಾಗೂ ಪಂ. ವೆಂಕಟೇಶ ಕುಮಾರ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

    ಸಂಗೀತ ಮತ್ತು ನೃತ್ಯವು ಪರಸ್ಪರ ಪೂರಕವಾಗಿದ್ದು, ಸಂಗೀತ ಹಲವು ಪ್ರಕಾರಗಳಲ್ಲಿ ಶಾಸ್ತ್ರೀಯ ಸಂಗೀತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಆಧುನಿಕ ಜೀವನಶೈಲಿಯ ಜೊತೆಗೆ ಸಂಗೀತ ಮತ್ತು ಸಂಸ್ಕೃತಿಯನ್ನು ಕೊಂಡೊಯ್ಯಲಾಗುತ್ತಿದೆ. ಮನಸ್ಸಿಗೆ ಮುದ ನೀಡುವ ಈ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಇಂದಿಗೂ ಜೀವಂತವಾಗಿರಿಸುವಲ್ಲಿ ಅನೇಕರ ಪಾತ್ರವಿದೆ ಎಂದು ಸಂಗೀತಕ್ಕೆ ಕೊಡುಗೆ ನೀಡಿದ ಸಾಧಕರನ್ನು ಸ್ಮರಿಸಿದರು.

    ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ಮನುಷ್ಯನಿಗೆ ಅಮಲು ತರುವ ಶಕ್ತಿ ಸಂಗೀತಕ್ಕಿದೆ. ಕುರಾನ್‌ನಲ್ಲಿ ಅಮಲು ತರುವ ವಸ್ತುವನ್ನು ನಿಷೇಧಿಸಲಾಗಿದೆ. ಆದ್ದರಿಂದ ಸಂಗೀತವನ್ನೂ ನಿಷೇಧಿಸುತ್ತೇನೆ ಎಂದು ಔರಂಗಜೇಬ್ ಸುಗ್ರಿವಾಜ್ಞೆ ಹೊರಡಿಸಿದ್ದ. ಸಂಗೀತ ಮನುಷ್ಯನ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಜಗತ್ತಿನ ಯಾವುದೇ ಧರ್ಮಗ್ರಂಥ ತೆಗೆದುಕೊಂಡರು ಅವು ಕಾವ್ಯ ರೂಪದಲ್ಲಿವೆ. ಕಾವ್ಯಕ್ಕೆ ಮನುಷ್ಯನ ಮನಸ್ಸು ಮತ್ತು ಹೃದಯಕ್ಕೆ ಲಗ್ಗೆ ಹಾಕುವ ಶಕ್ತಿಯಿದೆ ಎಂದು ಹೇಳಿದರು.

    ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಮುದ್ದು ಮೋಹನ್ ಮಾತನಾಡಿ, ಕರ್ನಾಟಕದಲ್ಲಿ ಸವಾಯಿ ಗಂಧರ್ವರ ಪರಂಪರೆ ಹಾಗೂ ಪಂಚಾಕ್ಷರಿ ಗವಾಯಿ ಅವರ ಪರಂಪರೆ ಭವ್ಯವಾದದ್ದು. ಅನೇಕ ಮಹನೀಯರು ಇದೇ ಪರಂಪರೆಯಲ್ಲಿ ಬಂದಿದ್ದಾರೆ. ಸ್ವರದ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ. ಇಂತಹ ಅಗಾಧ ಶಕ್ತಿ ಹೊಂದಿರುವ ಸಂಗೀತದ ಭವ್ಯ ಪರಂಪರೆ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಆಶಯ ಹಾಗೂ ಜವಾಬ್ದಾರಿಯಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಪಂ.ಶೈಲೇಶ ಭಾಗವತ್ ಅವರಿಂದ ಶಹನಾಯಿ ಹಾಗೂ ಉಸ್ತಾದ್ ರಫೀಕ್ ಖಾನ್ ಅವರಿಂದ ಸಿತಾರ್ ವಾದನ, ಮಾಳವಿಕಾ ನಾಯರ್ ಅವರಿಂದ ಭರತನಾಟ್ಯ, ಮುದ್ದು ಮೋಹನ್, ಪಂ. ವೆಂಕಟೇಶ ಕುಮಾರ್ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಿತು. ವಿಶ್ವನಾಥ ನಾಕೋಡ, ರಾಜೇಂದ್ರ ನಾಕೋಡ, ಕೇಶವ ಜೋಶಿ, ವ್ಯಾಸಮೂರ್ತಿ ಕಟ್ಟಿ ಹಾಗೂ ರವೀಂದ್ರ ಕಾಟೋಟಿ ವಾದ್ಯ ಸಹಕಾರ ನೀಡಿದರು.

    ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಸಾಹಿತಿ ಚಂದ್ರಶೇಖರ ಕಂಬಾರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts