More

    ಪರಿಹಾರ ನೀಡುವಲ್ಲಿ ನಿಯಮ ಪಾಲಿಸಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

    ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆ ನಿಮಿತ್ತ ಭೂಸ್ವಾಧೀನದಿಂದ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡುವ ವೇಳೆ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಕೆಯಾದ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

    ಬಾಗಲಕೋಟೆಯ ನವನಗರದ ನಿವಾಸಿ ಶ್ರೀಶೆಲ ಬರಗುಂಡಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎನ್. ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

    ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಸರ್ಕಾರ ಭೂಸ್ವಾಧೀನ ಮಾಡಿಕೊಂಡಿತ್ತು. ಜಮೀನು ಕಳೆದುಕೊಂಡವರಿಗೆ 2013ರ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್ವಸತಿ ಮಸೂದೆಯಡಿ ಪರಿಹಾರವಾಗಿ ಉದ್ಯೋಗ ಸೇರಿ ವಿವಿಧ ರೀತಿಯಲ್ಲಿ ಸಹಾಯಹಸ್ತ ನೀಡಲು ಸರ್ಕಾರ ಮುಂದಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸರಿಯಾದ ನಿಯಮಗಳನ್ನು ಪಾಲಿಸುತ್ತಿಲ್ಲ ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

    ಅಲ್ಲದೆ ಸರ್ಕಾರ ಸಂತ್ರಸ್ತರಿಗೆ ಪರಿಹಾರ ಮೊತ್ತ ನೀಡಲು ನಿರ್ಧರಿಸಿದ್ದು, ಅರ್ಹತೆ ಹೊಂದಿಲ್ಲದ ವ್ಯಕ್ತಿಗಳಿಗೂ ಈ ಹಣ ಹಂಚಿಹೋಗುತ್ತಿದೆ. ಈ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದರು.

    ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ತಿಳಿದಿಲ್ಲ. ಹೀಗಾಗಿ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ಜತೆಗೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆ.6ಕ್ಕೆ ಮುಂದೂಡಿದೆ.

    ಲಾನುಭವಿಗಳಲ್ಲದವರಿಗೂ ಪರಿಹಾರ
    ಖಾಸಗಿ ವ್ಯಕ್ತಿಗಳು ಅಧಿಕಾರಿಗಳ ಸಹಾಯ ಪಡೆದು ಅಕ್ರಮವಾಗಿ ವೈಟ್ನರ್ ಬಳಸಿ ನಿಜವಾದ ಸಂತ್ರಸ್ತರ ಜಾಗದಲ್ಲಿ ತಮ್ಮ ಹೆಸರನ್ನು ನಮೂದಿಸಿ ಲಾಭ ಪಡೆಯುತ್ತಿದ್ದಾರೆ. ಸಂತ್ರಸ್ತ ಕುಟುಂಬದ ಸದಸ್ಯರು ಸ್ವತಃ ಅಧಿಕಾರಿಗಳ ಜತೆ ಶಾಮೀಲಾಗಿ ಈ ಕೃತ್ಯ ಎಸಗುತ್ತಿರುವ ಕಾರಣ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts