More

    ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಪಿಚ್​ನಲ್ಲಿನ ಮಣ್ಣು ತಿಂದ ರೋಹಿತ್​ ಶರ್ಮ! ಹಿಟ್​ಮ್ಯಾನ್ ನಡೆಗೆ ಎಲ್ಲೆಡೆ ಮೆಚ್ಚುಗೆ​

    ನವದೆಹಲಿ: ಹದಿಮೂರು ವರ್ಷಗಳಿಂದ ಕೋಟ್ಯಂತರ ಭಾರತೀಯರು ಈ ಒಂದು ದಿನಕ್ಕಾಗಿ ಕಾಯುತ್ತಿದ್ದರು. 2022ರಲ್ಲಿ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಸೋಲು. ಅದಾದ ಬಳಿಕ 2023ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಹೀನಾಯ ಸೋಲಿನಿಂದ ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರಾಗಿತ್ತು. ಟೀಮ್​ ಇಂಡಿಯಾದ ನಾಯಕತ್ವ ವಹಿಸಿದ್ದ ರೋಹಿತ್​ ಶರ್ಮರಿಗಂತೂ ಈ ಸೋಲುಗಳು ದಿಕ್ಕೇ ತೋಚದಂತೆ ಮಾಡಿದ್ದವು. ಅಕ್ಷರಶಃ ರೋಹಿತ್​ ಕಣ್ಣೀರು ಹಾಕಿದ್ದರು. ಟೀಮ್​ ಇಂಡಿಯಾ ಕಂಗಾಲಾಗಿತ್ತು. ಆದರೆ, ನಿನ್ನೆಯ ಗೆಲುವು ಎಲ್ಲ ನೋವುಗಳನ್ನು ಅಳಿಸಿ ಹಾಕಿ ಖುಷಿಯ ರಸಭೋಜವನ್ನು ಉಣಬಡಿಸಿತು. ಇಡೀ ದೇಶವೇ ಸಂತೋಷದ ಸಂಭ್ರಮದಲ್ಲಿ ಮುಳುಗಿತು.

    ಅಮೆರಿಕ ಮತ್ತು ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಕೋಟ್ಯಂತರ ಭಾರತೀಯರು ಟೀಮ್​ ಇಂಡಿಯಾ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಲಿಲ್ಲ. ಭಾರತ ತಂಡ ಟಿ20 ವಿಶ್ವಕಪ್-2024ಕ್ಕೆ ಮುತ್ತಿಕ್ಕುವ ಮೂಲಕ ಇತಿಹಾಸ ಬರೆದಿದೆ. ಕೊನೆಯ ಎಸೆತದವರೆಗೂ ರೋಚಕತೆ ಮೆರೆದ ಮೆಗಾ ಫೈನಲ್​ನಲ್ಲಿ 7 ರನ್​ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ನಯಾ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

    ಈ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾ ಅಭಿಮಾನಿಗಳು ಸಂತಸದಲ್ಲಿ ಮುಳುಗಿದರು ಮತ್ತು ಭಾರತದ ಗೆಲುವನ್ನು ಸಂಪೂರ್ಣವಾಗಿ ಸಂಭ್ರಮಿಸಿದರು. ಬೀದಿಗಿಳಿದು ರಾಷ್ಟ್ರಧ್ವಜ ಹಾರಿಸಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ತಂಡ ಚಾಂಪಿಯನ್ ಆಗುತ್ತಿದ್ದಂತೆ ಭಾರತದ ಆಟಗಾರರೂ ಕೂಡ ಮೈದಾನದಲ್ಲೇ ಸಂಭ್ರಮಿಸಿದರು. ಒಬ್ಬರನ್ನೊಬ್ಬರು ಅಪ್ಪಿಕೊಂಡು ಭಾವುಕರಾಗಿ ಕಣ್ಣೀರಾಕಿದರು. ಕಪ್ ಹಿಡಿದು ತಮ್ಮ ಸಾಧನೆಯನ್ನು ಪ್ರದರ್ಶಿಸಿದರು. ಇದರ ನಡುವೆ ನಾಯಕ ರೋಹಿತ್ ಶರ್ಮ ಮಾಡಿರುವ ಕೆಲಸವೊಂದು ವೈರಲ್ ಆಗಿದೆ. ಪಂದ್ಯದ ನಂತರ, ಹಿಟ್‌ಮ್ಯಾನ್ ಪಿಚ್‌ ಬಳಿ ಹೋಗಿ ಅಲ್ಲಿನ ಮಣ್ಣನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವ ಮೂಲಕ ಧನ್ಯತಾ ಭಾವವನ್ನು ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

    ವೈರಲ್​ ವಿಡಿಯೋ ನೋಡಿದ ನೆಟ್ಟಿಗರು ರೋಹಿತ್​ಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಎಲ್ಲರೂ ಸಂಭ್ರಮದಲ್ಲಿ ಮುಳುಗಿದ್ದರೆ, ಹಿಟ್‌ಮ್ಯಾನ್‌ನ ಪಿಚ್‌ಗೆ ಧನ್ಯವಾದ ಮತ್ತು ಗೌರವವನ್ನು ನೀಡಿದ್ದು ಹೈಲೈಟ್ ಆಗಿದೆ. ಕಪ್ ಕನಸನ್ನು ನನಸು ಮಾಡಿದ ಪಿಚ್​ಗೆ ತಲೆಬಾಗಿ ರೋಹಿತ್​ ನಮಿಸಿದ್ದಾರೆ. ಅಲ್ಲದೆ, ಅಂತಿಮ ಗೆಲುವಿನ ನಂತರ ರೋಹಿತ್ ತುಂಬಾ ಭಾವುಕರಾದರು. ನೆಲದ ಮೇಲೆ ಮಲಗಿ ಕಣ್ಣೀರು ಸಹ ಹಾಕಿದರು. ಸಹ ಆಟಗಾರರನ್ನು ಅಪ್ಪಿಕೊಂಡು ಸಂತಸ ಹಂಚಿಕೊಂಡರು. ಕೊನೆಯ ಓವರ್‌ನೊಂದಿಗೆ ಪಂದ್ಯಕ್ಕೆ ತಿರುವು ನೀಡಿದ ಹಾರ್ದಿಕ್‌ಗೆ ಕಿಸ್ ಕೂಡ ನೀಡಿದರು.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ವೆಸ್ಟ್​ಇಂಡೀಸ್​ನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ನಿಗದಿತ 20 ಓವರ್​ಗಳು ಮುಕ್ತಾಯಗೊಳ್ಳುವಾಗ 7 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ರನ್ ಮೆಷಿನ್​ ಕೊಹ್ಲಿಯ ಅಬ್ಬರದ ಅರ್ಧಶತಕ (76 ರನ್​) ಹಾಗೂ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​) ನೆರವಿನಿಂದ ಉತ್ತಮ ರನ್​ ಕಲೆಹಾಕಿತು.

    ಟೀಮ್​ ಇಂಡಿಯಾ ನೀಡಿದ 177 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸೂಕ್ತ ಪ್ರತಿರೋಧ ತೋರಿತಾದರೂ ಅಂತಿಮ ಹಂತದಲ್ಲಿ ಎಡವಿತು. 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 169 ರನ್​ಗಳನ್ನು ಕಲೆಹಾಕುವ ಮೂಲಕ 7 ರನ್​ಗಳ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಈ ಮೂಲಕ ಟ್ರೋಫಿ ಭಾರತದ ಪಾಲಾಯಿತು. (ಏಜೆನ್ಸೀಸ್​)

    ನಾವು ಗೆಲ್ಲಬಹುದಿತ್ತು ಆದರೆ…; ಫೈನಲ್​ ಸೋಲಿನ ಕುರಿತು ದಕ್ಷಿಣ ಆಫ್ರಿಕಾ ನಾಯಕ ಮಾರ್ಕ್ರಮ್​ ಹೇಳಿದ್ದಿಷ್ಟು

    T20 ಚಾಂಪಿಯನ್ ಆಗಿ ಭಾರತ.. ರೋಹಿತ್ ಸೇನೆ ಪಡೆದ ಬಹುಮಾನದ ಹಣವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts