More

    ಹೊಸ ಇತಿಹಾಸ ಬರೆದ ರೋಹಿತ್​: ಈ ದಾಖಲೆ ನಿರ್ಮಿಸಿದ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆ!

    ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾ ತನ್ನ ಅಬ್ಬರ ಮುಂದುವರಿಸಿದೆ. ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಗಿ ಕಣಕ್ಕೆ ಇಳಿದಿದೆ. ಅದಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ನೀಡಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಗುರುವಾರ (ಜೂನ್​ 27) ರಾತ್ರಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್​ ಶರ್ಮ ಪಡೆ 68 ರನ್​ಗಳಿಂದ ಗೆದ್ದು ಹೆಮ್ಮೆಯಿಂದ ಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಟ್ರೋಫಿಗಾಗಿ ಕಾದಾಡಲಿದೆ.

    ಇಂಗ್ಲೆಂಡ್ ವಿರುದ್ಧದ ಸಮಿಫೈನಲ್​-2 ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿತು. ಮೊದಲು ಬ್ಯಾಟಿಂಗ್​ನಲ್ಲಿ ನಂತರ ಬೌಲಿಂಗ್​ನಲ್ಲಿ ಮಿಂಚಿತು. ಗಯಾನಾದಲ್ಲಿ ನಡೆದ ಈ ಪಂದ್ಯಕ್ಕೆ ವರುಣ ಅಡ್ಡಿಯಾದ್ದರಿಂದ ಪಂದ್ಯ ನಡೆಯುತ್ತಾ? ರದ್ದಾಗುತ್ತಾ? ಎಂಬ ಟೆನ್ಷನ್ ಎಲ್ಲರಲ್ಲು ಇತ್ತು. ಆದರೆ ಮಳೆ ಕಡಿಮೆಯಾದ್ದರಿಂದ ಪಂದ್ಯ ತಡವಾಗಿ ಆರಂಭವಾಯಿತು. ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೂರನೇ ಓವರ್‌ನಲ್ಲಿ ಟೋಪಲ್ ಭಾರತಕ್ಕೆ ಆಘಾತ ನೀಡಿದರು. ಈ ಟೂರ್ನಿಯಲ್ಲಿ ದಯನೀಯವಾಗಿ ವಿಫಲವಾಗುತ್ತಿರುವ ಕೊಹ್ಲಿ (9) ಮತ್ತೊಮ್ಮೆ ಕಡಿಮೆ ರನ್​ಗಳಿಗೆ ಪೆವಿಲಿಯನ್​ಗೆ ಸೇರಿದರು. ಇದರ ಬೆನ್ನಲ್ಲೇ ರಿಷಬ್​ ಪಂತ್ (4) ಕೂಡ ಔಟಾದರು. ಇದರಿಂದಾಗಿ ಟೀಮ್​ ಇಂಡಿಯಾ 40/2 ಸಂಕಷ್ಟಕ್ಕೆ ಸಿಲುಕಿತು.

    ಸಂಕಷ್ಟದ ಸಮಯದಲ್ಲಿ ನಾಯಕನ ಜವಾಬ್ದಾರಿಯುತ ಆಟವಾಡಿದ ರೋಹಿತ್ ಶರ್ಮ, ಸೂರ್ಯಕುಮಾರ್ ಜತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇಬ್ಬರೂ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಪ್ರತಿದಾಳಿ ನಡೆಸಿದರು. ಇಬ್ಬರೂ ತಮ್ಮದೇ ಸ್ಟೈಲ್‌ನಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದರು. ಈ ಕ್ರಮದಲ್ಲಿ ರೋಹಿತ್ ಅರ್ಧಶತಕ ಪೂರೈಸಿ ತಂಡಕ್ಕೆ ಆಸರೆಯಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 73 ರನ್ ಜತೆಯಾಟವಾಡಿದರು. 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದ್ದ ರೋಹಿತ್ ಆದಿಲ್​ ರಶೀದ್​ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

    ಆ ಬಳಿಕ ಸೂರ್ಯಕುಮಾರ್ (47) ಕೂಡ ಪೆವಿಲಿಯನ್ ಸೇರಿದರು. ಇತರ ಬ್ಯಾಟ್ಸ್‌ಮನ್‌ಗಳಲ್ಲಿ ಹಾರ್ದಿಕ್ ಪಾಂಡ್ಯ (23), ಜಡೇಜಾ (17*) ಮತ್ತು ಅಕ್ಷರ್ ಪಟೇಲ್ (10) ರನ್ ಗಳಿಸಿದರು. ಅಂತಿಮವಾಗಿ ಟೀಮ್​ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇಂಗ್ಲೆಂಡ್​ ಪರ ಕ್ರಿಸ್ ಜೋರ್ಡಾನ್ 3 ವಿಕೆಟ್ ಪಡೆದರು.

    ಬಳಿಕ 172 ರನ್​ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ ತಂಡಕ್ಕೆ ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್ (3) ಹಾಗೂ ಕುಲದೀಪ್ ಯಾದವ್ (3) ಸಂಕಷ್ಟಕ್ಕೆ ಸಿಲುಕಿಸಿದರು. ಟೀಮ್​ ಇಂಡಿಯಾ ಸ್ಪಿನ್​ ದಾಳಿಗೆ ತತ್ತರಿಸಿದ ಇಂಗ್ಲೆಂಡ್​ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 68 ರನ್‌ಗಳ ಜಯ ಸಾಧಿಸಿತು. ಹ್ಯಾರಿ ಬ್ರೂಕ್ 25 ರನ್ ಗಳಿಸಿ ಇಂಗ್ಲೆಂಡ್​ ಪರ ಅಗ್ರ ಸ್ಕೋರರ್ ಎನಿಸಿಕೊಂಡರು.

    ಇದೇ ವೇಳೆ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ, ಅರ್ಧಶತಕ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದುವರೆಗೆ ನಾಕೌಟ್ ಪಂದ್ಯದಲ್ಲಿ ಭಾರತದ ಯಾವ ನಾಯಕನೂ ಅರ್ಧಶತಕ ಬಾರಿಸಿಲ್ಲ. 2007ರ ಟಿ20 ವಿಶ್ವಕಪ್‌ನಲ್ಲಿ ಅಂದಿನ ನಾಯಕ ಎಂಎಸ್ ಧೋನಿ ಗಳಿಸಿದ 36 ರನ್ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಇದೀಗ ಆ ದಾಖಲೆಯನ್ನು ಹಿಟ್ ಮ್ಯಾನ್ ಮುರಿದಿದ್ದಾರೆ.

    ಇನ್ನು ರೋಹಿತ್ ಟೀಮ್​ ಇಂಡಿಯಾ ನಾಯಕನಾಗಿ 5000 ರನ್ ಪೂರೈಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ರೋಹಿತ್ ಇದುವರೆಗೆ 50 ಸಿಕ್ಸರ್ ಬಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಟಿ20ಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕನಾಗಿ ಬಾಬರ್ ಅಜಮ್ ಅವರ ದಾಖಲೆಯನ್ನು ಹಿಟ್ ಮ್ಯಾನ್ ಮುರಿದಿದ್ದಾರೆ. ಇಲ್ಲಿಯವರೆಗೆ 61 ಪಂದ್ಯಗಳಿಗೆ ಭಾರತ ತಂಡದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ 49 ಪಂದ್ಯಗಳನ್ನು ಗೆದ್ದಿದ್ದಾರೆ. ಮತ್ತೊಂದೆಡೆ, ಬಾಬರ್ ಅಜಮ್ ಪಾಕಿಸ್ತಾನಕ್ಕೆ 85 ಪಂದ್ಯಗಳಲ್ಲಿ 48 ವಿಜಯಗಳನ್ನು ನೀಡಿದ್ದಾರೆ. (ಏಜೆನ್ಸೀಸ್​)

    ಹಾವೇರಿಯಲ್ಲಿ ಭೀಕರ ಅಪಘಾತ: 13 ಮಂದಿ ದುರ್ಮರಣ, ತಾಯಿಯ ಎದುರೇ ಪ್ರಾಣಬಿಟ್ಟ ಅವಳಿ ಮಕ್ಕಳು

    ಕೋಟಿ ಬೇಕೆನ್ನುವವರ ಮಧ್ಯೆ ಎಲ್ಲವೂ ಸಾಕೆಂದವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts