More

    ಗ್ರಾಮ ಪಂಚಾಯಿತಿ ಬೇಡಿಕೆಗೆ ಸ್ಪಂದನೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಲಹೆ, ಎಂ11 ಕೈಗಾರಿಕಾ ಘಟಕಕ್ಕೆ ಭೇಟಿ

    ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

    ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿ ಸ್ಥಾಪನೆಯಾಗಿರುವ ಎಂ11 ಕೈಗಾರಿಕಾ ಘಟಕದಿಂದ ಪರಿಸರಕ್ಕೆ ಹಾನಿಯಾಗುವ ಅಂಶಗಳನ್ನು 15 ದಿನಗಳೊಳಗೆ ಸರಿಪಡಿಸುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಘಟಕದ ಎಚ್‌ಆರ್ ವ್ಯವಸ್ಥಾಪಕ ನಿರ್ದೇಶಕಿ ದೀಪಾ ಅವರಿಗೆ ತಾಕೀತು ಮಾಡಿದರು.
    ಘಟಕದಿಂದ ಪರಿಸರದ ಮೇಲಾಗುತ್ತಿರುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಮಂಗಳವಾರ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

    15 ದಿನಗಳ ಬಳಿಕ ಮತ್ತೆ ಅಧಿಕಾರಿಗಳೊಂದಿಗೆ ಬಂದು ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು, ಸ್ಥಳೀಯ ಗ್ರಾಪಂನ ಬೇಡಿಕೆಗೆ ಸ್ಪಂದಿಸಬೇಕು. ಕಾಪು ಕ್ಷೇತ್ರದ ಜನರಿಗೆ ಪ್ರಥಮ ಆದ್ಯತೆಯಲ್ಲಿ ಪ್ರಮುಖ ಉದ್ಯೋಗ ನೀಡಬೇಕು. ಘಟಕ ನಿರ್ಮಾಣಕ್ಕೆ ನೆಲ, ಜಲ ತ್ಯಾಗ ಮಾಡಿದ ಮಂದಿಗೆ ಯಾವುದೇ ಸಬೂಬು ನೀಡದೆ ಉದ್ಯೋಗ ನೀಡಬೇಕು ಎಂದರು.

    ತಹಸೀಲ್ದಾರ್ ಪ್ರತಿಭಾ ಆರ್.ಮಾತನಾಡಿ, ಅಗತ್ಯವಿರುವ ಹುದ್ದೆ, ಅರ್ಹತೆಗಳ ಪಟ್ಟಿಯನ್ನು ಘಟಕದವರು 10 ದಿನಗಳೊಳಗೆ ಶಾಸಕರಿಗೆ ಒದಗಿಸಬೇಕು. ಕೇವಲ ಸ್ವೀಪರ್, ಡಿ ಗ್ರೂಪ್ ಹುದ್ದೆಗಳ ಹೊರತಾಗಿ ಎಲ್ಲ ಸ್ತರದ ಹುದ್ದೆಗಳಲ್ಲಿಯೂ ಕಾಪು ಕ್ಷೇತ್ರದ ಜನರಿಗೆ ಆದ್ಯತೆ ಕೊಡಬೇಕು ಎಂದರು. ಈ ಘಟಕದಿಂದ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇಲ್ಲಿನ ನೀರಿನ ಮಾದರಿಗಳನ್ನು ಮತ್ತೊಮ್ಮೆ ಪರೀಕ್ಷಿಸಿ 10 ದಿನಗಳೊಳಗೆ ವರದಿ ನೀಡಬೇಕು. ಬಳಿಕ ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ವೇತನ ಬಗ್ಗೆ ಅಸಮಾಧಾನ

    ಘಟಕದಲ್ಲಿ ಉದ್ಯೋಗ ಪಡೆದವರ ವೇತನದ ವರದಿ ಪಡೆದ ಕಾರ್ಮಿಕ ಅಧಿಕಾರಿ ಕುಮಾರ್, ಕಾರ್ಮಿಕ ಇಲಾಖೆ ಮಾನದಂಡಗಳನ್ನು ಅಸಮರ್ಪಕವಾಗಿ ಪಾಲಿಸಿ ವೇತನ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅದನ್ನು ಸರಿಪಡಿಸುವಂತೆ ಕಂಪನಿ ಅಧಿಕಾರಿಗಳಿಗೆ ಸೂಚಿಸಿದರು.
    ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಡಿ.ಪಿ.ನರೇಂದ್ರ, ಅಮೃತಾ, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಮಾಜಿ ಅಧ್ಯಕ್ಷೆ ಗಾಯತ್ರಿ ಡಿ.ಪ್ರಭು, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ ಉಪಸ್ಥಿತರಿದ್ದರು.

    ಘಟಕದಿಂದ ಎಣ್ಣೆ ಮಿಶ್ರಿತ ನೀರು

    110 ಎಕರೆ ಜಮೀನು ಪಡೆದು ಕೇವಲ 25 ಎಕರೆಯಲ್ಲಿ ಅನುಷ್ಠಾನವಾಗಿರುವ ಘಟಕದಿಂದ ಯಾವುದೇ ರೀತಿಯ ನೀರನ್ನು ಹೊರಬಿಡದಂತೆ ಸಾರ್ವಜನಿಕರು ಎಚ್ಚರಿಸಿದರು. ಘಟಕ ಬೇಡಿಕೆ ಸಲ್ಲಿಸಿರುವ ಶಾಂಭವಿ ನದಿ ನೀರನ್ನು ಯಾವುದೇ ಕಾರಣಕ್ಕೂ ಬಳಸಲು ಅವಕಾಶ ನೀಡುವುದಿಲ್ಲ. ಘಟಕದಿಂದ ಎಣ್ಣೆ ಮಿಶ್ರಿತ ನೀರು ಹೊರಗೆ ಮಳೆ ನೀರಿನೊಂದಿಗೆ ಹರಿದು ಸಮಸ್ಯೆಯಾಗುತ್ತಿದೆ. ಘಟಕದ ಸುತ್ತಮುತ್ತಲಿನ ಬಾವಿಗಳ ಅಂತರ್ಜಲವೂ ಮಲಿನಗೊಂಡಿರುವ ಬಗ್ಗೆ ಸಾರ್ವಜನಿಕರು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts