More

    ಈಜಿಪುರ ಮೇಲ್ಸೇತುವೆ ವಿಳಂಬದ ನೋಟಿಸ್‌ಗೆ ಗುತ್ತಿಗೆ ಕಂಪನಿಯಿಂದ ಉತ್ತರ

    ಬೆಂಗಳೂರು: ಈಜಿಪುರ ಮೇಲ್ಸೇತುವೆಯ ಕಾಮಗಾರಿ ಕೈಗೊಳ್ಳಲು ಅಗತ್ಯ ಜಮೀನು ಹಾಗೂ ನಿಕಟಪೂರ್ವ ಗುತ್ತಿಗೆದಾರರಿಗೆ ಸೇರಿದ ಸೆಗ್ಮೆಂಟ್‌ಗಳನ್ನು ಹಸ್ತಾಂತರಿಸದಿರುವುದೇ ಹಾಲಿ ಕೆಲಸಗಳು ನಿಧಾನವಾಗಿ ಸಾಗಲು ಕಾರಣ ಎಂದು ಯೋಜನೆಯ ಗುತ್ತಿಗೆ ವಹಿಸಿರುವ ಬಿಎಸ್‌ಸಿಪಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿ. ಬಿಬಿಎಂಪಿಗೆ ನೋಟಿಸ್‌ಗೆ ಲಿಖಿತ ಉತ್ತರ ಸಲ್ಲಿಸಿದೆ.

    ಅಲ್ಲದೆ ಕಾಮಗಾರಿ ಆರಂಭಿಸಲು ಒಟ್ಟು ವೆಚ್ಚದ ಶೇ.5ರಷ್ಟು ಮುಂಗಡ ಹಣ 8.80 ಕೋಟಿ ರೂ. ಪೈಕಿ 6.20 ಕೋಟಿ ರೂ. ಮಾತ್ರ ನೀಡಲಾಗಿದೆ. ಉಳಿದ 2 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಇನ್ನೂ ಪಾವತಿಸಿಲ್ಲ. ಮುಖ್ಯವಾಗಿ ಕಾಮಗಾರಿ ಆರಂಭಿಸಲು 35 ಸ್ವತ್ತುಗಳು ಹಾಗೂ 3 ಸ್ಥಳಗಳಲ್ಲಿ ಬೃಹತ್ ಜಾಗವನ್ನು ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸದ ಕಾರಣ ಎಲ್ಲೆಲ್ಲ ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಗಳನ್ನು ನಿವಾರಿಸಿಕೊಟ್ಟಲ್ಲಿ ಬಾಕಿ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಿದ್ಧ ಎಂದು ಕಂಪನಿಯು ಪಾಲಿಕೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

    ಮುಖ್ಯವಾಗಿ ಅರ್ಧಕ್ಕೆ ನಿಂತಿರುವ ಕಂಬಗಳ ಮೇಲೆ ಜೋಡಿಸಬೇಕಾದ 55 ಕಾಂಕ್ರೀಟ್ ಸೆಗ್ಮೆಂಟ್‌ಗಳನ್ನು ನಿಕಟಪೂರ್ವ ಗುತ್ತಿಗೆದಾರರು ನಿರ್ಮಿಸಿ ಖಾಸಗಿ ಜಾಗದಲ್ಲಿ ಇರಿಸಿದ್ದಾರೆ. ಇದನ್ನು ಅಲ್ಲಿಂದ ಕೆಲಸದ ಸ್ಥಳಕ್ಕೆ ರವಾನಿಸಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ ಸೆಗ್ಮೆಂಟ್‌ಗಳನ್ನು ಇರಿಸಿರುವ ಜಮೀನಿನ ಮಾಲೀಕರು ನೆಲದ ಬಾಡಿಗೆ ಮೊತ್ತ 2 ಕೋಟಿ ರೂ. ಪಾವತಿಸದೆ ಅವುಗಳನ್ನು ಸಾಗಿಸಲು ಅವಕಾಶ ನೀಡುತ್ತಿಲ್ಲ. ಇದು ಇತ್ಯರ್ಥವಾಗದ ಹೊರತು ಹೊಸ ಸ್ಥಳದಲ್ಲಿ ಗುರುತಿಸಿರುವ ಕಾಸ್ಟಿಂಗ್ ಸೈಟ್‌ನಲ್ಲಿ ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಮೇಲ್ಸೇತುವೆ ಕಾಮಗಾರಿ ನಿಧಾನಗೊಳ್ಳಲು ಕಾರಣ ನೀಡಿದೆ.

    ನೋಟಿಸ್ ಜಾರಿ ಏಕೆ?:

    ಕಳೆದ ಬುಧವಾರ (ಮೇ 22) ಸಿಎಂ ಹಾಗೂ ಡಿಸಿಎಂ ಸಿಟಿ ರೌಂಡ್ಸ್ ಕೈಗೊಂಡ ವೇಳೆ ಹಲವು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಈಜಿಪುರ ಮೇಲ್ಸೇತುವೆ ಯೋಜನೆ ಸ್ಥಳ ಪರಿಶೀಲನೆ ನಡೆಸಿದ್ದರು. ಆಗ ಜತೆಯಲ್ಲಿದ್ದ ಬಿಬಿಎಂಪಿ ಮುಖ್ಯ ಆಯುಕ್ತರ ಜತೆ ಚರ್ಚಿಸಿ ಕಾಮಗಾರಿ ವಿಳಂಬಕ್ಕೆ ಕಾರಣ ಯಾರೆಂದು ಪ್ರಶ್ನಿಸಿದ್ದರು. ಇದಕ್ಕೆ ಗುತ್ತಿಗೆ ವಹಿಸಿರುವ ಕಂಪನಿಯತ್ತ ಬೊಟ್ಟು ಮಾಡಲಾಗಿತ್ತು. ಸ್ಥಳಪರಿಶೀಲನೆ ವೇಳೆ, ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಲು ಬಿಬಿಎಂಪಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದರು. ಇದನ್ನಾಧರಿಸಿ ಪಾಲಿಕೆಯ ಯೋಜನೆ ವಿಭಾಗದ (ಕೇಂದ್ರ-9) ಕಾರ್ಯನಿರ್ವಾಹಕ ಇಂಜಿನಿಯರ್ 7 ಅಂಶಗಳಿಗೆ ಸಂಬಂಧಿಸಿ ಸಮಜಾಯಿಷಿ ನೀಡಲು ಗುತ್ತಿಗೆ ಕಂಪನಿಗೆ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಗುತ್ತಿಗೆ ಕಂಪನಿಯು ಮೇ 28ರಂದು ಬಿಬಿಎಂಪಿಗೆ 5 ಪುಟಗಳ ಸುದೀರ್ಘವಾದ ಲಿಖಿತ ಉತ್ತರವನ್ನು ಸಲ್ಲಿಸಿದೆ.

    ಕಾಮಗಾರಿ ಮುಂದುವರಿಸಲು ಐಐಎಸ್ಸಿ ಸಲಹೆ:

    ಅರ್ಧಕ್ಕೆ ನಿಂತಿರುವ ಈಜಿಪುರ ಮೇಲ್ಸೇತುವೆಯ ಕಾಮಗಾರಿ ಬಗ್ಗೆ ಗುಣಮಟ್ಟದ ಖಾತರಿಪಡಿಸಿಕೊಳ್ಳಲು ಬಿಬಿಎಂಪಿಯು ಐಐಎಸ್ಸಿ ಮೊರೆ ಹೋಗಿತ್ತು. ಕಳೆದ ವರ್ಷದ ಮೇ ತಿಂಗಳಲ್ಲಿ ಕಾಮಗಾರಿ ಸ್ಥಳಪರಿಶೀಲನೆ ನಡೆಸಿದ ಐಐಎಸ್ಸಿ ಇಂಜಿನಿಯರ್‌ಗಳು ಮೇಲ್ಸೇತುವೆಗೆ ಬಳಸಿರುವ ಪರಿಕರ ಗುಣಮಟ್ಟದಿಂದ ಕೂಡಿದೆ. ಕೆಲವೊಂದು ಕಾಂಕ್ರೀಟ್ ಭಾಗವು ಗಾಳಿ, ಬಿಸಿಲಿಗೆ ಹಾನಿಯಾಗಿದ್ದು, ಅವುಗಳನ್ನು ಸರಿಪಡಿಸಿಕೊಂಡು ಮುಂದುವರಿಯಬಹುದು ಎಂದು ಶಿಫಾರಸು ನೀಡಿತ್ತು. ಈ ವರದಿಯನ್ನಾಧರಿಸಿ ಪಾಲಿಕೆಯು ಬಿಎಸ್‌ಸಿಪಿಎಲ್ ಕಂಪನಿಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಹೊಸದಾಗಿ ಕಾರ್ಯಾದೇಶ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts