More

    ಕಾಪು ಹೊಸಮಾರಿಗುಡಿ ಸ್ವರ್ಣ ಸಮರ್ಪಣೆ ಅವಕಾಶ : ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ

    ಪಡುಬಿದ್ರಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಗೆ ಸಮರ್ಪಿಸಲ್ಪಡುವ ಪ್ರಥಮ ಹಂತದಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ, ಅತ್ಯಾಕರ್ಷಕ ಇಳಕಲ್ ಕೆಂಪು ಶಿಲೆಯಿಂದ ನಿರ್ಮಾಣಗೊಳ್ಳುತ್ತಿರುವ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಸ್ವರ್ಣ ಸಮರ್ಪಣೆಗೆ ಜೂನ್ 25ರಿಂದ ಅವಕಾಶ ಮಾಡಿಕೊಡಲಾಗುವುದು ಎಂದು ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಹೇಳಿದರು.

    ಸ್ವರ್ಣ ಸಮರ್ಪಣೆ ವಿಜ್ಞಾಪನೆ ಪತ್ರವನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದರು. ಕ್ಷೇತ್ರದ ತಂತ್ರಿ ವಿದ್ವಾನ್ ಕುಮಾರಗುರು ಮತ್ತು ಅರ್ಚಕ ಕೆ.ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ, ಶಿಲಾಸೇವೆ, ಶಿಲಾಕಂಬ ಸಮರ್ಪಿಸಿದ ದಾನಿಗಳು, ಭಕ್ತರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಜೂನ್ 25ರಂದು ಬೆಳಗ್ಗೆ 9.9ಕ್ಕೆ ಸ್ವರ್ಣ ಗೌರಿ ಪೂಜೆ ನೆರವೇರಿಸಿ, ಬಳಿಕ ಸ್ವರ್ಣ ಸಮರ್ಪಣಾ ಸಮಾರಂಭಕ್ಕೆ ಚಾಲನೆ ನೀಡಲಾಗುವುದು. ಪ್ರಥಮ ಹಂತದ ಸ್ವರ್ಣ ಸಮರ್ಪಣಾ ಸಂಕಲ್ಪದಲ್ಲಿ ಭಾಗವಹಿಸುವ ಭಕ್ತರಿಗೆ ಜೂ.21ರವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಹೆಸರು ನೋಂದಾಯಿಸುವವರು ದೂರವಾಣಿ-9481550999 ಸಂಪರ್ಕಿಸಬಹುದು ಎಂದರು.

    ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಅಯೋಧ್ಯೆ ರಾಮ ಮಂದಿರ ಮಾದರಿಯಲ್ಲಿ ಕಾಪು ಮಾರಿಯಮ್ಮ ದೇವಿಯ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ದಕ್ಷಿಣ ಭಾರತದಲ್ಲಿ ಅತ್ಯಪೂರ್ವವೆಂಬಂತೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ನಿರ್ಮಿಸಿ ಸಮರ್ಪಿಸಲು ಸಂಕಲ್ಪಿಸಲಾಗಿದ್ದು, ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರು ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆನ್ನುವುದು ಸಮಿತಿ ಆಶಯ ಎಂದರು.

    ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಸ್ವರ್ಣ ಸಮರ್ಪಣಾ ಸಮಿತಿ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಸನ್ನ ಆಚಾರ್ಯ, ಕಾರ್ಯದರ್ಶಿ ರವಿ ಭಟ್ ಮಂದಾರ, ಕಚೇರಿ ನಿರ್ವಹಣಾ ಸಮಿತಿ ಜಯರಾಮ ಆಚಾರ್ಯ, ಸಂದೀಪ್ ಕುಮಾರ್ ಉಪಸ್ಥಿತರಿದ್ದರು.

    20 ಕೆ.ಜಿ. ಸ್ವರ್ಣ, 160 ಕೆ.ಜಿ. ಬೆಳ್ಳಿ

    ಕಾಪು ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಯ ನೂತನ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ 20 ಕೆ.ಜಿ. ಚಿನ್ನ, 160 ಕೆ.ಜಿ. ಬೆಳ್ಳಿ ಉಪಯೋಗಿಸಲಾಗುತ್ತದೆ. ಗದ್ದುಗೆಯೇ ಪ್ರಧಾನವಾಗಿರುವ ಕಾಪು ಮಾರಿಗುಡಿಯಲ್ಲಿ ಸ್ವರ್ಣ ಗದ್ದುಗೆ ಸಮರ್ಪಣೆಗೆ ಹೊಸ ಚಿನ್ನದೊಂದಿಗೆ ಭಕ್ತರು ತಾವು ಉಪಯೋಗಿಸಿದ, ಬಳಸಿದ ಚಿನ್ನಗಳನ್ನೂ ಹರಕೆ ರೂಪದಲ್ಲಿ ಸಮರ್ಪಿಸಲು ಅವಕಾಶವಿದೆ.

    ಸರ್ಕಾರದ ಪ್ರಥಮ ದರ್ಜೆ ದೇವಳವಾಗಿರುವ ಇಲ್ಲಿ ಭಕ್ತರ ಶಿಲಾಸೇವೆ ಹಾಗೂ ದಾನಿಗಳ ನೆರವಿನಿಂದ ಸಂಕಲ್ಪಿಸಿರುವ ದೇವಳದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿವೆ. ಸರ್ಕಾರದ ಯಾವುದೇ ಅನುದಾನ ಈವರೆಗೆ ಬಿಡುಗಡೆಯಾಗಿಲ್ಲ. ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರಕ್ಕೂ ಮನವಿ ಮಾಡಿದ್ದು, ಅನುದಾನದ ನಿರೀಕ್ಷೆಯಲ್ಲಿದ್ದೇವೆ
    -ಕೆ.ವಾಸುದೇವ ಶೆಟ್ಟಿ, ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts