More

    ಸುಧಾರಣೆಯ ಪರ್ವ

    ಸುಧಾರಣೆಗಳನ್ನು ಸಾಕಾರಗೊಳಿಸಲು ದೃಢಸಂಕಲ್ಪ ಹಾಗೂ ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. ಕಳೆದೊಂದು ದಶಕದಿಂದ ದೇಶದ ಹಲವು ರಂಗಗಳಲ್ಲಿ ಮಹತ್ವದ ಬದಲಾವಣೆಗಳು ಸಾಕಾರಗೊಳ್ಳುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಹಾಗಂತ, ಅನುಷ್ಠಾನದ ಹಾದಿ ಸುಗಮವಾಗಿ ಇರಲಿಲ್ಲ. ರಾಜಕೀಯ ಪ್ರತಿರೋಧ, ಅಸಹಕಾರವನ್ನು ಎದುರಿಸುತ್ತಲೇ ಕೇಂದ್ರದ ಎನ್​ಡಿಎ ಸರ್ಕಾರ 10 ವರ್ಷಗಳಿಂದ ಸುಧಾರಣೆಗಳನ್ನು ಹಂತಹಂತವಾಗಿ ಜಾರಿಗೆ ತರುತ್ತಿದೆ ಎಂಬುದು ಗಮನಾರ್ಹ. ಏಳು ವರ್ಷಗಳ ಹಿಂದೆ ಇದೇ ದಿನ (ಜುಲೈ 1) ‘ಒಂದು ದೇಶ, ಒಂದು ತೆರಿಗೆ ಪದ್ಧತಿ’ ಪರಿಕಲ್ಪನೆಯಡಿ ಜಿಎಸ್​ಟಿ ಜಾರಿಗೆ ಬಂತು. ಇದು ಭಾರತೀಯ ತೆರಿಗೆ ವ್ಯವಸ್ಥೆಯಲ್ಲೇ ಮಹತ್ವದ ಸುಧಾರಣೆಯಾಗಿ, ಪಾರದರ್ಶಕತೆ ತಂದಿದೆ. ಆದರೆ, ಇದನ್ನು ಪ್ರತಿಪಕ್ಷಗಳು ‘ತೆರಿಗೆ ಭಯೋತ್ಪಾದನೆ, ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದೆಲ್ಲ ವಾಸ್ತವ ಮರೆಮಾಚಿ ಟೀಕೆ ಮಾಡಿದ್ದವು. ಆದರೆ, ಜಿಎಸ್​ಟಿಯು ತೆರಿಗೆ ಗೊಜಲುಗಳನ್ನು ಅಂತ್ಯಗೊಳಿಸಿದೆ. ‘ಒಂದು ದೇಶ ಒಂದು ಚುನಾವಣೆ’ಯ ಬಗ್ಗೆ ಚರ್ಚೆಗಳು ನಡೆದಿದ್ದು, ಇದಕ್ಕೂ ವಿರೋಧದ ಸ್ವರ ಹೆಚ್ಚಿದೆ.

    ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಕಳೆದಿವೆ. ಇನ್ನೆಷ್ಟು ವರ್ಷಗಳ ಕಾಲ ದೇಶ ಬ್ರಿಟಿಷರ ನೀತಿಗಳಿಗೇ ಅಂಟಿಕೊಂಡಿರಬೇಕು, ಹಳೆಯ ಜಾಡ್ಯವನ್ನು ನಿವಾರಿಸದೆ ವ್ಯವಸ್ಥೆ ಬಲಗೊಳ್ಳಲು ಸಾಧ್ಯವಿಲ್ಲ. ಬ್ರಿಟಿಷರ ಕಾಲದಲ್ಲಿ ರೂಪಿತವಾದ, ಈಗ ಅಪ್ರಸ್ತುತವಾಗಿದ್ದ ಹಲವು ಹಳೆಯ ಕಾನೂನುಗಳನ್ನು ಕೇಂದ್ರ ರದ್ದುಗೊಳಿಸಿದ್ದು ಗೊತ್ತಿರುವಂಥದ್ದೇ. ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ. ಬ್ರಿಟಿಷರ ಕಾಲದ ಅಪರಾಧ ಕಾನೂನುಗಳ ಯುಗ ಇಂದಿಗೆ ಅಂತ್ಯವಾಗಲಿದ್ದು, ಸ್ವತಂತ್ರ ಭಾರತದ ಸ್ವಂತ ಮೂರು ಅಪರಾಧ ಕಾನೂನುಗಳು ಅನುಷ್ಠಾನಕ್ಕೆ ಬರಲಿವೆ. ಇವುಗಳ ಜಾರಿಯಿಂದ ನ್ಯಾಯಾಂಗದಲ್ಲಿ, ಪೊಲೀಸ್ ವ್ಯವಸ್ಥೆಯಲ್ಲಿ ಅಪಾರ ಸುಧಾರಣೆಯನ್ನು ನಿರೀಕ್ಷಿಸಲಾಗಿದೆ. ಇವುಗಳ ಸುಗಮ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳು, ಅಧಿಕಾರಶಾಹಿ ವ್ಯವಸ್ಥೆ ಮತ್ತು ಸಾರ್ವಜನಿಕರು ಸಹಕರಿಸಬೇಕಿರುವುದು ಅವಶ್ಯ.

    ಭಾರತೀಯ ದಂಡ ಸಂಹಿತೆ, ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಕೊನೆಗೊಂಡು, ಇವುಗಳ ಸ್ಥಾನವನ್ನು ಭಾರತೀಯ ನ್ಯಾಯ ಸಂಹಿತೆ (2023), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ತುಂಬಲಿವೆ. ಹೊಸ ಕ್ರಿಮಿನಲ್ ಕಾನೂನು ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತಂದು ಸಂಪೂರ್ಣವಾಗಿ ನವೀಕರಿಸುತ್ತದೆ. ಮತ್ತು ಜನಸ್ನೇಹಿಯಾಗಿ ಮಾರ್ಪಡಲಿದೆ. ‘ಶಿಕ್ಷೆ ನೀಡುವುದಕ್ಕಿಂತಲೂ ನ್ಯಾಯ ನೀಡುವುದು ನಮ್ಮ ಉದ್ದೇಶವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಹೇಳಿದ್ದು ಸರಿಯಾಗಿಯೇ ಇದೆ. ಜನರು ಇನ್ನು ಮುಂದೆ ಅಪರಾಧದ ಬಗ್ಗೆ ಯಾವುದೇ ಠಾಣೆಯಲ್ಲಿ ದೂರು ನೀಡಲು, ಆನ್​ಲೈನ್ ಮೂಲಕ ಸಹ ದೂರು ನೋಂದಾಯಿಸಲು ಸಾಧ್ಯವಿದೆ. ಎಫ್​ಐಆರ್​ನ ಪ್ರತಿ ದೂರುದಾರರಿಗೆ ಉಚಿತವಾಗಿ ದೊರೆಯಲಿದೆ. ಮುಖ್ಯವಾಗಿ, ಹೊಸ ಕಾನೂನಿನಲ್ಲಿ ಭಯೋತ್ಪಾದನೆಗೆ ಸ್ಪಷ್ಟ ವ್ಯಾಖ್ಯಾನ ನೀಡಲಾಗಿರುವುದರಿಂದ, ದೇಶವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲು, ಆಂತರಿಕ ಭದ್ರತೆ ಗಟ್ಟಿಗೊಳಿಸಲು ಪೂರಕವಾಗಿ ಪರಿಣಮಿಸಲಿದೆ.

    ನೆಲದ ಮೇಲೆ ನೀವು ಕಣ್ಣೀರಿಟ್ಟಾಗ… ಟೀಮ್ ಇಂಡಿಯಾ ಕ್ಯಾಪ್ಟನ್​ಗೆ ಸಲಾಂ ಎಂದ ಪಾಕ್ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts