More

    ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ ; ಜೂನ್ 22, 23 ರಂದು ಭಾರಿ ಮಳೆ ಮುನ್ಸೂಚನೆ

    ವಿಜಯವಾಣಿ ಸುದ್ದಿಜಾಲ ಮಂಗಳೂರು
    ಕರಾವಳಿಯಲ್ಲಿ ಮುಂಗಾರು ಮಳೆ ತುಸು ವೇಗ ಪಡೆದುಕೊಂಡಿದೆ. ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಹಗಲು ಹೊತ್ತು ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ.

    ಹವಾಮಾನ ಇಲಾಖೆ ಪ್ರಕಾರ ಕರ್ನಾಟಕ ಕರಾವಳಿಯಲ್ಲಿ ಜೂ.22 ಮತ್ತು 23 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
    ಬಂಟ್ವಾಳ, ಕಡಬ, ಗುರುಪುರ ಸಹಿತ ಅನೇಕ ಕಡೆ ಸಾಮಾನ್ಯ ಮಳೆಯಾಗಿದೆ. ಬಳಿಕ ಮೋಡ, ಬಿಸಿಲಿನ ವಾತಾವರಣ ಕಂಡುಬಂದಿದೆ. ಈ ನಡುವೆ ಆಗಾಗ ಹನಿ ಹನಿ ಮಳೆ ಕಾಣಿಸಿದೆ.

    ಶುಕ್ರವಾರ ಬೆಳಗ್ಗಿನವರೆಗೆ ಉಳ್ಳಾಲದಲ್ಲಿ ಗರಿಷ್ಠ 20.8 ಮಿ.ಮೀ.ಮಳೆಯಾಗಿದ್ದು, ದಿನದ ಸರಾಸರಿ ಮಳೆ 15.89 ಮಿ.ಮೀ. ಬೆಳ್ತಂಗಡಿ 15.2 ಮಿ.ಮೀ., ಬಂಟ್ವಾಳ 14.8, ಮಂಗಳೂರು 18.8, ಪುತ್ತೂರು 18.7, ಸುಳ್ಯ 10.9, ಮೂಡುಬಿದಿರೆ 11.4, ಕಡಬ 20, ಮೂಲ್ಕಿ 16.4 ಮಿ.ಮೀ.ಮಳೆ ಸುರಿದಿದೆ.


    ಇನ್ನೊಂದೆಡೆ, ಶುಕ್ರವಾರ ಮಧ್ಯಾಹ್ನ ಉಡುಪಿ ನಗರದಲ್ಲಿ ದಿಢೀರ್ ಮಳೆ ಸುರಿಯಿತು. ಬಳಿಕ ಸಂಜೆಯವರೆಗೂ ಮೋಡ ಕವಿದ ವಾತಾವರಣ ಇದ್ದು, ಸಂಜೆ 6 ಗಂಟೆಗೆ ಮತ್ತೆ ಬಿರುಸಾದ ಮಳೆ ಸುರಿಯಿತು. ಸಂಜೆ 7ರ ವರೆಗೂ ಮಳೆಯಾಗುತ್ತಲೇ ಇತ್ತು. ಹಿಂದಿನ ದಿನ ಗುರುವಾರ ರಾತ್ರಿಯೂ ಮಳೆ ಸುರಿದಿತ್ತು.

    ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಶಂಕರ್ ಎಂ.ಮೇಣ್ಯ, ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ರತ್ನಾಕರ್ ಸುಕ್ರ ಅವರ ಮನೆಯ ಮೇಲೆ ಮರ ಉರುಳಿಬಿದ್ದು, ಭಾಗಶಃ ಹಾನಿಯಾಗಿದೆ. ಕಾರ್ಕಳ 10 ಮಿ.ಮೀ, ಕುಂದಾಪುರ 30.3, ಉಡುಪಿ 13.5, ಬೈಂದೂರು 22.7, ಬ್ರಹ್ಮಾವರ 22.4., ಕಾಪು 8.3, ಹಾಗೂ ಹೆಬ್ರಿ ತಾಲೂಕಿನಲ್ಲಿ 29 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ತಾಲೂಕುಗಳ ಮಳೆಯ ಸರಾಸರಿ 21.0 ಮಿ.ಮೀ.ಇತ್ತು.

    ಕಾಸರಗೋಡಿನಲ್ಲಿ ವರ್ಷಧಾರೆ ಸಾಧ್ಯತೆ
    ಕಾಸರಗೋಡು: 22ರಂದು ಕಾಸರಗೋಡು ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯ ನಿರೀಕ್ಷೆಯಿದೆ. ನಗರ ಮತ್ತು ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗುವ ಸಾಧ್ಯತೆಯಿದೆ. ನಿರಂತರ ಮಳೆಯಿಂದ ಭೂಕುಸಿತವನ್ನೂ ತಳ್ಳಿಹಾಕುವಂತಿಲ್ಲ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts