More

    ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿಂಡೀಸ್​ನಲ್ಲಿ ಟೀಮ್​ ಇಂಡಿಯಾ ಲಾಕ್​! ರೋಹಿತ್​ ಪಡೆಯಲ್ಲಿ ಮನೆ ಮಾಡಿದ ಆತಂಕ

    ಬಾರ್ಬಡೋಸ್​: ವೆಸ್ಟ್​ಇಂಡೀಸ್​ನಲ್ಲಿ ಜೂನ್​ 29ರಂದು ನಡೆದ ಟಿ20 ವಿಶ್ವಕಪ್​ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಟ್ರೋಫಿಗೆ ಮುತ್ತಿಡುವ ಮೂಲಕ ಟೀಮ್​ ಇಂಡಿಯಾ ಹೊಸ ಇತಿಹಾಸವನ್ನು ಬರೆದಿದೆ. 13 ವರ್ಷಗಳ ಬಳಿಕ ವಿಶ್ವಕಪ್​ ಭಾರತದ ಪಾಲಾಗಿದೆ. ಇದೇ ಖುಷಿಯಲ್ಲಿರುವ ಟೀಮ್​ ಇಂಡಿಯಾ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತವರಿಗೆ ಹಿಂದಿರುಗಲು ಸಾಧ್ಯವಾಗದೇ ಕೆರಿಬಿಯನ್​ ನಾಡಲ್ಲಿ ಸಿಲುಕಿಕೊಂಡಿದ್ದಾರೆ.

    ವಿಂಡೀಸ್​ನಲ್ಲಿ ಭಾರೀ ಮಳೆ ಮತ್ತು ಚಂಡಮಾರುತದ ಎಚ್ಚರಿಕೆಗಳು ಸೇರಿದಂತೆ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಟೀಮ್​ ಇಂಡಿಯಾದ ಸದಸ್ಯರು ತವರಿಗೆ ಬರುವುದು ವಿಳಂಬವಾಗಿದೆ. ಸದ್ಯ ಎಲ್ಲರು ಹೋಟೆಲ್‌ನಲ್ಲಿ ತಂಗಿದ್ದಾರೆ. ಹವಾಮಾನವು ಅನುಕೂಲಕರವಾಗಿದ್ದರೆ, ರೋಹಿತ್ ಶರ್ಮ ಮತ್ತು ತಂಡ ಮಂಗಳವಾರ ಅಥವಾ ಬುಧವಾರ ತವರಿಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ. ಚಂಡಮಾರುತದ ಎಚ್ಚರಿಕೆಯಿಂದಾಗಿ ಬಾರ್ಬಡೋಸ್ ವಿಮಾನ ನಿಲ್ದಾಣವನ್ನು ಪ್ರಸ್ತುತ ಮುಚ್ಚಲಾಗಿದೆ. ಇತ್ತ ಭಾರತದಲ್ಲಿ ಕಪ್‌ನೊಂದಿಗೆ ತವರಿಗೆ ಮರಳಲಿರುವ ಟೀಮ್​ ಇಂಡಿಯಾಗೆ ಅದ್ಧೂರಿ ಸ್ವಾಗತವನ್ನು ಸಿದ್ಧಪಡಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

    ಇದೇ ಸಂದರ್ಭದಲ್ಲಿ ಭಾರತದ ವಿಶ್ವಕಪ್​ ಕಿರೀಟವನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಜೂನ್​ 29ರಂದು ಭಾರತ ಫೈನಲ್‌ನಲ್ಲಿ ಗೆದ್ದಾಗಿನಿಂದ ಗ್ರಾಮೀಣ ಮತ್ತು ನಗರ ಪ್ರದೇಶವೆಂಬ ಭೇದವಿಲ್ಲದೆ ಇಡೀ ದೇಶದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇಡೀ ರಾಷ್ಟ್ರವು ರೋಹಿತ್​ ಪಡೆಯ ವಿಜಯವನ್ನು ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಆಚರಿಸಿದೆ.

    ವಿಶ್ವಕಪ್ ಗೆದ್ದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದರು. ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಕೂಡ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ

    ರೋಹಿತ್​, ಕೊಹ್ಲಿ, ಜಡೇಜಾ ನಿವೃತ್ತಿ
    ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದ ಸ್ವಲ್ಪ ಸಮಯದ ಬೆನ್ನಲ್ಲೇ ಕೆಲವು ನಿವೃತ್ತಿ ಘೋಷಣೆಗಳು ಹೊರಬಿದ್ದವು. ಫೈನಲ್‌ನಲ್ಲಿ ಪಂದ್ಯಶ್ರೇಷ್ಠರಾದ ವಿರಾಟ್ ಕೊಹ್ಲಿ ಮೊದಲು ನಿವೃತ್ತಿ ಘೋಷಿಸಿದರು. ಬಳಿಕ ರೋಹಿತ್​ ಕೂಡ ಅದೇ ನಿರ್ಧಾರವನ್ನು ತೆಗೆದುಕೊಂಡರು. ಇವರಿಬ್ಬರ ನಂತರ ರವೀಂದ್ರ ಜಡೇಜಾ ಕೂಡ ಟಿ20 ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಈ ಮೂವರೂ ಕೂಡ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ವೆಸ್ಟ್​ಇಂಡೀಸ್​ನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ನಿಗದಿತ 20 ಓವರ್​ಗಳು ಮುಕ್ತಾಯಗೊಳ್ಳುವಾಗ 7 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ರನ್ ಮೆಷಿನ್​ ಕೊಹ್ಲಿಯ ಅಬ್ಬರದ ಅರ್ಧಶತಕ (76 ರನ್​) ಹಾಗೂ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​) ನೆರವಿನಿಂದ ಉತ್ತಮ ರನ್​ ಕಲೆಹಾಕಿತು.

    ಟೀಮ್​ ಇಂಡಿಯಾ ನೀಡಿದ 177 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸೂಕ್ತ ಪ್ರತಿರೋಧ ತೋರಿತಾದರೂ ಅಂತಿಮ ಹಂತದಲ್ಲಿ ಎಡವಿತು. 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 169 ರನ್​ಗಳನ್ನು ಕಲೆಹಾಕುವ ಮೂಲಕ 7 ರನ್​ಗಳ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಈ ಮೂಲಕ ಟ್ರೋಫಿ ಭಾರತದ ಪಾಲಾಯಿತು. (ಏಜೆನ್ಸೀಸ್​)

    ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್​ ಪಠಾಣ್​

    ರೋಹಿತ್ ಶರ್ಮರ ವಿಭಿನ್ನ ಸಂಭ್ರಮಾಚರಣೆ ಹಿಂದಿನ ಅರ್ಥವೇನು?​ ಕಪ್ ಗೆದ್ದ ನಂತ್ರ ಯಾಕೆ ಹೀಗೆ ಮಾಡಿದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts