More

    ಕುಂಕುಮವಿಟ್ಟು ಸಿಂಪಲ್​​ ಆಗಿ ಕಾಣುವ ಈತ ಉ. ಕನ್ನಡದ ಕುಮಟಾ ಪ್ರತಿಭೆ! ಟಿ20 ವಿಶ್ವಕಪ್ ಗೆಲುವಿಗೆ ಈತನೂ ಕಾರಣ

    ನವದೆಹಲಿ: ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. 13 ವರ್ಷಗಳಿಂದ ಕಬ್ಬಿಣದ ಕಡಲೆಯಾಗಿದ್ದ ವಿಶ್ವಕಪ್ ಅನ್ನು ಟೀಮ್​ ಇಂಡಿಯಾ ಕೊನೆಗೂ ಗೆದ್ದುಕೊಂಡಿದೆ. ಜೂನ್​ 29ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಕಿರು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ 7 ರನ್​ಗಳ ಜಯ ಸಾಧಿಸುವ ಮೂಲಕ ಪ್ರತಿಷ್ಠಿತ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನ ಹಿಂದೆ ಆಟಗಾರರ ಶ್ರಮ ಎಷ್ಟು ಮುಖ್ಯವೋ, ಮುಖ್ಯ ಕೋಚ್​ ಸೇರಿದಂತೆ ಸಹಾಯಕ ಸಿಬ್ಬಂದಿಯ ಪಾತ್ರವೂ ಅಷ್ಟೇ ಮುಖ್ಯ. ತೆರೆಯ ಮುಂದೆ ನಮಗೆ ಆಟಗಾರರು ಮಾತ್ರ ಕಾಣುತ್ತಾರೆ. ಆದರೆ, ತೆರೆಯ ಹಿಂದೆ ಎಷ್ಟೋ ಪ್ರತಿಭೆಗಳು ತಮ್ಮ ಬೆವರನ್ನು ಹರಿಸಿರುತ್ತಾರೆ. ವಿಶ್ವಕಪ್​ ಗೆಲುವಿನಲ್ಲಿ ಅವರ ಕೊಡುಗೆಯೂ ಸಹ ಮರೆಯಲಾಗದು. ಅಂಥದ್ದೇ ತೆರೆ ಮರೆಯರ ಹೀರೋ ರಾಘವೇಂದ್ರ ದೇವಗಿ ಅವರು.

    ರಾಘವೇಂದ್ರ ದೇವಗಿ ಅವರ ಬಗ್ಗೆ ಶ್ರೀನಿವಾಸ ಗೌಡ ಎಂಬುವರು ಬರೆದ ಸ್ಫೂರ್ತಿದಾಯಕ ಬರಹವನ್ನು ಕಾಂಗ್ರೆಸ್ ಮುಖಂಡೆ​ ನಜ್ಮಾ ನಜೀರ್​ ಚಿಕ್ಕನೇರಳೆ ಅವರು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದರ ಸಾರಾಂಶ ಈ ಕೆಳಕಂಡಂತಿದೆ.

    ಹಸಿವು ಮತ್ತು ಸಾಧಿಸುವ ಹಂಬಲ ಇದ್ದರೆ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ರಾಘವೇಂದ್ರ ದೇವಗಿ ನೈಜ ಉದಾಹರಣೆಯಾಗಿದ್ದಾರೆ. ಭಾರತ ಟಿ20 ವಿಶ್ವಕಪ್ ಗೆದ್ದಾಗ ಮೈದಾನದಲ್ಲಿ ಕಂಡ ಈ ವ್ಯಕ್ತಿ ಯಾರೆಂದು ನಾನು ಹುಡುಕುತ್ತಿದ್ದೆ. ಹಣೆಯಲ್ಲಿ ಕುಂಕುಮ, ಸಾಧಾರಣ ವ್ಯಕ್ತಿಯಂತೆ ಕಾಣುತ್ತಿದ್ದ ಈ ವ್ಯಕ್ತಿ ನಮ್ಮ ಕನ್ನಡ ನಾಡಿನ ಅಸಾಮಾನ್ಯ ಪ್ರತಿಭೆ.

    21 ರೂಪಾಯಿಯೊಂದಿಗೆ ಮನೆ ಬಿಟ್ಟಿದ್ದ ಹುಡುಗ ಇಂದು ಭಾರತದ ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲಿ ಒಬ್ಬನಾಗಿ ಬಿಟ್ಟ! ಆ ಹುಡುಗ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಂಡವ. ಆದರೆ, ಕೈ ಮುರಿಯಿತು, ಕ್ರಿಕೆಟ್ ಕನಸು ಕಮರಿತು. ಅಲ್ಲಿ ಕಳೆದುಕೊಂಡದ್ದನ್ನು ಮತ್ತೆಲ್ಲೋ ಹುಡುಕಲು ಹೊರಟವನು ಇಂದು ಭಾರತದ ಟಿ20 ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲೊಬ್ಬನಾಗಿ ನಿಂತಿದ್ದಾನೆ.

    ಸುಮಾರು 24 ವರ್ಷಗಳ ಹಿಂದೆ ಕ್ರಿಕೆಟ್ ಆಡಲೆಂದು ಕೇವಲ 21 ರೂಪಾಯಿಗಳೊಂದಿಗೆ ಮನೆ ಬಿಟ್ಟಿದ್ದ ಹುಡುಗ. ಆ ಪ್ರಯಾಣ ಭಾರತದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವವರೆಗೆ ಬಂದು ತಲುಪಿದೆ ಎಂದರೆ ಇದು ಅದ್ಭುತವಲ್ಲದೆ ಮತ್ತಿನ್ನೇನು! 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಒಂದು ಮಾತು ಹೇಳಿದ್ದರು. ‘’ನನ್ನ ಇವತ್ತಿನ ಯಶಸ್ಸಿನಲ್ಲಿ ಆ ವ್ಯಕ್ತಿಯ ಪಾತ್ರ ತುಂಬಾ ದೊಡ್ಡದು. ಆದರೆ, ಅವರ ಪರಿಶ್ರಮ ಕೆಲವೊಮ್ಮೆ ಜಗತ್ತಿನ ಕಣ್ಣಿಗೆ ಕಾಣುವುದೇ ಇಲ್ಲ’’ ಎಂದು. ಹೌದು, ಆ ವ್ಯಕ್ತಿ ಇರುವುದೇ ಹಾಗೆ. ಆತ ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು. ಹೀಗಾಗಿ ಜಗತ್ತಿನ ಕಣ್ಣಿಗೆ ಕಾಣಿಸದೆ ಸದಾ ಆಟಗಾರರ ಬೆನ್ನ ಹಿಂದೆಯೇ ನಿಂತಿರುತ್ತಾನೆ. ಆತ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದೇವಗಿ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಘವೇಂದ್ರನನ್ನು ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು ಎಂದು ಕರೆಯಲು ಕಾರಣವಿದೆ. ಕಳೆದ 13 ವರ್ಷಗಳಲ್ಲಿ ಭಾರತ ತಂಡಕ್ಕಾಗಿ ರಕ್ತವನ್ನೇ ಬಸಿದವರು ಯಾರಾದರೂ ಇದ್ದರೆ ಅದು ರಾಘವೇಂದ್ರ ಅಲಿಯಾಸ್​ ರಘು. 2011ರಲ್ಲಿ ಭಾರತ ತಂಡಕ್ಕೆ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಸೇರಿಕೊಂಡ ರಘು, ಕಳೆದೊಂದು ದಶಕದಲ್ಲಿ ಭಾರತ ತಂಡದ ಅಭ್ಯಾಸದ ವೇಳೆ ಕನಿಷ್ಠ 10 ಲಕ್ಷ ಚೆಂಡುಗಳನ್ನು ಎಸೆದಿರಬಹುದು. ರಾಘವೇಂದ್ರನ ರಟ್ಟೆಯ ಬಲದಿಂದ ನುಗ್ಗಿ ಬರುವ ಆ ಎಸೆತಗಳನ್ನು ಎದುರಿಸಲು ಸಾಧಾರಣ ಧೈರ್ಯ ಸಾಲದು. ಗಂಟೆಗೆ 150 ಕಿ.ಮೀ ವೇಗದಲ್ಲಿ ಬಂದಪ್ಪಳಿಸುವ ಮಿಂಚಿನ ವೇಗದ ಚೆಂಡುಗಳವು. ಸೈಡ್​ ಆರ್ಮ್​ ಎಂಬ ಸಾಧನ ರಘು ಕೈಯಲ್ಲಿದ್ದಾಗ ಇವನಷ್ಟು ವೇಗದಲ್ಲಿ ಚೆಂಡೆಸೆಯುವ ಮತ್ತೊಬ್ಬ ಥ್ರೋಡೌನ್ ಸ್ಪೆಷಲಿಸ್ಟ್ ಜಗತ್ತಿನಲ್ಲೇ ಇಲ್ಲ.

    ತಲೆಯ ಎತ್ತರಕ್ಕೆ ಪುಟಿದೆದ್ದು ಬರುವ ಎಸೆತಗಳನ್ನು ರೋಹಿತ್ ಶರ್ಮಾ ಲೀಲಾಜಾಲವಾಗಿ ಸಿಕ್ಸರ್​ಗಟ್ಟುವುದನ್ನು ನೋಡಿ ಜನ ವಾವ್​ ಹೀ ಇಸ್ ಸೋ ಸ್ಪೆಷಲ್​ಎನ್ನುತ್ತಾರೆ. ಭಯಾನಕ ಬೌನ್ಸರ್​ಗಳಿಗೆ, ಶರವೇಗದ ಚೆಂಡುಗಳಿಗೆ ವಿರಾಟ್ ಕೊಹ್ಲಿ ಬಾರಿಸುವ ಒಂದೊಂದು ಹೊಡೆತಗಳಿಗೆ ಜನ ‘ಉಘೇ, ಉಘೇ’ ಎನ್ನುತ್ತಾರೆ. ಅನುಮಾನವೇ ಬೇಡ, ಅದು ವಿರಾಟ್, ರೋಹಿತ್​ರಂತಹ ಆಟಗಾರರ ಶಕ್ತಿ ಮತ್ತು ತಾಕತ್ತು. ಆ ಶಕ್ತಿ-ತಾಕತ್ತಿಗೆ ಪರಿಪೂರ್ಣತೆ ತಂದುಕೊಟ್ಟವನು ನಮ್ಮ ಕನ್ನಡಿಗ ರಾಘವೇಂದ್ರ.

    ನೆಟ್ಸ್​ನಲ್ಲಿ ಗಂಟೆಗೆ 150 ಕಿ.ಮೀ ವೇಗದಲ್ಲಿ ರಘು ಎಸೆಯುವ ಚೆಂಡುಗಳನ್ನು ಎದುರಿಸಿ… ಎದುರಿಸಿ ಪಳಗಿರುವ ನಮಗೆ, ಮ್ಯಾಚ್’ನಲ್ಲಿ ಭಯಾನಕ ವೇಗಿಗಳೇ ಮಧ್ಯಮ ವೇಗಿಗಳಂತೆ ಕಾಣುತ್ತಾರೆ ಎಂದು ಸ್ವತಃ ವಿರಾಟ್ ಕೊಹ್ಲಿ ಹಿಂದೊಮ್ಮೆ ಹೇಳಿದ್ದರು. ಜೀವನದಲ್ಲಿ ಎಲ್ಲವೂ ಮುಗಿಯಿತೆಂದು ಅಂದುಕೊಳ್ಳುವವರು ಒಮ್ಮೆ ರಾಘವೇಂದ್ರನ ಸ್ಫೂರ್ತಿದಾಯಕ ಕಥೆಯನ್ನು ಕೇಳಬೇಕು.

    ರಾಘವೇಂದ್ರನಿಗೆ ವಿಪರೀತ ಕ್ರಿಕೆಟ್ ಹುಚ್ಚು. ಆದರೆ, ತಂದೆಗೆ ಕ್ರಿಕೆಟ್ ಎಂದರೆ ಅಲರ್ಜಿ. ಇವನ ಕ್ರಿಕೆಟ್ ಹುಚ್ಚನ್ನು ನೋಡಿದ ತಂದೆ ಒಂದು ದಿನ ಮಗನಲ್ಲಿ ಕೇಳುತ್ತಾರೆ. ನಿನಗೆ ಓದು, ಜೀವನ ಮುಖ್ಯವೋ, ಕ್ರಿಕೆಟ್ ಮುಖ್ಯವೋ ಎಂದು. ಅಷ್ಟೇ, ಕೈಯಲ್ಲೊಂದು ಬ್ಯಾಗ್, ಪಾಕೆಟ್​ನಲ್ಲಿ 21 ರೂಪಾಯಿ ಹಾಕಿಕೊಂಡು ಮನೆ ಬಿಟ್ಟು ಹೊರಟೇ ಬಿಟ್ಟ ರಾಘವೇಂದ್ರ. ಕುಮಟಾದಿಂದ ಹೊರಟವನು ನೇರ ಬಂದು ಸೇರಿದ್ದು ಹುಬ್ಬಳ್ಳಿಗೆ. ಹಿಂದೆ ಮುಂದೆ ಯೋಚಿಸದೆ ಮನೆ ಬಿಟ್ಟು ಬಂದವ. ಕೈಯಲ್ಲಿದ್ದದ್ದು ಕೇವಲ 21 ರೂಪಾಯಿ. ಒಂದು ವಾರ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಮಲಗುತ್ತಾನೆ. ಅಲ್ಲಿಂದ ಪೊಲೀಸರು ಓಡಿಸಿದಾಗ ಪಕ್ಕದಲ್ಲೇ ಇದ್ದ ದೇವಸ್ಥಾನವೊಂದನ್ನು ಸೇರಿಕೊಳ್ಳುತ್ತಾನೆ. 10 ದಿನ ದೇವಸ್ಥಾನದಲ್ಲಿ ವಾಸ. ಅಲ್ಲಿಂದಲೂ ಹೊರ ನಡೆಯಬೇಕಾದ ಪರಿಸ್ಥಿತಿ ಎದುರಾದಾಗ ಬೇರೆ ದಾರಿ ಕಾಣದ ರಾಘವೇಂದ್ರ ಹತ್ತಿರದ ಸ್ಮಶಾನವೊಂದನ್ನು ಸೇರಿಕೊಳ್ಳುತ್ತಾನೆ.

    ಸ್ಮಶಾನದಲ್ಲಿದ್ದ ಪಾಳು ಬಿದ್ದ ಕಟ್ಟಡವೇ ಮನೆಯಾಗುತ್ತದೆ. ಕ್ರಿಕೆಟ್ ಮೈದಾನದಿಂದ ತಂದ ಹರಕಲು ಮ್ಯಾಟನ್ನೇ ಹೊದಿಕೆ ಮಾಡಿಕೊಳ್ಳುತ್ತಾನೆ. ಈ ರೀತಿ ನಾಲ್ಕೂವರೆ ವರ್ಷ ಸ್ಮಶಾನದಲ್ಲೇ ಮಲಗುತ್ತಾನೆ ರಾಘವೇಂದ್ರ. ಈ ಮಧ್ಯೆ ಬಲಗೈ ಮುರಿದು ಹೋಗಿದ್ದ ಕಾರಣ ಕ್ರಿಕೆಟ್ ಆಡುವ ಕನಸಿಗೆ ಕಲ್ಲು ಬಿದ್ದಿರುತ್ತದೆ. ಮನೆ ಬಿಟ್ಟು ಬಂದಾಗಿದೆ, ವಾಪಸ್ ಹೋಗುವ ಮಾತೇ ಇಲ್ಲ ಎಂದುಕೊಂಡವನೇ ಕ್ರಿಕೆಟ್ ಕೋಚಿಂಗ್ ಕಡೆ ಗಮನ ಹರಿಸುತ್ತಾನೆ. ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡೆಸೆಯುತ್ತಾ, ಅವರ ಅಭ್ಯಾಸಕ್ಕೆ ನೆರವಾಗುತ್ತಾ ಇದ್ದವನಿಗೆ ಗೆಳೆಯನೊಬ್ಬ ಬೆಂಗಳೂರು ದಾರಿ ತೋರಿಸುತ್ತಾನೆ. ಬೆಂಗಳೂರಿಗೆ ಬಂದ ರಾಘವೇಂದ್ರನಿಗೆ ಆಶ್ರಯ ಕೊಟ್ಟದ್ದು ಕರ್ನಾಟಕ ಇನ್ಸ್ಟಿಟ್ಯೂಟ್​ ಆಫ್​ ಕ್ರಿಕೆಟ್​. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಚೆಂಡೆಸೆಯುವುದು, ಬೌಲಿಂಗ್ ಮಷಿನ್​ನಲ್ಲಿ ಅಭ್ಯಾಸ ಮಾಡಿಸುವುದು ರಾಘವೇಂದ್ರನ ಕೆಲಸವಾಗಿತ್ತು.

    ಹೀಗೇ ಒಂದು ದಿನ ಕರ್ನಾಟಕ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬೀಳುತ್ತಾನೆ. ರಾಘವೇಂದ್ರನ ಕೆಲಸವನ್ನು ನೋಡಿದ ತಿಲಕ್ ನಾಯ್ಡು, ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಪರಿಚಯಿಸುತ್ತಾರೆ. ಅದು ರಾಘವೇಂದ್ರನ ಬದುಕಿಗೆ ಸಿಕ್ಕ ದೊಡ್ಡ ತಿರುವು. ಹುಡುಗನ ಪ್ರಾಮಾಣಿಕತೆಯನ್ನು ಗಮನಿಸಿದ ಶ್ರೀನಾಥ್, ಕರ್ನಾಟಕ ರಣಜಿ ತಂಡದ ಜೊತೆ ಇದ್ದು ಬಿಡು ಎಂದು ಅಲ್ಲಿಗೆ ಕರೆ ತಂದು ಸೇರಿಸುತ್ತಾರೆ. ಕ್ರಿಕೆಟ್ ಸೀಸನ್​ನಲ್ಲಿ ಕರ್ನಾಟಕ ತಂಡದ ಜೊತೆ ಕೆಲಸ. ಇಲ್ಲಿ ಕೆಲಸವಿಲ್ಲದಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ)ಯಲ್ಲಿ ಕೆಲಸ. ನೆನಪಿರಲಿ ಈ ರೀತಿ 3 ರಿಂದ 4 ವರ್ಷ ಒಂದು ಪೈಸೆ ದುಡ್ಡು ಪಡೆಯದೆ ಕೆಲಸ ಮಾಡಿದ್ದರು ರಾಘವೇಂದ್ರ. ಕೈಯಲ್ಲಿ ದುಡ್ಡಿಲ್ಲದ ಕಾರಣ ಎಷ್ಟೋ ದಿನ ಊಟವಿಲ್ಲದೆ ರಾತ್ರಿ ಕಳೆದದ್ದೂ ಇದೆ.

    ಎನ್​ಸಿಎನಲ್ಲಿದ್ದಾಗ ಬಿಸಿಸಿಐ ಲೆವೆಲ್​-1 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸುತ್ತಾನೆ. ಎನ್​ಸಿಎಗೆ ಬರುತ್ತಿದ್ದ ಭಾರತ ತಂಡದ ಕ್ರಿಕೆಟಿಗರಿಗೆ ಅಭ್ಯಾಸ ಮಾಡಿಸುತ್ತಾ ಅವರ ನೆಚ್ಚಿನ ಹುಡುಗನಾಗಿ ಬಿಡುತ್ತಾನೆ. ರಾಘವೇಂದ್ರನ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸುತ್ತಾರೆ. ಪರಿಣಾಮ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾರೆ. ಕಳೆದ 13 ವರ್ಷಗಳಿಂದ ಭಾರತ ತಂಡದ ಜೊತೆ ಇರುವ ರಾಘವೇಂದ್ರ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಘವೇಂದ್ರನ ನಿರಂತರ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಪ್ರತಿಫಲ ಟಿ20 ವಿಶ್ವಕಪ್ ಗೆಲುವು.

    ರೋಹಿತ್ ಶರ್ಮರ ವಿಭಿನ್ನ ಸಂಭ್ರಮಾಚರಣೆ ಹಿಂದಿನ ಅರ್ಥವೇನು?​ ಕಪ್ ಗೆದ್ದ ನಂತ್ರ ಯಾಕೆ ಹೀಗೆ ಮಾಡಿದ್ರು?

    ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿಂಡೀಸ್​ನಲ್ಲಿ ಟೀಮ್​ ಇಂಡಿಯಾ ಲಾಕ್​! ರೋಹಿತ್​ ಪಡೆಯಲ್ಲಿ ಮನೆ ಮಾಡಿದ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts