More

    ಬಿಬಿಎಂಪಿ ವಿಭಜನೆ ಬಗ್ಗೆ ಸಾರ್ವಜನಿಕರ ಸಲಹೆ ಅಗತ್ಯ

    ಬೆಂಗಳೂರು: ಬಿಬಿಎಂಪಿ ವಿಭಜನೆಗೆ ಸರ್ಕಾರ ತೆರೆಮರೆಯಲ್ಲಿ ಕಸರತ್ತು ನಡೆಸಿರುವಾಗಲೇ, ಕುಡಿಯುವ ನೀರು ಹಾಗೂ ತ್ಯಾಜ್ಯ ಬಳಕೆದಾರರ ಶುಲ್ಕವನ್ನು ರಾಜಧಾನಿಗರ ಮೇಲೆ ಹೇರಲು ಹೊರಟಿರುವ ಪ್ರಸ್ತಾಪದ ವಿರುದ್ಧ ಜನಾಕ್ರೋಶ ಎದ್ದಿದೆ.

    ಕಳೆದ ಮೂರೂಮುಕ್ಕಾಲು ವರ್ಷದಿಂದ ಪಾಲಿಕೆಯಲ್ಲಿ ಚುನಾಯಿತ ಸರ್ಕಾರ ಇಲ್ಲದೆ ವಿವಿಧ ಸೌಲಭ್ಯಗಳು ಜನರಿಗೆ ತಲುಪಿಲ್ಲ. ಮೂಲಸೌಕರ್ಯ ಯೋಜನೆಗಳೂ ಹಳ್ಳ ಹಿಡಿದಿವೆ. ಸರ್ಕಾರ ಹಾಗೂ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಕೂಡ ಅನುಷ್ಠಾನಕ್ಕೆ ಬಾರದೆ ಜನತೆ ಬವಣೆಗೆ ಒಳಗಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸ್ಥಳೀಯ ಸಂಸ್ಥೆಯನ್ನು ಬಲಯುತಗೊಳಿಸಲು ಚುನಾವಣೆ ನಡೆಸುವ ಬದಲು ಮುಂದೂಡುವುದಕ್ಕಾಗಿಯೇ ವಿಭಜನೆ ಗುಮ್ಮ ಹರಿಯಬಿಡಲಾಗಿದೆ ಎಂದು ಹಲವು ಮಾಜಿ ಕಾರ್ಪೊರೇಟರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಬಿಬಿಎಂಪಿ ವಿಭಜನೆಗೆ ಕೈ ಹಾಕಿದರೆ ಚುನಾವಣೆ ಮತ್ತೊಂದು ವರ್ಷ ಮುಂದಕ್ಕೆ ಹೋಗುವುದು ನಿಶ್ಚಿತ. ಇದರಿಂದ ನಗರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಸರ್ಕಾರದಿಂದಲೂ ಸಾಕಷ್ಟು ಅನುದಾನ ಲಭ್ಯವಾಗುವುದು ಕಷ್ಟ. ಇಂತಹ ಸ್ಥಿತಿಯಲ್ಲಿ ಅಧಿಕಾರಿಗಳು ಜನರಿಗೆ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವೇ ಇಲ್ಲ. ಕೇವಲ ತೆರಿಗೆ ಕಟ್ಟಲಷ್ಟೇ ನಾಗರಿಕರು ಸೀಮಿತರಾದಲ್ಲಿ, ಟ್ಯಾಕ್ಸ್ ಪಾವತಿಸುವವರಿಗೆ ಸೌಲಭ್ಯ ಒದಗಿಸುವವರು ಯಾರು ಎಂಬ ಪ್ರಶ್ನೆಯನ್ನು ನಾಗರಿಕ ಸಂಘಟಣೆಗಳು ಮುಂದಿಟ್ಟಿವೆ.

    ತೈಲ ದರ ಏರಿಕೆ ನೀಡಿದ ಸುಳಿವು:

    ಪಾಲಿಕೆಗೆ ಚುನಾವಣೆ ನಡೆಸುವುದಾಗಿ ಸಿಎಂ ಹಾಗೂ ಡಿಸಿಎಂ ಹೇಳಿಕೆ ನೀಡಿದ್ದಾರೆ. ಆದರೆ, ಇದಕ್ಕೆ ಪೂರಕ ವಾತಾವರಣ ಕಲ್ಪಿಸುವ ಚಟುವಟಿಕೆ ಎಲ್ಲೂ ಕಾಣುತ್ತಿಲ್ಲ. ಮಾತಿನಲ್ಲಷ್ಟೇ ಚುನಾವಣೆ ನಡೆಸುವುದಾಗಿ ಹೇಳುತ್ತಾ ಇನ್ನೊಂದೆಡೆ ವಿಭಜನೆ ಮಂತ್ರ ಜಪಿಸುತ್ತಿರುವ ಸರ್ಕಾರದ ನಡೆ ಅನುಮಾನಾಸ್ಪದ ಮೂಡಿಸಿದೆ. ಇಲ್ಲದಿದ್ದಲ್ಲಿ ಸರ್ಕಾರ ಇತ್ತೀಚಿಗೆ ಪೆಟ್ರೋಲ್-ಡೀಸೆಲ್ ದರವನ್ನು ಏಕೆ ಏರಿಸುತ್ತಿತ್ತು. ದರ ಏರಿಕೆಯಿಂದ ಎಲ್ಲ ದಿನಬಳಕೆಯ ವಸ್ತುಗಳು ಏರಿಕೆಯಾಗಲಿವೆ. ಇದರಿಂದ ಜನಸಾಮಾನ್ಯ ಬದುಕು ಮತ್ತಷ್ಟು ದುಸ್ತರವಾಗಲಿದೆ. ಇದರ ಸಿಟ್ಟನ್ನು ಜನರು ಪಾಲಿಕೆ ಚುನಾವಣೆಯಲ್ಲಿ ಸರ್ಕಾರದ ವಿರುದ್ಧ ಮತ ಹಾಕುವ ಮೂಲಕ ತೀರಿಸಿಕೊಳ್ಳುತ್ತಿದ್ದರು. ಇದನ್ನು ಅರಿತೇ ಸರ್ಕಾರ ವಿಭಜನೆಗೆ ಅತ್ಯುತ್ಸಾಹ ತೋರಿಸುತ್ತಿದೆ ಎಂದು ಪ್ರತಿಪಕ್ಷದ ಮುಖಂಡರು ದೂರಿದ್ದಾರೆ.

    3 ಅಥವಾ 5 ಪಾಲಿಕೆ ಜಿಜ್ಞಾಸೆ:

    ಬಿಬಿಎಂಪಿ ಪುನಾರಚನೆಗೆ ನೇಮಕವಾಗಿರುವ ಬಿ.ಎಸ್.ಪಾಟೀಲ್ ಸಮಿತಿ 5 ಪಾಲಿಕೆಗಳನ್ನಾಗಿ ವಿಂಗಡಿಸುವ ಸುಳಿವು ನೀಡಿದೆ. ಹಾಲಿ ಬಿಬಿಎಂಪಿ ಸುತ್ತಲಿರುವ ಪ್ರದೇಶಗಳನ್ನು ಸೇರಿಸಿಕೊಂಡಲ್ಲಿ ಐದು ಪಾಲಿಕೆಗಳನ್ನು ಮಾಡುವುದು ಸುಲಭ. ಇದರಿಂದ ಹೊಸ ಪ್ರದೇಶಗಳಿಂದ ಆದಾಯ ಹೆಚ್ಚಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಜತೆಗೆ ಅಲ್ಲಿನ ಜನರು ಪಾಲಿಕೆ ಗಡಿ ಭಾಗದಲ್ಲಿದ್ದರೂ, ಸೌಲಭ್ಯದಿಂದ ವಂಚಿತರಾಗಿದ್ದೇವೆ ಎಂಬ ಅನಾಥ ಪ್ರಜ್ಞೆ ಕಾಡುತ್ತಿರುತ್ತದೆ. ಈ ಪ್ರಸ್ತಾಪಕ್ಕೆ ಇನ್ನಷ್ಟೇ ಒಪ್ಪಿಗೆ ಸಿಗಬೇಕಿದೆ. ಒಂದು ವೇಳೆ ಹಾಲಿ ಬಿಬಿಎಂಪಿಯನ್ನು ಮುಂದುವರಿಸಿಕೊಂಡು ಹೋಗುವುದಿದಲ್ಲಿ 3 ಪಾಲಿಕೆ ರಚಿಸಿ ಸಮಾನ ಅಭಿವೃದ್ಧಿ ಮಾಡಬಹುದಾಗಿದೆ ಎಂಬ ಸಲಹೆಯನ್ನು ಕಾಂಗ್ರೆಸ್‌ನ ಕೆಲ ಶಾಸಕರು ಸಿಎಂ ಬಳಿ ಹಂಚಿಕೊಂಡಿದ್ದಾರೆ. ಆದರೂ, ಹೊಸದಾಗಿ 3 ಪಾಲಿಕೆ ಅಥವಾ 5 ಪಾಲಿಕೆ ರಚಿಸುವ ಜಿಜ್ಞಾಸೆಯಲ್ಲಿ ಸಮಿತಿ ಸಿಲುಕಿದಂತಿದೆ.

    ಸಾರ್ವಜನಿಕರ ಅಭಿಪ್ರಾಯ ಕಡೆಗಣನೆ?:

    ಬಿಬಿಎಂಪಿ ವಿಭಜನೆ ವಿಚಾರದಲ್ಲಿ ಸದ್ಯ ರಾಜಕೀಯ ಪಕ್ಷಗಳ ಅಭಿಪ್ರಾಯಕ್ಕೆ ಮಾನ್ಯತೆ ಸಿಗುತ್ತಿದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರರಾದ ಸಾರ್ವಜನಿಕರ ಸಲಹೆ-ಸೂಚನೆಗೆ ಸರ್ಕಾರ ಮನ್ನಣೆ ನೀಡದಿರುವುದಕ್ಕೆ ನಾಗರಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸರ್ಕಾರ 3 ಅಥವಾ 5 ಪಾಲಿಕೆ ಮಾಡುತ್ತದೋ ತಿಳಿಯದು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕಪಕ್ಷೀಯ ನಿರ್ಧಾರ ಬದಲು ಜನತಂತ್ರದ ಮೂಲಕ ತೀರ್ಮಾನ ಕೈಗೊಳ್ಳುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು. ವಿಭಜನೆ ಪೂರ್ಣಗೊಳಿಸಿ ಅದನ್ನು ಒಪ್ಪಿಕೊಳ್ಳಲಾಗದೆ ಕೋರ್ಟ್‌ಗೆ ಹೋಗುವ ಸ್ಥಿತಿ ಬಾರದಿರಲಿ ಎಂದು ಕೆಲ ಸಂಘಟನೆಗಳ ಪದಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

    ನೀರಿನ ದರ ಏರಿಕೆ ನಿಶ್ಚಿತ:

    ಬೆಂಗಳೂರು ಮಹಾನಗರ 100 ಕಿ.ಮೀ. ದೂರದಿಂದ ಕುಡಿಯುವ ನೀರು ಹರಿಸಿ ವಿತರಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚಿನ ಖರ್ಚನ್ನು ಜಲಮಂಡಲಿ ಭರಿಸಬೇಕಿದೆ. ವಿದ್ಯುತ್ ಬಿಲ್‌ಗಾಗಿಯೇ ವಾರ್ಷಿಕ ಕೋಟ್ಯಂತರ ರೂ. ಪಾವತಿಸಲಾಗುತ್ತಿದೆ. ಇದರಿಂದ ಜಲಮಂಡಳಿಗೆ ಆದಾಯ ಕಡಿಮೆಯಾಗುತ್ತಿದೆ. ಹೊಸ ಸಂರ್ಪಕಕ್ಕಾಗಿ ಶುಲ್ಕ ವಿಧಿಸಿದರೂ ಒಟ್ಟಾರೆ ಆದಾಯ ಖೋತಾ ಆಗುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ನೀರನ್ನು ಬೆಂಗಳೂರಿಗೆ ಹರಿಸಬೇಕಿರುವ ಕಾರಣ ದರ ಏರಿಕೆ ಅನಿವಾರ್ಯವಾಗಿದೆ. ಜತೆಗೆ 12 ವರ್ಷದಿಂದ ದರ ಹೆಚ್ಚಳ ಮಾಡದಿರುವುದರಿಂದ ಈ ಬಾರಿ ಏರಿಕೆ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡುವ ಸಂದಿಗ್ಧತೆ ಸೃಷ್ಟಿಯಾಗಿದೆ. ಡಿಸಿಎಂ ಕೂಡ ದರ ಹೆಚ್ಚಳದ ಸುಳಿವು ನೀಡಿರುವುದರಿಂದ ಸದ್ಯಕ್ಕೆ ಪಾಲಿಕೆ ಚುನಾವಣೆ ನಡೆಯದು ಎಂಬ ಪರೋಕ್ಷ ಸಂದೇಶವನ್ನು ಸಾರಿದಂತಿದೆ.

    ವಾಸದ ಮನೆಗಳಿಂದ ಮಾಸಿಕ 100 ರೂ. ಶುಲ್ಕ ವಸೂಲು ಮಾಡುವುದು ಸರಿಯಲ್ಲ. ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ನಿರ್ಧಾರ ತೆಗೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು ತಪ್ಪು. ಈ ವಿಚಾರವನ್ನು ಚುನಾಯಿತ ಕೌನ್ಸಿಲ್ ವಿವೇಚನೆಗೆ ಬಿಡಬೇಕಿತ್ತು. ಕಾರ್ಪೊರೇಟರ್‌ಗಳ ಅನುಪಸ್ಥಿತಿಯಲ್ಲಿ ಅಧಿಕಾರಿಗಳ ಬೇಕಾಬಿಟ್ಟಿ ತೀರ್ಮಾನಗಳಿಗೆ ಸರ್ಕಾರ ಕಡಿವಾಣ ಹಾಕಬೇಕು.
    – ಅಮರೇಶ್ ಎಸ್, ವ್ಯವಸ್ಥಾಪಕ ಟ್ರಸ್ಟಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರ

    ಬಿಬಿಎಂಪಿಯಿಂದ ಜನರಿಗೆ ಹೆಚ್ಚಿನ ಸೌಲಭ್ಯ ಸಿಗುತ್ತಿಲ್ಲ. ತೆರಿಗೆ ಸಹಿತ ಹೊಸದಾಗಿ ಶುಲ್ಕ ವಸೂಲು ಮಾಡಿದರೂ ಅದಕ್ಕೆ ತಕ್ಕಂತೆ ಸವಲತ್ತು ನೀಡಬೇಕು. ಆದರೆ, ಈ ವಾದವನ್ನು ಒಪ್ಪಿದ ಅಧಿಕಾರಿಗಳು ಜನರ ಮೇಲೆ ಹೊರೆ ಹಾಕುತ್ತಿದ್ದಾರಷ್ಟೇ. ಪಾಲಿಕೆಗೆ ಚುನಾವಣೆ ನಡೆಸಿದರೆ ಕಾರ್ಪೊರೇಟರ್‌ಗಳ ಮೂಲಕ ಕೆಲಸ ಮಾಡಿಸಿಕೊಳ್ಳಬಹುದು.
    – ಹರೀಶ್, ಕೊಡಿಗೇಹಳ್ಳಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts