More

    ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಹಿಸಲಾಗದು

    ಹುಮನಾಬಾದ್: ವಿಧಾನಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಶಾಲಾ ಕಟ್ಟಡ ಇತರ ಕಾಮಗಾರಿಗಳು ಚುರುಕಿನಿಂದ ನಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಯಾವ ಕಾರಣಕ್ಕೂ ಕುಂಟು ನೆಪ ಸಹಿಸುವುದಿಲ್ಲ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಎಚ್ಚರಿಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಶಿಥಿಲಾವಸ್ಥೆಯಲ್ಲಿರುವ ವಿವಿಧ ಹಳ್ಳಿಗಳಲ್ಲಿನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ೧೫ ಕೋಟಿ ರೂ. ಒದಗಿಸಿದೆ. ಕೆಲಸ ಯಾವ ಹಂತದಲ್ಲಿದೆ ಎಂದು ಶಿಕ್ಷಣಾಧಿಕಾರಿಗಳಿಗೆ ಕೇಳಿದರು.

    ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಸ್ಥಳವೆಲ್ಲ ಕ್ಲಿಯರ್ ಮಾಡಿಕೊಟ್ಟಿದ್ದು, ಕೆಆರ್‌ಐಡಿಎಲ್‌ನವರು ಕೆಲಸ ಆರಂಭಿಸಲಿದ್ದಾರೆ. ಇಲಾಖೆಯಿಂದ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಇಒ ವೆಂಕಟೇಶ ಗೂಡಾಳ ತಿಳಿಸಿದರು. ಈಗಾಗಲೆ ಸಾಕಷ್ಟು ವಿಳಂಬವಾಗಿದೆ. ಇದ್ದ ಅನುದಾನದಲ್ಲಿ ಇನ್ನೂ ಕೆಲಸ ಆರಂಭವಾಗಿಲ್ಲ. ಮತ್ತೆ ಹೊಸ ಬಜೆಟ್ ಬರಲಿದೆ ಎಂದು ಶಾಸಕ ಡಾ.ಪಾಟೀಲ್, ಬಿಇಒ ಹಾಗೂ ಕೆಆರ್‌ಐಡಿಎಲ್ ಅಧಿಕಾರಿಗಳು ಸೇರಿ ಶೀಘ್ರಗತಿಯಲ್ಲಿ ಕೆಲಸ ಕೈಗೆತ್ತಿಕೊಂಡು ಮುಗಿಸಬೇಕು. ಶಾಲಾ ಮಕ್ಕಳ ಕಾಲಲ್ಲಿ ಶೂ ಕಾಣುತ್ತಿಲ್ಲ. ಎಲ್ಲೆಲ್ಲಿ ಶಾಲೆಗಳ ರಿಪೇರಿ, ಕಟ್ಟಡದ ಅಗತ್ಯವಿರುವ ಬಗ್ಗೆ ಮಾಹಿತಿ ಒದಗಿಸಲು ಸೂಚಿಸಿದರು.

    ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಗುಟಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಶಾಲಾ ಮಕ್ಕಳಿಗೆ ಒದಗಿಸುವ ಶೂ ಕಪಳೆಯಾಗಿದ್ದರಿಂದ ವಿತರಣೆ ಆಗದಂತೆ ಹಾಗೂ ಶಾಲೆಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆಗೆ ಶಿಕ್ಷಣಾಧಿಕಾರಿ ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಸೂಚಿಸಿದರು.

    ಆರೋಗ್ಯ ಇಲಾಖೆ ಪ್ರಗತಿ ಕುರಿತು ಮಾಹಿತಿ ಪಡೆದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗದಂತೆ ವೈದ್ಯರು ಕರ್ತವ್ಯ ಸಮಯದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಹೆದ್ದಾರಿಯಲ್ಲಿರುವ ಸ್ಥಳೀಯ ಆಸ್ಪತ್ರೆಗೆ ಚಿಕ್ಕದಾಗಿದ್ದು, ವಿಸ್ತರಿಸಲು ಐದು ಎಕರೆ ಜಾಗ ಬೇಕಿದೆ. ಸ್ಥಳ ಗುರುತಿಸುವಂತೆ ಕಳೆದ ಸಭೆಯಲ್ಲಿ ಸೂಚಿಸಿದ್ದೆ. ಶೀಘ್ರದಲ್ಲಿ ಹುಡಕಿಕೊಂಡಿ ಎಂದು ತಹಸೀಲ್ದಾರರಿಗೆ ತಾಕೀತು ಮಾಡಿದರು.

    ಸಿಟಿ ಸ್ಕ್ಯಾನಿಂಗ್, ಹೆಚ್ಚುವರಿ ಒಂದು ಡಯಾಲಿಸಿಸ್, ಟ್ರಾಮಾ ಕೇರ್ ಸೆಂಟರ್ ಅಗತ್ಯವಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ತಾಲೂಕು ವೈದ್ಯಾಧಿಕಾರಿ ಶಿವಕುಮಾರ ಸಿದ್ದೇಶ್ವರ ಅವರಿಗೆ ಸೂಚಿಸಿದರು. ವೈದ್ಯರು ಮತ್ತು ನರ್ಸ್ಗಳ ಕೊರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಳೆಗಾಲ ಇರುವುದರಿಂದ ಸಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದರು.

    ಜಲಜೀವನ ಮಿಷನ್ ಯೋಜನೆಯಡಿ ಒಂದು ಮತ್ತು ೨ನೇ ಹಂತದ ಕಾಮಗಾರಿ ಮುಗಿದಿದೆ. ೩ ಮತ್ತು ೪ನೇ ಹಂತದ ಕಾಮಗಾರಿಗಳಲ್ಲಿ ಕೆಲವು ಮುಗಿಯುವ ಹಂತದಲ್ಲಿವೆ ಎಂದು ಇಲಾಖೆ ಎಇಇ ದತ್ತಾತ್ರಿ ಮೇಧಾ ತಿಳಿಸುತ್ತಿದ್ದಂತೆ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಎಲ್ಲೂ ಗುಣಮಟ್ಟದಲ್ಲಿ ಅಧಿಕಾರಿಗಳು ರಾಜಿಯಾಗದೆ ಹಳ್ಳಿ ಜನರಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಕಠಳ್ಳಿ ಗ್ರಾಮದಲ್ಲಿ ದುರಸ್ತಿ ಮಾಡಿದ ನೀರಿನ ಟ್ಯಾಂಕ್ ಮೇಲೆ ಬರೆದ ಬೋರ್ಡ್ ಅಳಿಸಲು ನಿಮ್ಮಿಂದ ಆಗುತ್ತಿಲ್ಲವೆ ಎಂದು ತರಾಟೆ ತೆಗೆದುಕೊಂಡರು.

    ಟ್ಯಾಂಕ್ ಹೊಸದಾ ಅಥವಾ ದುರಸ್ತಿಯಾ ಎಂದಾಗ, ಅಧಿಕಾರಿ ದುರಸ್ತಿಯೇ ಎಂದು ಇಬ್ಬರು ಎಂಎಲ್‌ಸಿಗಳಿಗೆ ಹೇಳಿದರು. ನಿರ್ಮಾಣ ಎಂದು ಹೇಗೆ ಬರೆಯಲಾಗಿದೆ? ಅಧಿಕಾರಿಗಳ ತಪ್ಪಿನಿಂದ ಊರಲ್ಲಿ ಗೊಂದಲ ಉಂಟಾಗಿದೆ. ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

    ತಾಪಂ ಇಒ ದೀಪಿಕಾ ರಾಯ್ಕರ್, ತಹಸೀಲ್ದಾರ್ ಅಂಜುಂ ತಬಸ್ಸುಮ್ ಸೇರಿ ಕ್ಷೇತ್ರ ವ್ಯಾಪ್ತಿಯ ಹುಮನಾಬಾದ್, ಬಸವಕಲ್ಯಾಣ ಮತ್ತು ಚಿಟಗುಪ್ಪ ತಾಲೂಕು ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು.

    ಹುಮನಾಬಾದ್ ಪಟ್ಟಣದಲ್ಲಿ ಕುಡಿಯುವ ನೀರು, ಸ್ವಚ್ಛತೆ, ವಿದ್ಯುತ್ ದೀಪಗಳ ಸಮಸ್ಯೆಯಾಗದಂತೆ ತಕ್ಷಣ ಕ್ರಮ ವಹಿಸಬೇಕು. ಪೌರ ಕಾರ್ಮಿಕರನ್ನು ಕಚೇರಿ ಕೆಲಸಕ್ಕೆ ಬಳಸಿಕೊಂಡರೆ ಅವರ ಕೆಲಸ ಯಾರು ಮಾಡಬೇಕು? ಅಧಿಕಾರಿಗಳು ಎಚ್ಚತ್ತುಕೊಂಡು ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು.
    | ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ

    ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷರು ಭೇಟಿ ನೀಡಿದಾಗ ಹಲವಾರು ಸಮಸ್ಯೆಗಳು ಗಮನಕ್ಕೆ ಬಂದಿವೆ. ಇದನ್ನು ಸರಿಪಡಿಸಿ ಬಡ ಜನರಿಗೆ ಉತ್ತಮ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಗೆ ಬೇಕಿರುವ ಸೌಲಭ್ಯಗಳ ಕುರಿತು ಶಾಸಕರು ಮತ್ತು ನಮಗೆ ಮಾಹಿತಿ ನೀಡಿದರೆ ಸರ್ಕಾರದಿಂದ ಕಲ್ಪಿಸಿಕೊಡಲು ಪ್ರಯತ್ನಿಸುತ್ತೇವೆ.
    | ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ವಿಧಾನ ಪರಿಷತ್ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts