More

    ಗ್ರಾಪಂಗಳಲ್ಲೇ ಜನನ, ಮರಣ ನೋಂದಣಿ ಪ್ರಕ್ರಿಯೆ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಜು. 1ರಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಜನನ, ಮರಣ ಉಪನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಜನನ, ಮರಣ ಘಟನೆಗಳು ಘಟಿಸಿದ 30 ದಿನಗಳವರೆಗೆ ನೋಂದಾಯಿಸಲು ಗ್ರಾಮೀಣ ಮಟ್ಟದಲ್ಲಿ ಗ್ರಾಪಂ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ ಎಂದು ಜಿಪಂ ಸಿಇಒ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, ಘಟನೆ ಸಂಭವಿಸಿದ 21 ದಿನಗಳಲ್ಲಿ ಜನನ, ಮರಣ ನೋಂದಣಿ ಮಾಡಿ ಉಚಿತವಾಗಿ ಪ್ರಮಾಣಪತ್ರ ವಿತರಿಸಬೇಕು. 30 ದಿನಗಳಲ್ಲಿ ವರದಿಯಾಗುವ ಘಟನೆಗಳನ್ನು 2 ರೂ. ತಡೆ ಶುಲ್ಕ ಪಡೆದು ನೋಂದಾಯಿಸಬೇಕು. ಘಟನೆ ಸಂಭವಿಸಿದ 30 ದಿನಗಳ ನಂತರ ವರದಿಯಾಗುವ ಘಟನೆಗಳ ನೋಂದಣಿ ಮಾಡತಕ್ಕದ್ದಲ್ಲ. ಇಂತಹ ಸಂದರ್ಭದಲ್ಲಿ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿ ಸಂಪರ್ಕಿಸುವ ಕುರಿತು ಜನರಿಗೆ, ಮಾಹಿತಿ ನೀಡಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿದೆ.
    30 ದಿನಗಳ ತರುವಾಯ ಒಂದು ವರ್ಷದ ಒಳಗೆ ವರದಿಯಾಗುವ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ತಹಸೀಲ್ದಾರರ ಲಿಖಿತ ಅನುಮತಿಯೊಂದಿಗೆ 5 ರೂ. ತಡೆ ಶುಲ್ಕ ಪಡೆದು, ಒಂದು ವರ್ಷದ ನಂತರ ವರದಿಯಾಗುವ ಜನನ, ಮರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೇ ವರ್ಗದ ದಂಡಾಧಿಕಾರಿ ಆದೇಶದೊಂದಿಗೆ ತಡೆ ಶುಲ್ಕ 10 ರೂ. ಪಡೆದು ನೋಂದಾಯಿಸಬೇಕು ಎಂದು ಸೂಚಿಸಲಾಗಿದೆ.
    ಗ್ರಾಪಂ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಜನನ, ಮರಣ ನೋಂದಣಿ ಸೂಚನಾ ಪಲಕ ಅಳವಡಿಸಲು ಸೂಚಿಸಲಾಗಿದೆ. ಗ್ರಾಮೀಣ ಮಟ್ಟದ ಜನನ-ಮರಣ ಘಟನೆ ಶೇ. 100ರಷ್ಟು ನೋಂದಣಿ ಮಾಡಲು ಪ್ರಮುಖ ಸಾರ್ವಜನಿಕ ಪ್ರದೇಶದಲ್ಲಿ ಮಾಹಿತಿ ಹಾಗೂ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಜನರಿಗೆ ಮಾಹಿತಿ ನೀಡಲು ಎಲ್ಲ ಗ್ರಾಪಂ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts